

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಅಕ್ರಮ ಸಕ್ರಮ ಯೋಜನೆಯಡಿ ನೋಂದಣಿಗೊಂಡಿರುವ 27,071 ಕೃಷಿ ಪಂಪ್ ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು 260 ಕೋಟಿ ರೂ. ಖರ್ಚಾಗಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಕೃಷಿ ತೋಟಗಳಿಗೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದು, ದುರ್ಬಳಕೆ ಮಾಡಿಕೊಳ್ಳುವುದನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರವು ವಿಶೇಷ ಯೋಜನೆಯಡಿ ಕೃಷಿ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸುತ್ತಿದೆ. ಇದಕ್ಕೆ ಈ ಭಾಗದಲ್ಲಿ 28,600 ಕೃಷಿ ಪಂಪ್‌ಸೆಟ್‌ಗಳು ನೋಂದಣಿಯಾಗಿದ್ದು, ಈ ಪೈಕಿ 27071 ಕೃಷಿ ಪಂಪ್‌ಸೆಟ್‌ಗಳಿಗೆ ನಿಗದಿತ ಕಾಮಗಾರಿ (ಜು.24ರ ಅಂತ್ಯಕ್ಕೆ) ಮುಗಿಸಲಾಗಿದೆ. 1529 ಪಂಪ್‌ಸೆಟ್‌ಗಳ ಕೆಲಸ ಬಾಕಿ ಇದೆ ಎಂದು ಬೆಸ್ಕಾಂ ತಿಳಿಸಿದೆ.
ಅಕ್ರಮ ಸಕ್ರಮಕ್ಕೆ ಖರ್ಚು: ನೋಂದಣಿ ಪೈಕಿ 2802 ಸರ್ವೀಸ್ ಮೈನ್, 23678 ಲೈನ್ ವರ್ಕ್, 514 ತತ್ಕಾಲ್, 77 ಕಡೆ ಸ್ವಯಂ ಕಾಮಗಾರಿ ಸೇರಿ 27,071 ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕದ ಕೆಲಸ ನಡೆದಿದೆ. ಇದಕ್ಕೆ ಜಿಲ್ಲೆಯ ಚಿಕ್ಕಬಳ್ಳಾಪುರ ವಿಭಾಗ (ಬಾಗೇಪಲ್ಲಿ, ಗುಡಿಬಂಡೆ, ಗೌರಿಬಿದನೂರು ಮತ್ತು ಚಿಕ್ಕಬಳ್ಳಾಪುರ ತಾಲೂಕು) ವ್ಯಾಪ್ತಿಯಲ್ಲಿ 15058 ನೋಂದಣಿಯ ಪೈಕಿ 14077 ಕಾಮಗಾರಿಗಳಿಗೆ 154.12 ಕೋಟಿ ರೂ ಮತ್ತು ಚಿಂತಾಮಣಿ ವಿಭಾಗದ (ಶಿಡ್ಲಘಟ್ಟ ಮತ್ತು ಚಿಂತಾಮಣಿ ತಾಲೂಕು) ವ್ಯಾಪ್ತಿಯಲ್ಲಿ ನೋಂದಾಯಿತ 13542ರ ಪೈಕಿ 12,994 ಕಾಮಗಾರಿಗಳಿಗೆ 105.87 ಕೋಟಿ ರೂ. ಖರ್ಚಾಗಿದೆ.
ಸೌರವಿದ್ಯುತ್ ಸಹಾಯಧನ: ನೋಂದಣಿಗೊಂಡಿದ್ದರ ಪೈಕಿ 500 ಮೀಟರ್‌ಗಿಂತ ದೂರವಿರುವ ಕೃಷಿ ಪಂಪ್ ಸೆಟ್‌ಗಳಿಗೆ ಸೌರ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರ ಶೇ.30 ಮತ್ತು ರಾಜ್ಯ ಸರ್ಕಾರ ಶೇ.50ರಷ್ಟು ಸಹಾಯಧನ ನೀಡಿದರೆ, ಬಾಕಿ ಶೇ.20ರಷ್ಟು ಹಣವನ್ನು ರೈತರು ಭರಿಸಬೇಕಾಗುತ್ತದೆ.
