ಪಟಾಕಿ ಸಿಡಿತದ ಶಬ್ದಕ್ಕೆ ಬೆದರಿದ ಗೋಪಾಲಸ್ವಾಮಿ; ದಸರಾ ಆನೆ ಕೋಪಕ್ಕೆ ದಿಕ್ಕಾಪಾಲಾದ ಜನ, ಶ್ರೀರಂಗಪಟ್ಟಣದ ಜಂಬೂಸವಾರಿ ರದ್ದು

1176247
Published on

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪಾರಂಪರಿಕ ದಸರಾ ಉದ್ಘಾಟನೆ ವೇಳೆ ಪಟಾಕಿ ಶಬ್ದದಿಂದ ಶ್ರೀ ಚಾಮುಂಡೇಶ್ವರಿ ಉತ್ಸವಮೂರ್ತಿಯನ್ನು ಹೊತ್ತಿದ್ದ ದಸರಾ ಆನೆ ‘ಗೋಪಾಲಸ್ವಾಮಿ’ ಬೆದರಿ, ಆಕ್ರೋಶದಿಂದ ಕೆಲಹೊತ್ತು ವಿಚಿತ್ರವಾಗಿ ವರ್ತಿಸಿದ ಕಾರಣಕ್ಕೆ ಸ್ಥಳದಲ್ಲಿ ಆತಂಕದ ಸ್ಥಿತಿ ನಿರ್ವಣವಾಗಿತ್ತು. ಆನೆಯ ವರ್ತನೆಯಿಂದ ಬೆಚ್ಚಿದ ಜನ ದಿಕ್ಕಾಪಾಲಾಗಿ ಓಡಿದರು. ಅಧಿಕಾರಿಗಳ ಸಮಯಪ್ರಜ್ಞೆಯಿಂದ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಲಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಜಂಬೂಸವಾರಿಯನ್ನು ರದ್ದುಗೊಳಿಸಲಾಯಿತು.

ದಸರಾ ಹಿನ್ನೆಲೆಯಲ್ಲಿ ಮೈಸೂರು ದಸರಾ ಗಜಪಡೆಯ ಸದಸ್ಯರಾದ ಗೋಪಾಲಸ್ವಾಮಿ ಮತ್ತು ಕಾವೇರಿ ಆನೆಗಳನ್ನು ಜಂಬೂಸವಾರಿಗೆಂದು ಶ್ರೀರಂಗಪಟ್ಟಣಕ್ಕೆ ಶನಿವಾರ ಕರೆತರಲಾಗಿತ್ತು. ಆನೆಗಳಿಗೆ ವಿಶೇಷವಾಗಿ ಅಲಂಕಾರ ಮಾಡಿ, ಸ್ವರ್ಣಲೇಪಿತ ಪಂಚಲೋಹದ 350 ಕೆ.ಜಿ. ತೂಕದ ಚಾಮುಂಡೇಶ್ವರಿ ಮೂರ್ತಿಯನ್ನು ಮರದ ಅಂಬಾರಿಯಲ್ಲಿ ಇರಿಸಿ ಗೋಪಾಲಸ್ವಾಮಿ ಆನೆ ಮೇಲೆ ಹೊರಿಸಲಾಗಿತ್ತು. ಮಧ್ಯಾಹ್ನ 3.10ಕ್ಕೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ನಾಡದೇವತೆಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ದಸರಾಗೆ ಚಾಲನೆ ನೀಡಿದರು. ಆನೆಗಳು ಕಿರಂಗೂರು ಮತ್ತು ಬಾಬುರಾಯನಕೊಪ್ಪಲಿಗೆ ಹೋಗಿ ವಾಪಸ್ ಬರುವುದು ವಾಡಿಕೆ. ಅದರಂತೆ ಈ ಬಾರಿಯೂ ಪುಷ್ಪಾರ್ಚನೆ ಬಳಿಕ ಮೆರವಣಿಗೆ ಹೊರಟಾಗ ಪಟಾಕಿ ಸಿಡಿಸಲಾಯಿತು. ಈ ಶಬ್ದದಿಂದ ಬೆಚ್ಚಿದ ‘ಗೋಪಾಲಸ್ವಾಮಿ’ ದಿಢೀರ್ ಹಿಂದಕ್ಕೆ ಬಂದು, ಒಂದು ಸುತ್ತು ಸುತ್ತಿತು. ಇದರಿಂದ ಅಕ್ಕಪಕ್ಕದಲ್ಲಿದ್ದ ಜನ ಹೆದರಿ ದಿಕ್ಕಾಪಾಲಾಗಿ ಓಡಿದರು. ಈ ವೇಳೆ ಕೆಲವರು ನೆಲಕ್ಕೆ ಬಿದ್ದರಾದರೂ ಯಾರಿಗೂ ತೊಂದರೆಯಾಗಲಿಲ್ಲ. ಕೂಡಲೇ ಎಚ್ಚೆತ್ತ ಆನೆ ವೈದ್ಯ ಡಾ.ರಮೇಶ್, ಸಹಾಯಕ ಅಕ್ರಂ ಮತ್ತು ಮಾವುತರು ಆನೆ ಕಾಲಿಗೆ ಸರಪಳಿ ಹಾಕಿ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಈ ವೇಳೆ ಪಕ್ಕದಲ್ಲೇ ಇದ್ದ ಕಾವೇರಿ ಆನೆ ಗೋಪಾಲಸ್ವಾಮಿಯನ್ನು ನಿಯಂತ್ರಣಕ್ಕೆ ತರಲು ಸಹಕರಿಸಿತು. ಈ ಮೂಲಕ ದೊಡ್ಡ ಅನಾಹುತ ತಪ್ಪಿತು. ಕೊನೆಗೆ ಪೊಲೀಸರು ಜನರನ್ನು ದೂರ ಕಳಿಸಿದರು.

