

ತುಮಕೂರು-: ಬೆಳ್ಳಂಬೆಳಗ್ಗೆ ಗ್ರಂಥಿಗೆ ಅಂಗಡಿ ಹಾಗೂ ಗೋದಾಮಿನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಸೋಮವಾರ ಬೆಳಗ್ಗೆ ನಗರದ ಮಂಡಿಪೇಟೆಯ ನೇತಾಜಿ ಟ್ರೇಡರ್ಸ್ ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡ ಪರಿಣಾಮ ಅಂಗಡಿ, ಗೋದಾಮಿನಲ್ಲಿದ್ದ ಪಟಾಕಿ, ಪೂಜೆ ಸಾಮಗ್ರಿಗಳು ಸೇರಿದಂತೆ ಇನ್ನಿತರೆ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.
ನಗರದ ಮಂಡಿಪೇಟೆಯಲ್ಲಿನ ಮೆಟ್ರೋ ಮುಂಭಾಗದ ನೇತಾಜಿ ಟ್ರೇಡರ್ಸ್ನಲ್ಲಿ ಮುಂಜಾನೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿದೆ. ಈ ಅಂಗಡಿಗೆ ಹೊಂದಿಕೊಂಡಂತೆ ಹಿಂಭಾಗದಲ್ಲಿ ಗೋದಾಮು ಸಹ ಇದ್ದು ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿದೆ. ಅಕ್ಕಪಕ್ಕದ ಅಂಗಡಿ ಮಳಿಗೆಗಳಿಗೂ ಆವರಿಸಿದ್ದು ಧಗಧಗನೆ ಹೊತ್ತಿ ಉರಿದಿದೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮದ ದಳದ ಸಿಬ್ಬಂದಿ ಧಾವಿಸಿದ್ದು ಮುಂಜಾನೆ 5.30ರಿಂದಲೇ ಬೆಂಕಿ ನಂದಿಸಲು ಮುಂದಾಗಿದ್ದಾರೆ. ಬೆಳಗ್ಗೆ 11 ಗಂಟೆಯಾದರೂ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲು ಹರಸಾಹಸಪಟ್ಟಿದ್ದು ಕಂಡುಬಂತು.
ಪಟಾಕಿ ಶಬ್ದದ ಆತಂಕ: ಈ ಅಂಗಡಿಯಲ್ಲಿ ಕೊಂಚ ಪ್ರಮಾಣದಲ್ಲಿ ಪಟಾಕಿ, ಗ್ರಂಥಿಗೆ, ಬಂಟಿಂಗ್ಸ್, ಧ್ವಜಗಳು ಸೇರಿದಂತೆ ಇನ್ನಿತರೆ ಸಾಮಗ್ರಿಗಳನ್ನು ಮಾರಾಟ ಮಾಡಲು ದಾಸ್ತಾನಿಡಲಾಗಿತ್ತು. ಬೆಂಕಿಗೆ ಪಟಾಕಿಗಳು ನಿರಂತರವಾಗಿ ಸ್ಫೋಟಗೊಳ್ಳುತ್ತಲೇ ಇದ್ದು, ಒಂದೇ ಸಮನೆ ಪಟಾಕಿ ಸಿಡಿದ್ದರಿಂದ ಜನರಲ್ಲಿ ಸಹಜವಾಗಿ ಆತಂಕ ಸೃಷ್ಟಿಸಿತ್ತು.
ಪಟಾಗಿ ಅಂಗಡಿ ಧಗಧಗನೆ ಹೊತ್ತಿ ಉರಿಯುತ್ತಿರುವುದರಿಂದ ಮಂಡಿಪೇಟೆ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ದಟ್ಟವಾದ ಹೊಗೆ ಆವರಿಸಿತ್ತು. ಬೆಂಕಿ ಕಾಣಿಸಿಕೊಂಡಿದೆ ಎಂಬ ಸುದ್ದಿ ತಿಳಿದ ಕೂಡಲೇ ಅಂಗಡಿ ಮಾಲೀಕ ಮೋಹನ್ಕುಮಾರ್ ಸ್ಥಳಕ್ಕೆ ಧಾವಿಸಿದರಾದರೂ ಅಷ್ಟರಲ್ಲಿ ಬೆಂಕಿ ಇಡೀ ಅಂಗಡಿಯನ್ನು ರಾಚಿತ್ತು. ಈ ಟನೆ ಮುಂಜಾನೆ ನಡೆದಿದ್ದರಿಂದ ಜನರ ಓಡಾಟ, ಕೂಲಿಕಾರ್ಮಿಕರು ಯಾರು ಇಲ್ಲದ ಕಾರಣ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಲಕ್ಷಾಂತರ ರೂ. ಬೆಲೆಯ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.
ಈ ಬೆಂಕಿ ಅವಘಡದಿಂದ ಯಾವುದೇ ರೀತಿಯ ಅನಾಹುತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮಂಡಿಪೇಟೆಯ ಎರಡು ಕಡೆಗಳಲ್ಲಿ ರಸ್ತೆ ಬಂದ್ ಮಾಡಿ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.
ಘಟನೆಯ ಸುದ್ದಿ ತಿಳಿದ ಕೂಡಲೇ ಶಾಸಕ ಜಿ.ಬಿ. ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಶಶಿಧರ್ ಹಾಗೂ ಠಾಣಾಧಿಕಾರಿ ಅಡವೀಶ್ ನೇತೃತ್ವದಲ್ಲಿ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಶ್ರಮಿಸಿದರು. ಐದಕ್ಕು ಹೆಚ್ಚು ಅಗ್ನಿಶಾಮಕ ವಾಹನಗಳನ್ನು ತರಿಸಲಾಗಿತ್ತು.