ಕಡಿಮೆ ಎಚ್.ಪಿ. ಸಮಸ್ಯೆ: ಈ ಭಾಗದಲ್ಲಿ ಬಹುತೇಕ ರೈತರು ಮಳೆ ಮತ್ತು ಕೊಳವೆಬಾವಿ ಆಶ್ರಯಿಸಿ ಕೃಷಿ ಮಾಡುತ್ತಿದ್ದಾರೆ. ಯಾವುದೇ ಶಾಶ್ವತ ನೀರಾವರಿ ಸೌಲಭ್ಯ ಇಲ್ಲ. ಇದರ ನಡುವೆ ಸಾವಿರ ಅಡಿ ಕೊಳವೆ ಬಾವಿ ಕೊರೆದರೂ ಸಮರ್ಪಕವಾಗಿ ನೀರು ಸಿಗುವುದಿಲ್ಲ. ಇದಕ್ಕೆ 10 ಎಚ್.ಪಿ.ಗೂ ಹೆಚ್ಚಿನ ವಿದ್ಯುತ್ ಅಗತ್ಯವಿರುತ್ತದೆ. ಆದರೆ, ಸರ್ಕಾರವು 7.5 ಎಚ್.ಪಿ. ಒಳಗಿನ ವಿದ್ಯುತ್ ಸಂಪರ್ಕಕ್ಕೆ ಸಹಾಯಧನ ಒದಗಿಸುತ್ತಿದ್ದು ಇದರಿಂದ ಅನೇಕರು ಸೌಲಭ್ಯದಿಂದ ವಂಚಿತರಾಗಬೇಕಾಗಿದೆ.
ಸ್ವಯಂ ಕಾಮಗಾರಿ ನೋಂದಣಿ:ಜಿಲ್ಲೆಯಲ್ಲಿ 2023ನೇ ಸಾಲಿನ ಸೆ.22ರಿಂದ 2024ನೇ ಸಾಲಿನ ಜು.31ರ ಅಂತ್ಯಕ್ಕೆ ಸ್ವಯಂ ಕಾಮಗಾರಿ ನಿರ್ವಹಣೆಯಡಿ ವಿದ್ಯುತ್ ಸಂಪರ್ಕ ಪಡೆಯಲು 241 ಕೃಷಿ ಪಂಪ್‌ಸೆಟ್‌ಗಳು ನೋಂದಣಿಯಾಗಿವೆ.
ಅಕ್ರಮ-ಸಕ್ರಮ ಯೋಜನೆ:ರಾಜ್ಯದಲ್ಲಿ 2008ರಿಂದ 2023ರ ಸೆ.22 ರವರೆಗೆ ನೋಂದಾಯಿತ 4 ಲಕ್ಷ ಅಕ್ರಮ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ, ಸಕ್ರಮಗೊಳಿಸಲು ಸರ್ಕಾರವು ಬರೋಬ್ಬರಿ 6 ಸಾವಿರ ಕೋಟಿ ರೂ. ವೆಚ್ಚ ಮಾಡುತ್ತಿದೆ. ಈಗಾಗಲೇ ಹಲವೆಡೆ ಟೆಂಡರ್ ಆಹ್ವಾನಿಸಿ, ಕಾಮಗಾರಿ ನಿರ್ವಹಣೆಯ ಗುತ್ತಿಗೆ ನೀಡಲಾಗಿದೆ. 2023ರ ಸೆ.22ರ ಬಳಿಕ ನೋಂದಾಯಿತ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪರಿವರ್ತಕ ಸಹಿತ ವಿದ್ಯುತ್ ಸಂಪರ್ಕ ಒದಗಿಸಲಾಗುತ್ತಿದೆ. ಇದಕ್ಕೆ ರೈತರು ಸ್ವಯಂ ಕಾರ್ಯ ನಿರ್ವಹಣೆಯಡಿ ವೆಚ್ಚವನ್ನು ಭರಿಸಬೇಕು.
ಕುಸುಮ ಯೋಜನೆ ನೆರವು:ರೈತರ ನೀರಾವರಿ ಕೃಷಿ ಜಮೀನಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಕುಸುಮ ಯೋಜನೆ ಜಾರಿಗೆ ತಂದಿದ್ದು ಇದರ ಅನುಷ್ಠಾನದಿಂದ ರೈತರ ವಿದ್ಯುತ್ ಬೇಡಿಕೆಯ ಎಲ್ಲ ಸಮಸ್ಯೆಗಳು ಪರಿಹಾರವಾಗಲಿವೆ. ಜತೆಗೆ ಮುಂಬರುವ ದಿನಗಳಲ್ಲಿ ವಿದ್ಯುತ್ ಕೊರತೆ ಸಂಕಷ್ಟವೂ ದೂರವಾಗಲಿದೆ.