ಸಾರ್ವಜನಿಕ ಬಳಕೆಗಿಲ್ಲ ವಿದ್ಯುತ್ ಚಿತಾಗಾರ

IMG-20250422-WA0022
Published on

* ಉದ್ಘಾಟನೆಗೊಂಡು 20 ತಿಂಗಳಾದರೂ ಮೂಲ ಸೌಲಭ್ಯ ಇಲ್ಲ

* ನಿರ್ವಹಣೆಗೆ ಟೆಂಡರ್ ಪ್ರಕ್ರಿಯೆ ಬಾಕಿ

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಗರದಲ್ಲಿ ನಿರ್ಮಾಣ ಮಾಡಿರುವ ವಿದ್ಯುತ್ ಚಿತಾಗಾರ ಉದ್ಘಾಟನೆಗೊಂಡು ಹಲವು ತಿಂಗಳೇ ಕಳೆದರೂ ಈವರೆಗೂ ಸಾರ್ವಜನಿಕ ಬಳಕೆಗೆ ಲಭ್ಯವಾಗಿಲ್ಲ.

ಹೌದು.. ನಗರದ ರಾಮಮ್ಮನ ಕೆರೆ ಬಳಿಯ ಹಿಂದು ರುದ್ರಭೂಮಿಯಲ್ಲಿ ಅಂದಿನ ಸಂಸದ ಡಿ.ಕೆ.ಸುರೇಶ್ ಅವರ ಅನುದಾನದ ಸುಮಾರು 2.65 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ವಿದ್ಯುತ್ ಚಿತಾಗಾರ ಲೋಕಾರ್ಪಣೆಯಾಗಿ 20 ತಿಂಗಳಾದರೂ ನಿರ್ವಹಣೆಯ ಟೆಂಡರ್ ಆಗದ ಕಾರಣ ಸಾರ್ವಜನಿಕರ ಉಪಯೋಗಕ್ಕೆ ಸಿಗದಂತಾಗಿದೆ.

2017-18ನೇ ಸಾಲಿನ ಸಂಸದರ ಅನುದಾನದಲ್ಲಿ ಜಿಲ್ಲೆಯ ನಾಲ್ಕು ತಾಲೂಕಿನ ನಗರ ಪ್ರದೇಶದಲ್ಲಿ ತಲಾ 2.25 ಕೋಟಿ ರೂ. ವೆಚ್ಚದಲ್ಲಿ ಚಿತಾಗಾರ ನಿರ್ಮಾಣಕ್ಕೆ ಕ್ರಿಯಾಯೋಜನೆ ರೂಪಿಸಲಾಗಿತ್ತು. ರಾಮಮ್ಮನ ಕೆರೆ ಬಳಿಯ ಸ್ಮಶಾನದಲ್ಲಿ ಚಿತಾಗಾರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಅದರಂತೆ ಈ ಕಾಮಗಾರಿಯನ್ನು ನಿರ್ಮಿತಿ ಕೇಂದ್ರದ ನಿರ್ವಹಣೆಯಲ್ಲಿ ಗುತ್ತಿಗೆದಾರರು ಮಾಡಿ ಮುಗಿಸಿದ್ದಾರೆ. ಕಟ್ಟಡ ನಿರ್ಮಾಣದ ಕಾಮಗಾರಿ ಜತೆಗೆ ವಿದ್ಯುತ್ ಯಂತ್ರೋಪಕರಣ ಅಳವಡಿಸಲಾಗಿದೆ. ಇದರೊಂದಿಗೆ ನಗರಸಭೆಯಿಂದ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಚಿತಾಗಾರದ ಸುತ್ತಲೂ ಕಾಂಪೌಂಡ್ ನಿರ್ಮಾಣ ಮಾಡಲಾಗಿದೆ. ಅಂತೆಯೇ ಉದ್ಘಾಟನೆಗೊಂಡು ಎರಡು ವರ್ಷ ಸಮೀಪಿಸುತ್ತಿದ್ದರೂ ಸೇವೆಗೆ ಲಭ್ಯವಾಗಿಲ್ಲ.

ಇಚ್ಛಾಶಕ್ತಿಯ ಕೊರತೆ?

ಚಿತಾಗಾರ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಹಿಂದೆಯೇ ನಗರಸಭೆಗೆ ಹಸ್ತಾಂತರ ಮಾಡಲಾಗಿತ್ತು. ಆದರೆ, ಈ ಹಿಂದೆ ಸುಮಾರು ತಿಂಗಳು ಚಿತಾಗಾರವನ್ನು ಉದ್ಘಾಟನೆ ಮಾಡದೆ ನಗರಸಭೆ ನಿರ್ಲಕ್ಷ್ಯ ವಹಿಸಿತ್ತು. ಈ ಬಗ್ಗೆ ಸಾರ್ವಜನಿಕರ ಅಸಮಾಧಾನ ಜೋರಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಸೂಚನೆಯಂತೆ, ಸ್ಥಳೀಯ ನಗರಸಭೆಯಿಂದ 2023ರ ಸೆ.15 ರಂದು ಉದ್ಘಾಡಿಸಲಾಯಿತು. ಅಂದಿನ ಸಂಸದ ಡಿ.ಕೆ. ಸುರೇಶ್ ಕೂಡ ಭಾಗಿಯಾಗಿದ್ದರು. ಉದ್ಘಾಟನೆಯಾದ ಒಂದು ತಿಂಗಳಿನಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಸಿ ಸಾರ್ವಜನಿಕ ಬಳಕೆಗೆ ನೀಡುತ್ತೇವೆ ಎಂಬುದು ಜಿಲ್ಲಾಡಳಿತ ಹಾಗೂ ನಗರಸಭೆಯ ವಾಗ್ದಾನವಾಗಿತ್ತು. ಆದರೆ, 20 ತಿಂಗಳು ಕಳೆದರೂ ಇನ್ನೂ ಸಾರ್ವಜನಿಕ ಸೇವೆಗೆ ಬಳಕೆಯಾಗುತ್ತಿಲ್ಲ.

