

ಕೆ.ಆರ್.ಪೇಟೆ: ತಾಲೂಕು ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆಯಲ್ಲಿ ಕಳ್ಳಮತಗಳು ಸೇರಿದಂತೆ ನೂರಾರು ಮೃತ ವ್ಯಕ್ತಿಗಳ ಹೆಸರಿನಲ್ಲಿ ಮತ ಚಲಾಯಿಸಿ ಅಡ್ಡ ದಾರಿಯ ಮೂಲಕ ಗೆಲುವು ಸಾಧಿಸಿರುವ ತಾಲೂಕು ಘಟಕದ ಅಧ್ಯಕ್ಷ ವಿಜೇಂದ್ರ ಹಾಗೂ ಚುನಾವಣಾಧಿಕಾರಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ವೀರಶೈವ ಮಹಾಸಭಾದ ನಿರ್ಗಮಿತ ಅಧ್ಯಕ್ಷ ವಿ.ಎಸ್.ಧನಂಜಯ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದರು.
ವೀರಶೈವ ಲಿಂಗಾಯತ ಮಹಾಸಭಾದ ಚುನಾವಣೆಯಲ್ಲಿ ಶತಾಯ ಗತಾಯ ನನ್ನನ್ನು ಸೋಲಿಸಲೇಬೇಕೆಂದು ಸಮಾಜದ ಮುಖಂಡರು ನನ್ನ ವಿರುದ್ಧ ಇಲ್ಲ ಸಲ್ಲದ ಅಪಪ್ರಚಾರ ನಡೆಸಿ, ಕಳ್ಳ ವೋಟಿನ ಮೂಲಕ ಅಕ್ರಮ ನಡೆಸಿ, ಏಕಾಂಗಿಯಾಗಿ ಹೋರಾಟ ನಡೆಸಿದ್ದ ನನ್ನನ್ನು ಸೋಲಿಸಿ ಸಂಭ್ರಮಿಸಿದ್ದರು. ಆದರೆ ಚುನಾವಣೆಯಲ್ಲಿ ನಡೆದಿರುವುದೇ ಬೇರೆಯಾಗಿದ್ದು ವಕೀಲನಾಗಿ ಸಮಾಜದ ಸಂಘಟನೆಗೆ ನನ್ನ ಸ್ವಂತ ಹಣ ಖರ್ಚು ಮಾಡಿಕೊಂಡು ನನ್ನನ್ನೇ ಸಮಾಜಕ್ಕೆ ಸಮರ್ಪಣೆ ಮಾಡಿಕೊಂಡು ಕೆಲಸ ಮಾಡುತ್ತಿದ್ದೆ. ಕುತಂತ್ರ ಹಾಗೂ ಮೋಸದಿಂದ ನನ್ನನ್ನು ಸೋಲಿಸಿ ಸಂತೋಷಪಟ್ಟಿರುವುದು ವಿಷಾದನೀಯ ಸಂಗತಿಯಾಗಿದೆ. 90ಕ್ಕೂ ಹೆಚ್ಚಿನ ಮೃತರಾಗಿ ಒಂದೆರಡು ವರ್ಷಗಳೇ ಕಳೆದಿರುವ ವ್ಯಕ್ತಿಗಳ ಹೆಸರಿನ ಮತಗಳು ನನ್ನ ವಿರುದ್ಧವಾಗಿ ಚಲಾವಣೆಯಾಗಿವೆ. ವ್ಯವಸ್ಥಿತ ಒಳಸಂಚು ನಡೆದಿರುವುದು ದಾಖಲೆಗಳ ಸಮೇತವಾಗಿ ಬಯಲಾಗಿದೆ. ಆದ್ದರಿಂದ ಪರಸ್ಪರ ಶಾಮೀಲಾಗಿ ನನ್ನ ಸೋಲಿಗೆ ಕಾರಣರಾಗಿರುವ ಚುನಾವಣಾಧಿಕಾರಿ ಹಾಗೂ ವೀರಶೈವ ಮಹಾಸಭಾದ ನೂತನ ಅಧ್ಯಕ್ಷ ವಿಜೇಂದ್ರ ವಿರುದ್ಧ ಮುಂಬರುವ ಸೋಮವಾರದ ಒಳಗೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಮೈಸೂರಿನಲ್ಲಿ ಪೊಲೀಸ್ ಮಹಾನಿರ್ದೇಶಕರನ್ನು ಭೇಟಿ ಮಾಡಿ ದೂರು ಸಲ್ಲಿಸುವ ಜತೆಗೆ ಅಕ್ರಮವಾಗಿ ಚುನಾವಣೆ ನಡೆಸಿ ಒಳಸಂಚಿನ ಮೂಲಕ ಗೆಲುವು ಸಾಧಿಸಿರುವ ವಿಜೇಂದ್ರ ನೇತೃತ್ವದ ಆಡಳಿತ ಮಂಡಳಿಯನ್ನು ವಜಾ ಮಾಡುವವರೆಗೂ ನಿರಂತರವಾಗಿ ಹೋರಾಟ ನಡೆಸುವುದಾಗಿ ಧನಂಜಯ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ವಡ್ಡರಹಳ್ಳಿ ಶಿವಕುಮಾರ್, ಮಂಜುನಾಥ್, ಮಂಜು ಮತ್ತಿತರರಿದ್ದರು.