

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ದಕ್ಷಿಣ ಕನ್ನಡ ಜಿಲ್ಲೆಯ, ಬೆಳ್ತಂಗಡಿ ತಾಲೂಕಿನ ದಟ್ಟ ಅಡವಿಯ ನಡುವೆ ಇರುವ ಸುಲ್ಕೇರಿ ಮೊಗ್ರು ಗ್ರಾಮದ ಪಂಜಾಲ, ಮಾಳಿಗೆ ಬೈಲಿನ 15 ಆದಿವಾಸಿ ಕುಟುಂಬ ಸೇರಿ ಒಟ್ಟು 28 ಕುಟುಂಬಗಳಿಗೆ ವಿದ್ಯುತ್ ಭಾಗ್ಯ ಲಭಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಜ.27ರಂದು ನಡೆದ ಸಭೆಯಲ್ಲಿ ಆದಿವಾಸಿಗಳು ನೆಲೆಸಿರುವ ಅರಣ್ಯ ಪ್ರದೇಶದ ವಸತಿ ಪ್ರದೇಶಗಳಿಗೆ ವಿದ್ಯುತ್, ನೀರು, ರಸ್ತೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಸೂಚಿಸಿದ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿ, ವಿದ್ಯುತ್ ಮಾರ್ಗ ಅಳವಡಿಕೆಗೆ ಅರಣ್ಯ ಭೂಮಿ ಪರಿವರ್ತನೆಗಾಗಿ ಪರಿವೇಶ್ ಪೋರ್ಟಲ್ನಲ್ಲಿ ಅರ್ಜಿ ಹಾಕಿಸಿ, ಅನುಮತಿ ಪಡೆಯಲು ಕ್ರಮ ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದ್ದರು.
ಬೆಳ್ತಂಗಡಿಯ ಕಾಂಗ್ರೆಸ್ ನಾಯಕ ರಕ್ಷಿತ್ ಶಿವರಾಂ ಸ್ವಯಂ ಆಸಕ್ತಿಯಿಂದ ದೆಹಲಿಗೆ ತೆರಳಿ, ಕೇಂದ್ರ ಸರ್ಕಾರದ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಇಲಾಖೆಗಳಿಗೆ ಹೋಗಿ ಶೀಘ್ರ ಅನುಮತಿ ದೊರಕಿಸಲು ಶ್ರಮಿಸಿದ್ದರು.
ಸರ್ಕಾರದ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಂಘಟಿತ ಪ್ರಯತ್ನದ ಫಲವಾಗಿ ಸ್ವಾತಂತ್ರೃ ಬಂದು 78 ವರ್ಷಗಳ ಬಳಿಕ ಪಂಜಾಲ, ಮಾಳಿಗೆಬೈಲಿನ 28 ಕುಟುಂಬಗಳಿಗೆ ವಿದ್ಯುತ್ ಭಾಗ್ಯ ಲಭಿಸಿದೆ. ಈ ಸಂಬಂಧ ರಾಜ್ಯದ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಭೆಯಲ್ಲಿ ಈ ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಅನುಮೋದನೆ ಲಭಿಸುವ ನಿರೀಕ್ಷೆ ಇದೆ.