ಸಾರ್ವಜನಿಕ ಬಳಕೆಗೆ ಹಸ್ತಾಂತರಿಸಲಿ

ಈ ಹಿಂದೆ ನಗರಸಭೆ ಆಡಳಿತದಲ್ಲಿ ಜೆಡಿಎಸ್ ಅಧಿಕಾರದಲ್ಲಿತ್ತು. ಇದರೊಂದಿಗೆ, ಜೆಡಿಎಸ್ ಶಾಸಕರು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಕಾಂಗ್ರೆಸ್ ಸಂಸದರ ಅನುದಾನದಲ್ಲಿ ಚಿತಾಗಾರ ನಿರ್ಮಾಣವಾಗಿದ್ದ ಹಿನ್ನೆಲೆಯಲ್ಲಿ ತೆರೆಮರೆಯ ರಾಜಕಾರಣವೂ ಚಿತಾಗಾರ ನನೆಗುದಿಗೆ ಬೀಳಲು ಕಾರಣವಾಯಿತು ಎಂಬುದಾಗಿ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು. ಆದರೆ, ಪ್ರಸುತ್ತ ಶಾಸಕರು ಕಾಂಗ್ರೆಸ್‌ನವರಾಗಿದ್ದು, ನಗರಸಭೆಯಲ್ಲೂ ಕಾಂಗ್ರೆಸ್ ಅಧಿಕಾರದಲ್ಲಿದೆ. ಈಗಲಾದರೂ ಸಂಬಂಧಿಸಿದವರು ಗಮನಹರಿಸಿ ಸಾರ್ವಜನಿಕ ಬಳಕೆಗೆ ಹಸ್ತಾಂತರಿಸುವ ಕಾರ್ಯವಾಗಲಿ ಎಂಬುದು ನಗರವಾಸಿಗಳ ಆಗ್ರಹವಾಗಿದೆ.

ತಿಂಗಳಲ್ಲಿ ಬಳಕೆಗೆ ಲಭ್ಯ!

ವಿದ್ಯುತ್ ಚಿತಾಗಾರ ಬಳಕೆಗೆ ಲಭ್ಯ ಇದ್ದರೂ ಒಂದೆಡೆ ಟೆಂಡರ್ ಪ್ರಕ್ರಿಯೆ ಆಗಿಲ್ಲ. ಮತ್ತೊಂದೆಡೆ ನೀರು, ಚರಂಡಿ, ಪಾರ್ಕಿಂಗ್, ವಿದ್ಯುತ್ ದೀಪ ಸೇರಿ ಮೂಲ ಸೌಲಭ್ಯ ಕಲ್ಪಿಸಬೇಕಾಗಿದೆ. ಈ ದಿಕ್ಕಿನಲ್ಲಿ ಸದಸ್ಯರು ಶ್ರಮಿಸುತ್ತಿದ್ದೇವೆ ಎಂದು ಹೈಟೆಕ್ ಚಿತಾಗಾರದ ಬಗ್ಗೆ ನಗರಸಭೆಯ ಅಧ್ಯಕ್ಷ ವಾಸಿಲ್ ಅಲಿಖಾನ್ ಪ್ರತಿಕ್ರಿಯಿಸಿದರು. ಚಿತಾಗಾರದ ನಿರ್ವಹಣೆಯನ್ನು ನಗರಸಭೆ ಹೊಂದಿದೆ. ಆದರೆ, ಇದನ್ನು ನಿರ್ವಹಣೆ ಮಾಡಲು ಜಿಲ್ಲಾಡಳಿತ ಟೆಂಡರ್ ಪ್ರಕ್ರಿಯೆ ಮಾಡಬೇಕಿದೆ. ಶೀಘ್ರವಾಗಿ ಈ ಕೆಲಸ ಮಾಡಿಸಲಾಗುವುದು. ಚಿತಾಗಾರದ ನಿರ್ವಹಣೆಯಲ್ಲಿ ವಿದ್ಯುತ್ ಬಿಲ್, ಭದ್ರತಾ ಸಿಬ್ಬಂದಿ, ಚಿತಾಗಾರದ ನಿರ್ವಹಣೆ ಮತ್ತು ಸಿಬ್ಬಂದಿಯ ವೇತನ ಸೇರಿಸಿ ಮಾಸಿಕ 1.50 ಲಕ್ಷ ರೂ. ವೆಚ್ಚವಾಗಲಿದೆ. ಇದನ್ನು ಭರಿಸಲು ನಾವು ಸಿದ್ಧರಿದ್ದೇವೆ. ಇನ್ನೊಂದು ತಿಂಗಳಲ್ಲಿ ಚಿತಾಗಾರ ಬಳಕೆಗೆ ಸಿದ್ಧವಾಗಲಿದೆ ಎಂದು ಭರವಸೆ ನೀಡಿದರು. ಕೋಟ್ಯಂತರ ಸಾರ್ವಜನಿಕರ ತೆರಿಗೆ ಹಣ ವ್ಯಯಿಸಿ ನಿರ್ಮಿಸಿರುವ ಈ ಚಿತಾಗಾರ ಬಳಕೆಗೆ ಸಿದ್ಧವಾಗಲಿ ಎಂಬುದೇ ಎಲ್ಲರ ಆಶಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net