

ಚಿಕ್ಕೋಡಿ: ವಿದ್ಯುತ್ ಲೈನ್ ದುರಸ್ತಿ ವೇಳೆ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಪಟ್ಟಣದ ಹೊಸಪೇಟ ಗಲ್ಲಿಯಲ್ಲಿ ಭಾನುವಾರ ಸಂಭವಿಸಿದೆ. ಪಟ್ಟಣದ ದೇದರಕೋಡಿ ನಿವಾಸಿ ಸಿದ್ದರಾಮ ಕುಪವಾಡೆ (38) ಮೃತ ವ್ಯಕ್ತಿ. ಹೆಸ್ಕಾಂ ಸಿಬ್ಬಂದಿ ಕೆಳಗೆ ನಿಂತು ಸಿದ್ದರಾಮ ಕುಪವಾಡೆ ಎಂಬಾತನನ್ನು ವಿದ್ಯುತ್ ಕಂಬದ ಮೇಲೇರಿಸಿದ್ದ.
ಈ ವೇಳೆ ಏಕಾಏಕಿ ವಿದ್ಯುತ್ ಪ್ರವಹಿಸಿ ಆತ ಮೃತಪಟ್ಟಿದ್ದಾನೆ. ಮೃತ ಸಿದ್ದರಾಮ ಕುಪವಾಡೆ ಹೆಸ್ಕಾಂ ಗುತ್ತಿಗೆ ನೌಕರ ಅಲ್ಲ, ಖಾಸಗಿ ವ್ಯಕ್ತಿ ಎಂದು ಚಿಕ್ಕೋಡಿ ಹೆಸ್ಕಾಂ ಸೆಕ್ಷನ್ ಆಫೀಸರ್ ರಾಜು ಕುಂಬಾರ ತಿಳಿಸಿದ್ದಾರೆ.
ಲೈನ್‌ಮನ್ ತಾಹೀರ್ ದೇದಾರ್ ಸಿದ್ದರಾಮನನ್ನು ಕರೆದುಕೊಂಡು ಬಂದಿದ್ದ, ದುರಸ್ತಿ ಕಾರ್ಯ ಮಾಡುವುದಾಗಿ ತಿಳಿಸಿ, ಚಿಕ್ಕೋಡಿ ಗ್ರಾಮೀಣ ಭಾಗದ ಎಲ್‌ಸಿ ತೆಗೆದುಕೊಂಡಿದ್ದ. ಆದರೆ ಪಟ್ಟಣ ವಿಭಾಗದ ಎಲ್‌ಸಿ ತೆಗೆದುಕೊಂಡಿರಲಿಲ್ಲ. ಖಾಸಗಿ ವ್ಯಕ್ತಿಗಳನ್ನು ವಿದ್ಯುತ್ ಕಂಬದ ಮೇಲೆ ಹತ್ತಿಸಬೇಡಿ ಎಂದು ಲೈನ್‌ಮನ್‌ಗಳಿಗೆ ತಿಳಿಸಿದ್ದರೂ ಮತ್ತೆ ಅದನ್ನೇ ಮಾಡಿದ್ದಾರೆ. ಈ ಕುರಿತು ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ ಎಂದಿದ್ದಾರೆ.