

ಕೊಳ್ಳೇಗಾಲ: ತಾಲೂಕಿನ ಕುಂತೂರು ಗ್ರಾಮದಲ್ಲಿ ಅಕ್ರಮವಾಗಿ ಕೊರೆಸಿರುವ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ನೀಡಲು ಕುಂತೂರು ಗ್ರಾ.ಪಂ ಅಧ್ಯಕ್ಷರು ಹಾಗೂ ಪಿಡಿಒ ಅನುಮತಿ ನೀಡಿರುವುದು ಖಂಡನೀಯ. ಈ ಕೂಡಲೇ ರದ್ದುಪಡಿಸದಿದ್ದರೆ ಹೋರಾಟ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ತಾಲೂಕು ಕಚೇರಿಗೆ ಮಂಗಳವಾರ ಭೇಟಿ ನೀಡಿದ ಕುಂತೂರು ಗ್ರಾಮದ ರೈತ ಮುಖಂಡ ನಂಜುಂಡಸ್ವಾಮಿ ಸೇರಿದಂತೆ ಇನ್ನಿತರ ಗ್ರಾಮಸ್ಥರು ಗ್ರೇಡ್ -2 ತಹಸೀಲ್ದಾರ್ ವಿ.ರವಿ ಅವರಿಗೆ ದೂರು ನೀಡಿದರು. ಕುಂತೂರು ಗ್ರಾಮದ ಲಿಂಗಾಯತ ಜನಾಂಗದ ಬೀದಿಗೆ ಕುಡಿಯುವ ನೀರು ಸರಬರಾಜು ಮಾಡುವ ಕೊಳವೆ ಬಾವಿಯ ಪಕ್ಕದ 5 ಮೀಟರ್ ದೂರದಲ್ಲಿ ಈ ಹಿಂದೆ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಕೊಳವೆ ಬಾವಿ ಕೊರೆಸಿದ್ದಾರೆ. ಇಲ್ಲಿಂದ ಬರುವ ನೀರನ್ನು ಸುಮಾರು 1.5 ಕಿ.ಮೀ. ದೂರದ ಕೃಷಿ ಚಟುವಟಿಕೆಗೆ ಬಳಸುತ್ತಿದ್ದರು.
ಆಗಾಗಿ ಈ ಬಗ್ಗೆ ಪಂಚಾಯಿತಿ ಕಚೇರಿಗೆ ಕಳೆದ ವರ್ಷ ಗ್ರಾಮಸ್ಥರು ದೂರು ನೀಡಲಾಗಿ ಕೊಳವೆ ಬಾವಿಯ ವಿದ್ಯುತ್ ಸಂಪರ್ಕವನ್ನು ಗ್ರಾ.ಪಂ ಅಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ವಿದ್ಯುತ್ ಇಲಾಖೆಗೆ ದೂರು ನೀಡಿದ್ದರು. ತಾವೇ ಖುದ್ದಾಗಿ ನಿಂತು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ಸಾರ್ವಜನಿಕರಿಗೆ ನೀರಿನ ತೊಂದರೆ ಆಗದಂತೆ ಕ್ರಮ ಕೈಗೊಂಡಿದ್ದರು.
ಆದರೀಗ, ಅದೇ ಅಧ್ಯಕ್ಷರು ಹಾಗೂ ಪಿಡಿಒ ಹಣದ ಆಸೆಗೆ ಹಾಗೂ ಅಧಿಕಾರದ ಆಸೆಗೆ, ಸಾರ್ವಜನಿಕ ಕುಡಿಯುವ ನೀರಿನ ಪಕ್ಕದಲ್ಲಿರುವ ಅಕ್ರಮ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲು ಅನುಮತಿ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಈ ತೀರ್ಮಾನ ಅನುಮಾನಕ್ಕೆ ಕಾರಣವಾಗಿದ್ದು. ಅಧ್ಯಕ್ಷರು ಇತ್ತೀಚೆಗೆ ತಮ್ಮ ಮೇಲೆ ಅವಿಶ್ವಾಸ ನಿರ್ಣಯ ಮಂಡಿಸಿದ ಸಂದರ್ಭದಲ್ಲಿ ತಮ್ಮ ಅಧಿಕಾರ ಉಳಿಸಿಕೊಳ್ಳಲು ಹಾಗೂ ಸದಸ್ಯರ ಬೆಂಬಲವನ್ನು ಅಕ್ರಮ ಬೋರ್‌ವೆಲ್ ಕಡೆಯವರಿಂದ ಪಡೆದು ಕೊಳ್ಳಲು ಸಾರ್ವಜನಿಕರ ಹಿತವನ್ನು ಬಲಿಕೊಟ್ಟಿದ್ದಾರೆ. ಈ ಬಗ್ಗೆ ತುರ್ತಾಗಿ ಕ್ರಮ ಕೈಗೊಳ್ಳದಿದ್ದರೆ ಗ್ರಾಮ ಪಂಚಾಯಿತಿ ಮುಂದೆ ಗ್ರಾಮಸ್ಥರು ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ದೂರಿನಲ್ಲಿ ಎಚ್ಚರಿಸಿದ್ದಾರೆ.
ಕುಂತೂರು ಗ್ರಾಮಸ್ಥರಾದ ರಾಜೇಶ್, ಬಸವಣ್ಣ, ಮಹೇಶ್, ಬಾಬು, ನಾಗೇಶ್, ಸುಬ್ಬಣ್ಣ, ಶಿವಪ್ರಸಾದ್, ರವಿವರ್ಮ, ಸಂಪತ್ತು ಇತರರು ಇದ್ದರು.