ರಾಮನಗರ ನಗರಸಭೆಗೆ 24ಕ್ಕೆ ಚುನಾವಣೆ

11_12_rama_Flag (cmc) 1
Published on

* ಕಾಂಗ್ರೆಸ್‌ನಲ್ಲಿ ಬಿರುಸಿನ ಚಟುವಟಿಕೆ

* ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳಾ ವರ್ಗಕ್ಕೆ ಮೀಸಲು

ರಾಮನಗರ

ಏಳು ತಿಂಗಳಿಂದ ನನೆಗುದಿಗೆ ಬಿದ್ದಿದ್ದ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕೊನೆಗೂ ಚುನಾವಣಾ ದಿನಾಂಕ ನಿಗದಿಯಾಗಿದೆ. ಅಳೆದು ತೂಗಿ ಚುನಾವಣಾಧಿಕಾರಿಯೂ ಆದ ಉಪವಿಭಾಗಾಧಿಕಾರಿ ಡಿ.24ರಂದು ನಿಗದಿ ಮಾಡಿದ್ದು, ಕಾಂಗ್ರೆಸ್‌ನಲ್ಲಿ ಬಿರುಸಿನ ಚಟುವಟಿಕೆ ಆರಂಭಗೊಂಡಿದೆ.

ಮೇ 8ರಂದು ಹಿಂದಿನ ಅಧ್ಯಕ್ಷರು ರಾಜೀನಾಮೆ ನೀಡಿದ್ದರು, ವಿವಿಧ ಕಾರಣಗಳಿಗಾಗಿ ಚುನಾವಣೆ ದಿನಾಂಕ ನಿಗದಿ ಆಗಿರಲೇ ಇಲ್ಲ. ಈಗ ಸೋಮವಾರ ಚುನಾವಣಾ ಕ್ಯಾಲೆಂಡರ್ ನಿಗದಿ ಮಾಡಿ ಆದೇಶ ಮಾಡಲಾಗಿದೆ.

ಪ್ರತಿಷ್ಠೆ ಕಣ:

ರಾಮನಗರ ನಗರಸಭೆ ಈಗ ಕಾಂಗ್ರೆಸ್‌ನೊಳಗೆ ಪ್ರತಿಷ್ಠೆ ಹುಟ್ಟುಹಾಕಿದೆ. ಶಾಸಕರು ಮತ್ತು ಕೆಲವು ಮುಖಂಡರ ನಡುವೆ ಇದಕ್ಕಾಗಿ ಮುಸುಕಿನ ಗುದ್ದಾಟ ಆರಂಭಗೊಂಡು ತಿಂಗಳುಗಳೇ ಕಳೆದಿವೆ. ಶಾಸಕರ ಸಮುದಾಯದ ಸದಸ್ಯರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಬೇಕೆನ್ನುವ ವಿಚಾರ ವಿವಾದದ ರೂಪ ಪಡೆದುಕೊಂಡಿತ್ತು. ಆದರೆ, ಇದಕ್ಕೆ ಪಕ್ಷದೊಳಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೆ.ಶೇಷಾದ್ರಿ (ಶಶಿ) ಅವರು ಆ ಸ್ಥಾನಕ್ಕೆ ಸೂಕ್ತ ಎಂದು ಹೆಚ್ಚಿನ ಮಂದಿ ಅಭಿಪ್ರಾಯಪಟ್ಟ ಹಿನ್ನೆಲೆಯಲ್ಲಿ ಆಯ್ಕೆ ಕಗ್ಗಂಟಾಗಿ ಪರಿಣಿಮಿಸುವಂತೆ ಮಾಡಿತು.

ಬಹುಮತವಿದ್ದರೂ ಕುತೂಹಲ!

