ಕಾಡಾನೆ ದಾಳಿಯಿಂದ ಮಹಿಳೆ ಗಾಯ

8blrp2
Published on

ಬೇಲೂರು: ಕಾಡಾನೆ ದಾಳಿಗೆ ತಾಲೂಕಿನ ಸಿಂಗರವಳ್ಳಿ ಗ್ರಾಮದಲ್ಲಿ ಮಹಿಳೆಯೊಬ್ಬರು ಗಂಭೀರ ಗಾಯಗೊಂಡಿದ್ದಾರೆ.


ತಾಲೂಕಿನ ಬಿಕ್ಕೋಡು ಹೋಬಳಿ ಕೆಸಗೋಡು ಗ್ರಾಮ ಪಂಚಾಯಿತಿಗೆ ಸೇರಿದ ಸಿಂಗರವಳ್ಳಿ ಗ್ರಾಮದ ಮೇನಕಾ (60) ಗಾಯಗೊಂಡವರು. ಕೆಲ ದಿನಗಳ ಹಿಂದಷ್ಟೆ ಮತ್ತಾವರ ಗ್ರಾಮದಲ್ಲಿ ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಮಾಸುವ ಮುನ್ನವೇ ಇದೀಗ ಮಹಿಳೆ ಮೇಲೆ ಕಾಡಾನೆ ದಾಳಿ ಮಾಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.


ಮೇನಕಾ ಅವರು ಭಾನುವಾರ ತಮ್ಮ ಮನೆ ಹಿಂಭಾಗದಲ್ಲಿ ಕರಿಬೇವಿನ ಸೊಪ್ಪು ತರಲು ಹೋಗಿದ್ದರು. ಈ ವೇಳೆ ಅಲ್ಲಿಯೇ ಇದ್ದ ಕಾಡಾನೆ ಏಕಾಏಕಿ ದಾಳಿ ನಡೆಸಿತು. ಇದನ್ನು ಗಮನಿಸಿದ ಅಕ್ಕಪಕ್ಕದ ನಿವಾಸಿಗಳು ಜೋರಾಗಿ ಕೂಗಾಡಿದ್ದಾರೆ. ಇದರಿಂದ ಆನೆ ಸ್ಥಳದಿಂದ ಓಡಿ ಹೋಯಿತು. ದಾಳಿಯಿಂದ ಮೇನಕಾ ಅವರ ಕಾಲು ಮುರಿದಿದ್ದು, ತೊಡೆಯ ಭಾಗ, ಎಡಗೈಗೆ ಗಂಭೀರ ಗಾಯವಾಗಿದೆ. ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.


ಆಸ್ಪತ್ರೆಗೆ ಶಾಸಕ ಎಚ್.ಕೆ.ಸುರೇಶ್, ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net