3 ಆನೆದಂತ ಇಟ್ಟುಕೊಂಡು ಬಂದವರಿಗೆ ತಕ್ಕ ಶಾಸ್ತಿ ಆಯ್ತು!

Elephant ivory
Published on

ಬೆಂಗಳೂರು: ಮೂರು ಆನೆ ದಂತಗಳನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಬಾಗಲಗುಂಟೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಮಾಗಡಿ ತಾಲೂಕಿನ ಕುದೂರು ಮೂಲದ ಲೋಕೇಶ್​ (44) ಮತ್ತು ಮಂಜುನಾಥ್​ ಪೂಜಾರಿ (28) ಬಂಧಿತರು. ಲೋಕೇಶ್​ ಆಟೋ ಚಾಲಕನಾಗಿದ್ದಾನೆ. ಮಂಜುನಾಥ್​ ಪೂಜಾರಿ ಮಾದಿಗೊಂಡನಹಳ್ಳಿಯ ಡಾಬಾದಲ್ಲಿ ಕೆಲಸ ಮಾಡಿಕೊಂಡಿದ್ದ. ಕೆಲ ದಿನಗಳ ಹಿಂದೆ ರಾಮನಗರದ ಕೃಷ್ಣ ಎಂಬಾತ ಲೋಕೇಶ್​ಗೆ ಪರಿಚಯವಾಗಿದ್ದ. ಆತ ತನ್ನ ಬಳಿಯಿದ್ದ ಆನೆದಂತಗಳನ್ನು 5 ಲಕ್ಷ ರೂ.ಗೆ ಮಾರಾಟ ಮಾಡಿಸುವಂತೆ ಲೋಕೇಶ್​ಗೆ ಹೇಳಿದ್ದ. ಹೀಗಾಗಿ, ಮಂಜುನಾಥ್​ ಪೂಜಾರಿಯನ್ನು ಸಂಪರ್ಕಿಸಿ ಆನೆದಂತ ಮಾರಾಟದ ವಿಚಾರವನ್ನು ತಿಳಿಸಿದ್ದ.

ಆನೆದಂತಕ್ಕೆ ಬೆಂಗಳೂರಿನಲ್ಲಿ ಹೆಚ್ಚಿನ ಬೇಡಿಕೆ ಇದೆ. ಅಲ್ಲಿ ಮಾರಾಟ ಮಾಡಿದರೆ ಹೆಚ್ಚಿನ ಹಣ ಸಿಗುತ್ತದೆ ಎಂದು ಲೋಕೇಶ್​ಗೆ ಮಂಜುನಾಥ್​ ಹೇಳಿದ್ದ. ಅದರಂತೆ ಅವರಿಬ್ಬರೂ ಶುಕ್ರವಾರ ಬೆಳಗ್ಗೆ 10 ಗಂಟೆಯಲ್ಲಿ ಎಂ.ಇ.ಐ. ಲೇಔಟ್​ ಮೈದಾನದ ಬಳಿ ಮಾರಾಟಕ್ಕೆ ಬಂದಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ 3 ಆನೆದಂತಗಳನ್ನು ವಶಕ್ಕೆ ಪಡೆಯಲಾಗಿದೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಪ್ರಮುಖ ಆರೋಪಿ ಕೃಷ್ಣ ಎಂಬಾತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net