ವಿದ್ಯುತ್ ನೌಕರರು ಮುನ್ನೆಚ್ಚರಿಕೆ ವಹಿಸಿ

Published on

ವಿಜಯವಾಣಿ ಸುದ್ದಿಜಾಲ ಗೌರಿಬಿದನೂರು

ವಿದ್ಯುತ್ ನೌಕರರು ಕೆಲಸದ ಸಂದರ್ಭದಲ್ಲಿ ತಪ್ಪದೇ ಮುನ್ನೆಚ್ಚರಿಕೆ ಕ್ರಮ ಅನುಸರಿಸಬೇಕು ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪಿ.ಜಿ. ರಮೇಶ್ ಕುಮಾರ್ ಹೇಳಿದರು.

ನಗರದ ಬೆಂಗಳೂರು ವಿದ್ಯುತ್ ಸರಬರಾಜು ಉಪವಿಭಾಗ ಹಾಗೂ ಗೌರಿಬಿದನೂರು ಉಪವಿಭಾಗ ಕಚೇರಿ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹದಲ್ಲಿ ಮಾತನಾಡಿ, ಒಂದು ಸಣ್ಣ ತಪ್ಪು ಪ್ರಾಣವನ್ನೇ ಬಲಿ ಪಡೆಯುತ್ತದೆ. ಕೆಲಸದ ಸಮಯದಲ್ಲಿ ಸುರಕ್ಷತೆಗೆ ಆದ್ಯತೆ ನೀಡಬೇಕು. ಐಎಸ್‌ಐ ಪ್ರಮಾಣಿತ ಉಪಕರಣಗಳನ್ನೇ ಬಳಸಬೇಕು. ಪರವಾನಗಿ ಪಡೆದ ಗುತ್ತಿಗೆದಾರರಿಂದ ಮಾತ್ರ ವಿದ್ಯುತ್ ಕೆಲಸಗಳನ್ನು ಮಾಡಿಸಬೇಕು. ಸಾರ್ವಜನಿಕರು ಮನೆಗಳಲ್ಲಿ ವಿದ್ಯುತ್ ಸಂಪರ್ಕಕ್ಕೆ ಸೂಕ್ತ ಗ್ರೌಂಡಿಂಗ್ ವ್ಯವಸ್ಥೆ ಮಾಡಬೇಕು. ಇದರಿಂದ ಶಾಕ್ ಹೊಡೆಯುವುದಿಲ್ಲ. ಪ್ಲಗ್ ಪಾಯಿಂಟ್ ಮಕ್ಕಳ ಕೈಗೆ ಎಟುಕದಂತಿರಬೇಕು. ವಿದ್ಯುತ್ ಅವಘಡಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದರು.

ಜಿಲ್ಲಾ ವಿಭಾಗೀಯ ಕಚೇರಿ ಸಹಾಯ ಕಾರ್ಯನಿರ್ವಾಹಕ ಇಂಜಿನಿಯರ್ ಅನಿಲ್ ಕುಮಾರ್ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಿನವರು ಸುರಕ್ಷತಾ ಕ್ರಮ ಅನುಸರಿಸುವುದಿಲ್ಲ. ರೈತರು ಪಂಪ್‌ಸೆಟ್‌ಗಳ ರಿಪೇರಿ ಮಾಡುವುದು, ವಿದ್ಯುತ್ ಕಂಬ ಹತ್ತುವುದು ಅಪಾಯಕಾರಿ. ಮಳೆಗಾಲದಲ್ಲಿ ಹೆಚ್ಚು ಜಾಗೃತಿ ವಹಿಸಬೇಕು. ರೈತರು ಕಾಡು ಪ್ರಾಣಿಗಳಿಂದ ಬೆಳೆಗಳ ರಕ್ಷಣೆಗೆ ತಜ್ಞರ ಸಲಹೆ ಇಲ್ಲದೆ ವಿದ್ಯುತ್ ಬೇಲಿಗಳನ್ನು ಅಳವಡಿಸಬಾರದು ಎಂದರು.

ಎಇಇ ಪರಮೇಶ್ವರಪ್ಪ, ಜಿಲ್ಲಾ ಲೆಕ್ಕಾಧಿಕಾರಿ ಸಮಿಉಲ್ಲಾ, ಕೆಪಿಟಿಸಿಎಲ್ ಅಧಿಕಾರಿ ವಿಶ್ವನಾಥ್, ಪವರ್ ಮೆನ್‌ಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net