ಜನರ ಇಚ್ಛೆಯಂತೆ ನಾಯಕರ ಆಯ್ಕೆ: ಶಾಸಕ ರಾಜೇಶ್ ನಾಕ್ ಹೇಳಿಕೆ

Btw_Election
Published on

ಬಂಟ್ವಾಳ: ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರು ಯಾರನ್ನು ಬಯಸುತ್ತಾರೋ ಅವರೇ ನಾಯಕರಾಗುತ್ತಾರೆ. ಅಂತೆಯೇ ಈ ಬಾರಿಯ ಬಂಟ್ವಾಳದ ಸಹಕಾರಿ ಸಂಘದ ಚುನಾವಣೆಯಲ್ಲಿ ಈ ಮಾತು ನಿಜವಾಗಿದೆ ಎಂದು ಶಾಸಕ ರಾಜೇಶ್ ನಾಕ್ ಹೇಳಿದರು.

ಬಿಜೆಪಿ ಬಂಟ್ವಾಳ ಮಂಡಲ ವತಿಯಿಂದ ಬಿ.ಸಿ.ರೋಡ್‌ನಲ್ಲಿ ಭಾನುವಾರ ಸಹಕಾರಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದ ಜನರ ಆರ್ಥಿಕ ವ್ಯವಸ್ಥೆ ಸದೃಢವಾದರೆ ಪಕ್ಷವೂ ಗಟ್ಟಿಯಾಗುತ್ತದೆ. ಆ ನಿಟ್ಟಿನಲ್ಲಿ ಸಹಕಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪ್ರತಿಯೊಬ್ಬರಿಗೂ ಮಹತ್ವದ ಜವಾಬ್ದಾರಿಯಿದೆ ಎಂದು ತಿಳಿಸಿದರು.

ಸಂಸದ ಬ್ರಿಜೇಶ್ ಚೌಟ ಮಾತನಾಡಿ, ದ.ಕ. ಜಿಲ್ಲೆಯ ಸಹಕಾರಿ ಕ್ಷೇತ್ರ ಅಧ್ಯಯನ ಯೋಗ್ಯವಾಗಿದೆ. ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಸಹಕಾರಿ ಕ್ಷೇತ್ರದ ಅಭಿವೃದ್ದಿಗಾಗಿ ಸಹಕಾರಿ ಸಚಿವಾಲಯವನ್ನೇ ಆರಂಭಿಸಲಾಗಿದೆ. ಆದ್ಯತೆಯ ಕ್ಷೇತ್ರ ಯಾವುದು ಎನ್ನುವುದನ್ನು ಕೇಂದ್ರದ ಬಿಜೆಪಿ ಸರ್ಕಾರ ಗುರುತಿಸುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಸರಿಯಾದ ಫಲಾನುಭವಿಗಳಿಗೆ ತಲುಪಿಸುವ ಜವಾಬ್ದಾರಿ ಸಹಕಾರಿ ಸಂಘದ ನಿರ್ದೇಶಕರಿಗಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿದರು. ರಾಜ್ಯ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಸ್ಕಾೃಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ ಹಾಗೂ ಬಂಟ್ವಾಳ ಮಂಡಲ ಸಹಕಾರಿ ಪ್ರಕೋಷ್ಠದ ಸಂಚಾಲಕ ಜಯರಾಂ ರೈ ಅವರನ್ನು ಸನ್ಮಾನಿಸಲಾಯಿತು. ಬಂಟ್ವಾಳದ ಮಂಡಲದ ಅಧ್ಯಕ್ಷ ಚೆನ್ನಪ್ಪ ಆರ್.ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಹಕಾರಿ ಸಂಚಾಲಕ ರಾಜರಾಂ ಭಟ್, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಪ್ರೇಮಾನಂದ ಶೆಟ್ಟಿ, ಉಪಾಧ್ಯಕ್ಷೆ ಪೂಜಾ ಪೈ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net