ಬಹಳ ಸಮಯ ಆನೆಯನ್ನು ಸಮಾಧಾನಪಡಿಸಿ ನಂತರ ಎಲ್ಲರ ಒಪ್ಪಿಗೆ ಮೇರೆಗೆ ಜಂಬೂಸವಾರಿಯನ್ನು ರದ್ದುಗೊಳಿಸಲಾಯಿತು. ಆನೆ ಮೇಲಿದ್ದ ಚಾಮುಂಡೇಶ್ವರಿ ಮೂರ್ತಿಯನ್ನು ಬೆಳ್ಳಿ ರಥದಲ್ಲಿರಿಸಿ ಮೆರವಣಿಗೆ ಪೂರ್ಣಗೊಳಿಸಲಾಯಿತು. ಇತ್ತ ಆನೆಗಳನ್ನು ಮತ್ತೆ ಮೈಸೂರು ಕ್ಯಾಂಪ್​ಗೆ ಕಳುಹಿಸಲಾಯಿತು.

ತರಬೇತಿಯಲ್ಲೂ ಬೆಚ್ಚಿದ್ದ ಆನೆ: ಮೈಸೂರು ದಸರಾಗೆ ಕರೆತರಲಾಗಿದ್ದ ಆನೆಗಳಿಗೆ ಕುಶಾಲತೋಪು ತರಬೇತಿ ನೀಡುವ ವೇಳೆಯೇ ಗೋಪಾಲಸ್ವಾಮಿ ಆನೆ ಬೆಚ್ಚಿತ್ತು. ಆದರೆ, ಶ್ರೀರಂಗಪಟ್ಟಣಕ್ಕೆ ಬರುವ ಮುನ್ನ ದಿನವಾದ ಶುಕ್ರವಾರ ತರಬೇತಿ ವೇಳೆ ಬೆಚ್ಚಿರಲಿಲ್ಲ. ಈ ಹಿನ್ನೆಲೆಯಲ್ಲಿ ಅದನ್ನು ಕರೆತರಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net