

ಬೆಳಗಾವಿ: ಕಿತ್ತೂರು ಕರ್ನಾಟಕದಲ್ಲಿಯೇ ಪ್ರಪ್ರಥಮ ಬಾರಿಗೆ ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಯಮಿತ (ಹೆಸ್ಕಾಂ) ವತಿಯಿಂದ ನಗರದಲ್ಲಿ ಎಲೆಕ್ಟ್ರಿಕ್ ಬೈಕ್‌ಗಳಿಗೆ ಉಚಿತ ಚಾರ್ಜಿಂಗ್ ಸೌಲಭ್ಯ ಕಲ್ಪಿಸಿದೆ.
ನಗರದಲ್ಲಿ ವಿದ್ಯುತ್ ಗ್ರಾಹಕರಿಗೆ ಅನುಕೂಲ, ವಾಯುಮಾಲಿನ್ಯ ಕಡಿಮೆ ಮಾಡಲು, ಎಲೆಕ್ಟ್ರಿಕ್ ವಾಹನಗಳ ಬಳಕೆ ಪ್ರೋತ್ಸಾಹಿಸುವ ಉದ್ದೇಶದಿಂದ ನೆಹರು ನಗರದ ಹೆಸ್ಕಾಂ ಕೇಂದ್ರ ಕಚೇರಿ ಆವರಣ, ರೈಲ್ವೆ ನಿಲ್ದಾಣ ಬಳಿ ಹೆಸ್ಕಾಂ ಕಚೇರಿ ಆವರಣದಲ್ಲಿ ದ್ವಿಚಕ್ರ ವಾಹನಗಳಿಗೆ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಉಚಿತ ಚಾರ್ಜಿಂಗ್ ಸೌಲಭ್ಯ ಕಲ್ಪಿಸಿದೆ.
ಪ್ರಸ್ತುತ ನಗರದಲ್ಲಿ ಸುಮಾರು 6 ಸಾವಿರ ಎಲೆಕ್ಟ್ರಿಕ್ ಬೈಕ್‌ಗಳು ಓಡಾಡುತ್ತಿವೆ. ಅಲ್ಲದೆ, ನಿತ್ಯ 10 ರಿಂದ 12 ಹೊಸ ಎಲೆಕ್ಟ್ರಿಕ್ ಬೈಕ್‌ಗಳು ರಸ್ತೆಗೆ ಇಳಿಯುತ್ತಿವೆ. ಆದರೆ, ನಗರದಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ಸೌಲಭ್ಯಗಳು ಇಲ್ಲದಿರುವ ಕಾರಣ ಜನರು ಎಲೆಕ್ಟ್ರಿಕ್ ಬೈಕ್‌ಗಳ ಬಳಕೆಗೆ ಹಿಂದೇಟು ಹಾಕುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ವಿದ್ಯುತ್ ಬಿಲ್ ಕಟ್ಟಲು ಹೆಸ್ಕಾಂ ಕಚೇರಿಗೆ ಬರುವವ ಗ್ರಾಹಕರು ತಮ್ಮ ಎಲೆಕ್ಟ್ರಿಕ್ ಬೈಕ್‌ಗಳನ್ನು ಉಚಿತವಾಗಿ ಚಾರ್ಜಿಂಗ್ ಮಾಡಿಕೊಳ್ಳಬಹುದು. ಹೆಸ್ಕಾಂ ಗ್ರಾಹಕರು ಅಲ್ಲದವರೂ ಚಾರ್ಜಿಂಗ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ.
ಪ್ರಾಯೋಗಿಕವಾಗಿ ನೆಹರು ನಗರ ಮತ್ತು ರೈಲ್ವೆ ನಿಲ್ದಾಣ ಪ್ರದೇಶದಲ್ಲಿ ಎಲೆಕ್ಟ್ರಿಕ್ ಬೈಕ್‌ಗಳಿಗೆ ಉಚಿತ ಚಾರ್ಜಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಜನರಿಂದ ಉತ್ತಮ ಸ್ಪಂದನೆ, ಪ್ರೋತ್ಸಾಹ ಸಿಕ್ಕರೆ ಮುಂಬರುವ ದಿನಗಳಲ್ಲಿ ನಗರದಲ್ಲಿರುವ ಎಲ್ಲ ಹೆಸ್ಕಾಂ ಕಚೇರಿಗಳ ಆವರಣದಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ಪಾಯಿಂಂಟ್ ತೆರೆಯಲಾಗುವುದು. ಹಾಗಾಗಿ, ಸಾರ್ವಜನಿಕರು ಹೆಸ್ಕಾಂ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೆಸ್ಕಾಂ ಇಂಜಿನಿಯರ್ ಎ.ಶಿಂಧೆ ತಿಳಿಸಿದ್ದಾರೆ.