

ಕುಂದಾಪುರ: ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕುಂದಾಪುರ ಮೇಲ್ಸೇತುವೆ ಕೊನೆಗೂ ವಾಹನ ಸಂಚಾರಕ್ಕೆ ಮುಕ್ತವಾಗಿತ್ತು. ಆದರೆ ಅಲ್ಲಿ ಇದೀಗ ಕೈ ಇಟ್ಟಲ್ಲೆಲ್ಲ ಕರೆಂಟ್ ಎಂಬಂತಾಗಿದ್ದು, ಕೂಡಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಅವಘಡ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
ಉಡುಪಿ ಜಿಲ್ಲೆಯ ಕುಂದಾಪುರದ ಶಾಸ್ತ್ರಿ ವೃತ್ತದ ಬಳಿ ಹಾದು ಹೋಗಿರುವ ಫ್ಲೈಓವರ್ನಲ್ಲಿ ಅಸಮರ್ಪಕ ಕಾಮಗಾರಿಯಿಂದಾಗಿ ವಿದ್ಯುತ್ ಪ್ರವಹಿಸಲಾರಂಭಿಸಿದೆ. ಫ್ಲೈವರ್ ಅಂಚಿನ ಗೋಡೆ ಮೇಲೆ ಟೆಸ್ಟರ್ ಇಟ್ಟು ಪರೀಕ್ಷಿಸಿದರೆ ವಿದ್ಯುತ್ ಪ್ರವಾಹ ಇರುವುದು ದೃಢಪಟ್ಟಿದೆ.
ದಾರಿದೀಪಕ್ಕೆ ನೀಡಲಾಗಿರುವ ವಿದ್ಯುತ್ ಸಂಪರ್ಕ ಸೋರಿಕೆ ಆಗುತ್ತಿರುವುದರಿಂದ ಮಳೆ ನೀರಿನ ಕಾರಣಕ್ಕೆ ಫ್ಲೈ ಓವರ್ನಲ್ಲಿ ವಿದ್ಯುತ್ ಪ್ರವಹಿಸುತ್ತಿದೆ. ಸಾರ್ವಜನಿಕರು ಈ ಬಗ್ಗೆ ಮೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದ್ದು, ಅವರು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ.
ಸಾರ್ವಜನಿಕರ ಸಮಯಪ್ರಜ್ಞೆಯಿಂದಾಗಿ ಭಾರಿ ಅವಘಡ ತಪ್ಪಿದ್ದು, ಕೂಡಲೇ ಸಮಸ್ಯೆಯನ್ನು ಬಗೆಹರಿಸುವುದಾಗಿ ನವಯುಗ ಕಂಪನಿಯ ಉಪ ವಿಭಾಗಾಧಿಕಾರಿ ಕೆ. ರಾಜು. ತಿಳಿಸಿದ್ದಾರೆ.