ರಾಮನಗರ ನಗರಸಭೆಯಲ್ಲಿ ಕಾಂಗ್ರೆಸ್ ಬಹುಮತ ಹೊಂದಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳಾ ವರ್ಗಕ್ಕೆ ಮೀಸಲಾಗಿದೆ. ಇದರ ಜತೆಗೆ ಕಾಂಗ್ರೆಸ್‌ಗೆ ಸದಸ್ಯರ ಬಲವೂ ಇದೆ. ಆದರೆ, ಒಳಗೊಳಗೆ ನಡೆಯುತ್ತಿರುವ ಕಾದಾಟ ಕುತೂಹಲ ಮೂಡುವಂತೆ ಮಾಡಿದೆ. ರಾಮನಗರ ನಗರಸಭೆಯಲ್ಲಿ ಒಟ್ಟು 31 ಸದಸ್ಯರಿದ್ದು, ಇದರಲ್ಲಿ ಕಾಂಗ್ರೆಸ್ 20 ಸದಸ್ಯರನ್ನು ಹೊಂದಿದೆ. ಜೆಡಿಎಸ್ 11 ಸದಸ್ಯರಿದ್ದರೂ ನಗಣ್ಯವಾಗಿ ಕಾಣುವಂತೆಯೂ ಇಲ್ಲ. ಇವರಲ್ಲಿ ಕೆಲವರು ಯಾರನ್ನಾದರೂ ಬೆಂಬಲಿಸಿದರೆ ಇಡೀ ಚಿತ್ರಣವೇ ಬದಲಾಗಲಿದೆ.

ಕೆ.ಶೇಷಾದ್ರಿ ಅಧ್ಯಕ್ಷ?

ಅಧ್ಯಕ್ಷ ಸ್ಥಾನಕ್ಕಾಗಿ ಸದಸ್ಯರಾದ ದೌಲತ್ ಪಾಷಾ, ನಿಜಾಂ ಷರೀಪ್ ಮತ್ತು ಮುತ್ತುರಾಜ್ ನಡುವೆ ಪೈಪೋಟಿ ಇದೆ. ಈ ಮೂವರು ತಮ್ಮದೆ ಆದ ಪ್ರಭಾವ ಹೊಂದಿದ್ದು, ಅಧ್ಯಕ್ಷ ಸ್ಥಾನ ಹಿಡಿಯಲೇಬೇಕು ಎನ್ನುವ ಹಠಕ್ಕೆ ಬಿದ್ದಿದ್ದಾರೆ.

ಜತೆಗೆ ಸ್ಪರ್ಧೆಯಲ್ಲಿ ಇರುವ ಮತ್ತೊಂದು ಪ್ರಮುಖ ಹೆಸರು ಕೆ.ಶೇಷಾದ್ರಿ. ಇವರ ಆಯ್ಕೆಗೆ ಕಾಂಗ್ರೆಸ್‌ನಲ್ಲಿ ಒತ್ತಡ ಹೆಚ್ಚಿದೆ. ವಿಧಾನ ಪರಿಷತ್ ಸದಸ್ಯ ಸೇರಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಕೆ.ಶೇಷಾದ್ರಿ ಅವರಿಗೆ ಸದ್ಯದ ಮಟ್ಟಿಗೆ ಅವೆಲ್ಲವೂ ಮರೀಚಿಕೆಯೇ ಆಗಿದೆ. ಈ ಹಿನ್ನೆಲೆಯಲ್ಲಿ ಉತ್ತಮ ಆಡಳಿತಗಾರರೂ ಆಗಿರುವ ಅವರನ್ನು ಅಧ್ಯಕ್ಷರನ್ನಾಗಿ ಮಾಡಲೇಬೇಕು ಎನ್ನುವ ಹಠಕ್ಕೆ ಒಂದು ಬಣ ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಮೇಲೆ ಒತ್ತಡ ಹೇರಿದೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಈ ಹಿಂದೆ ಅಧಿಕಾರ ಪಡೆಯದವರಿಗೆ ಅಧಿಕಾರ ಹಂಚಿಕೆ ಆಗಲಿದೆ. ಒಟ್ಟಾರೆ ರಾಮನಗರ ನಗರಸಭೆಯಲ್ಲಿ ಯಾರ ಕೈ ಮೇಲಾಗಲಿದೆ ಎನ್ನುವುದಕ್ಕೆ ಡಿ.24ರಂದು ಸ್ಪಷ್ಟ ಚಿತ್ರಣ ದೊರೆಯಲಿದೆ.

ಚುನಾವಣಾ ವೇಳಾ ಪಟ್ಟಿ

ಡಿ.24ರಂದು ಬೆಳಗ್ಗೆ 11-12ಗಂಟೆವರೆಗೆ ನಾಮಪತ್ರ ಸಲ್ಲಿಸಲು ಅವಕಾಶ, 12-12.15ರವರೆಗೆ ನಾಮಪತ್ರ ಪರಿಶೀಲನೆ, 12.15-12.30 ನಾಮಪತ್ರ ವಾಪಸಾತಿಗೆ ಸಮಯ ನಿಗದಿ, ಅಗತ್ಯ ಬಿದ್ದರೆ 12.30ಕ್ಕೆ ಮತದಾನ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net