

ರಾಮನಗರ: ಜಮೀನಿನಲ್ಲಿ ಅಕ್ರಮವಾಗಿ ಹಾಕಲಾಗಿದ್ದ ವಿದ್ಯುತ್ ಬೇಲಿಗೆ ಸಿಲುಕಿ ಮೃತಪಟ್ಟಿದ ಆನೆಯನ್ನು ಜಮೀನಿನಲ್ಲಿಯೇ ಗುಂಡಿ ತೋಡಿ ಮುಚ್ಚಿದ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.
ಜಿಲ್ಲೆಯ ಕನಕಪುರ ತಾಲೂಕಿನ ಸಂತೇ ಕೋಡಿಹಳ್ಳಿ ಗ್ರಾಮದಲ್ಲಿ ಮೂರು ದಿನಗಳ ಹಿಂದೆ ನಡೆದಿದ್ದು, ಸುಮಾರು 15 ವರ್ಷದ ಗಂಡಾನೆಯೊಂದು ಮೃತಪಟ್ಟಿದೆ. ಈ ಸಂಬಂಧ ಮೂವರು ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.
ಘಟನೆ ವಿವರ: ಸಂತೇಕೋಡಹಳ್ಳಿಯ ನಂಜೇಗೌಡ ಎಂಬುವರಿಗೆ ಸೇರಿದ್ದ ಜಮೀನನ್ನು ಪಿಳ್ಳೇಗೌಡ ಎಂಬುವರು ಬೋಗ್ಯಕ್ಕೆ ಪಡೆದುಕೊಂಡು ವ್ಯವಸಾಯ ಮಾಡುತ್ತಿದ್ದರು. ಆನೆಗಳ ಹಾವಳಿ ಹೆಚ್ಚಿದ ಕಾರಣ ಬೆಳೆಗಳ ರಕ್ಷಣೆಗಾಗಿ ಅಕ್ರಮವಾಗಿ ವಿದ್ಯುತ್ ಬೇಲಿ ಅಳವಡಿಸಿದ್ದ. ಕಳೆದ ಮೂರು ದಿನಗಳ ಹಿಂದೆ ವಿದ್ಯುತ್ ಸ್ಫರ್ಶಿಸಿ ಆನೆ ಮೃತಪಟ್ಟಿದೆ. ಈ ವೇಳೆ ಅರಣ್ಯ ಇಲಾಕೆಗೆ ಸಿಕ್ಕಿ ಬೀಳುವ ಭಯದಲ್ಲಿ ಜೆಸಿಬಿ ಮೂಲಕ ಆನೆಯನ್ನು ಸ್ಥಳದಲ್ಲಿಯೇ ಹೂಳಿ, ಇಡೀ ಪ್ರಕರಣವನ್ನು ಮುಚ್ಚಿ ಹಾಕುವ ಕೆಲಸ ಮಾಡಿದ್ದಾರೆ.
ಆದರೆ, ಬುಧವಾರ ಅರಣ್ಯ ಇಲಾಕೆಗೆ ಈ ಮಾಹಿತಿ ಲಭ್ಯವಾಗಿದ್ದು, ಸ್ಥಳ ಪರಿಶೀಲನೆ ನಡೆಸಿದಾಗ ಘಟನೆ ನಡೆದಿರುವುದು ಧೃಡಪಟ್ಟಿದೆ. ನಂತರ ಆನೆಯನ್ನು ಹೊರ ತೆಗೆದು ಶಪ ಪರೀಕ್ಷೆ ನಡೆಸಲಾಗಿದೆ. ವಿದ್ಯುತ್ ಶಾಕ್‌ನಿಂದ ಆನೆ ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ನಂತರ ದಂತವನ್ನು ಬೇರ್ಪಡಿಸಿ ಅದೇ ಜಾಗದಲ್ಲಿ ಆನೆ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.
ಈ ಸಂಬಂಧ ವನ್ಯ ಜೀವಿ ಸಂರಕ್ಷಣಾ ಕಾಯ್ದೆ 1972 ಅಡಿಯಲ್ಲಿ ನಂಜೇಗೌಡ, ಬೋಗ್ಯದಾರ ಪಿಳ್ಳೇಗೌಡ ಮತ್ತು ಗುಂಡಿ ತೆಗೆದು ಆನೆ ಹೂಳಿದ್ದ ಜೆಸಿಬಿ ಚಾಲಕನ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.
ಈ ವೇಳೆ ರಾಮನಗರ ಪ್ರಾದೇಶಿಕ ಅರಣ್ಯ ವಿಭಾಗದ ಡಿಸಿಎಫ್ ರಾಮಕೃಷ್ಣಪ್ಪ, ಕನಕಪುರ ಉಪವಿಭಾಗದ ಎಸಿಎಫ್ ವಿ.ಗಣೇಶ್, ಆರ್‌ಎಫ್‌ಓ ದಾಳೇಶ್ ಮುಂತಾದವರು ಇದ್ದರು.