

ಶಿಡ್ಲಘಟ್ಟ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-2029 ನೇ ಅವಧಿಯ ತಾಲ್ಲೂಕು ಮತ್ತು ಯೋಜನಾ ಶಾಖೆಗಳ ನಿರ್ದೇಶಕರ ಚುನಾವಣಾ ಪ್ರಕ್ರಿಯೆ ಆರಂಭವಾಗಿದ್ದು ಮೊದಲ ದಿನವೇ ನಾಮಪತ್ರ ಸಲ್ಲಿಕೆ ಕಾರ್ಯ ಚುರುಕಾಗಿತ್ತು. ತಾಲೂಕಿನ ವಿವಿಧ ಇಲಾಖೆಗಳ ವೃಂದ ಸಂಘಗಳ ನೌಕರರನ್ನು ಒಟ್ಟು 23 ಮತ ಕ್ಷೇತ್ರಗಳಲ್ಲಿ ವಿಂಗಡಿಸಿದ್ದು ತಾಲೂಕಿನಲ್ಲಿ 33 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ. ತಾಲೂಕಿನಲ್ಲಿ ಒಟ್ಟು ಸುಮಾರು 1166 ಮತದಾರರಿದ್ದು ಇದೇ ತಿಂಗಳ 18ರ ಸಂಜೆ 5 ಗಂಟೆವರೆಗೆ ನಾಮಪತ್ರ ಸಲ್ಲಿಸಲು ತಾಲೂಕು ಸರ್ಕಾರಿ ನೌಕರರ ಭವನದಲ್ಲಿ ಅವಕಾಶವಿದೆ ಎಂದು ಚುನಾವಣಾಧಿಕಾರಿ ಬೈರಾರೆಡ್ಡಿ ತಿಳಿಸಿದ್ದಾರೆ.
ಅ.19ರಂದು ನಾಮಪತ್ರ ಪರಿಶೀಲನೆ, ಅಭ್ಯರ್ಥಿಗಳ ಹೆಸರು ಪ್ರಕಟಣೆ, 21ರವರೆಗೆ ಉಮೇದುವಾರಿಕೆ ವಾಪಸ್ ಪಡೆಯಲು ಅವಕಾಶವಿದ್ದು, ಅಂದೇ ಸಂಜೆ ಕಣದಲ್ಲಿ ಉಳಿದಿರುವ ಅಂತಿಮ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುವುದು. ಅಗತ್ಯವಿದ್ದಲ್ಲಿ 28ರಂದು ಬೆಳಗ್ಗೆ 9ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದ್ದು, ಮತ ಎಣಿಕೆ ನಂತರ ಫಲಿತಾಂಶ ಪ್ರಕಟಿಸಲಾಗುವುದು ತಿಳಿಸಿದ್ದಾರೆ.
ಮತದಾರರ ವಿವರ: ಪ್ರಾಥಮಿಕ ಶಿಕ್ಷಣ ಇಲಾಖೆಯಲ್ಲಿ 583, ಪ್ರೌಢಶಾಲಾ ಶಿಕ್ಷಣ-123, ಆರೋಗ್ಯ ಇಲಾಖೆ-87, ಕಂದಾಯ ಇಲಾಖೆ-60, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ-52, ಪಶುಪಾಲನಾ ಇಲಾಖೆ-40, ನ್ಯಾಯಾಂಗ ಇಲಾಖೆ-34, ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆ-34, ಸಮಾಜಕಲ್ಯಾಣ ಇಲಾಖೆ-33 ಮತದಾರರೂ ಸೇರಿ ಒಟ್ಟು 1166 ಮತದಾರರಿದ್ದಾರೆ.
ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ ಮಾತನಾಡಿ, ಕಳೆದ ಅವಧಿಯಲ್ಲಿ ಸರ್ಕಾರಿ ನೌಕರರ ಎಲ್ಲ ಸಮಸ್ಯೆಗಳಿಗೂ ಸಕಾರಾತ್ಮಕವಾಗಿ ಸ್ಪಂದಿಸಲಾಗಿದ್ದು, ಯಾವುದೇ ನೌಕರರ ಸಮಸ್ಯೆಗಳು ಉಳಿದಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಎಲ್ಲ 33 ಸ್ಥಾನಗಳಿಗೂ ಬಹುತೇಕ ಅವಿರೋಧ ಆಯ್ಕೆಯಾಗುವ ನಿರೀಕ್ಷೆ ಇದೆ. ಈ ಮೂಲಕ ತಾಲೂಕು ಸಂಘದ ಘಟಕವು ರಾಜ್ಯದಲ್ಲಿಯೇ ಮಾದರಿಯಾಗಲಿದೆ ಎಂದರು.
ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಲ್.ವಿ.ವೆಂಕಟರೆಡ್ಡಿ ಮಾತನಾಡಿ, ಪ್ರೌಢಶಾಲಾ ಶಿಕ್ಷಣ ಕ್ಷೇತ್ರದಿಂದ ಇಬ್ಬರು ಶಿಕ್ಷಕರು ನಾಮಪತ್ರ ಸಲ್ಲಿಸಲು ತೀರ್ಮಾನಿಸಲಾಗಿದೆ. ಪ್ರೌಢಶಾಲಾ ಶಿಕ್ಷಣ ಮತಕ್ಷೇತ್ರಕ್ಕೆ ಅವಿರೋಧ ಆಯ್ಕೆ ಮಾಡಲು ತೀರ್ಮಾನಿಸಲಾಗಿದೆ ಎಂದರು.
ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಕಳೆದ ಅವಧಿಯಲ್ಲಿನ ಕಾರ್ಯಕಾರಿ ಸಮಿತಿಯು ಕೆ.ಎನ್.ಸುಬ್ಬಾರೆಡ್ಡಿ ಅಧ್ಯಕ್ಷತೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ್ದು ಈ ಅವಧಿಯಲ್ಲಿಯೂ ಸೇವಾಮನೋಭಾವವುಳ್ಳ ಉತ್ತಮ ಕಾರ್ಯಕಾರಿಸಮಿತಿಯು ಅಸ್ತಿತ್ವಕ್ಕೆ ಬರಲಿದೆ. ಸರ್ಕಾರಿ ನೌಕರರ ಸಮಸ್ಯೆಗಳಿಗೆ ಸಂಘವು ದನಿಯಾಗಿ ನಿಲ್ಲಲಿದೆ ಎಂದರು.
ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಖಜಾಂಚಿ ಜಿ.ಕೆ.ಗೋಪಾಲಕೃಷ್ಣ, ತಾಲ್ಲೂಕು ಸಂಘದ ಉಪಾಧ್ಯಕ್ಷ ಎಂ.ಕೆ.ಸಿದ್ಧರಾಜು, ಸಹಕಾರ್ಯದರ್ಶಿ ಎಂ.ಶಿವಕುಮಾರ್, ಬಿಇಒ ಕಚೇರಿಯ ಮಧು, ಶಿಕ್ಷಕರಾದ ಇ. ಶಂಕರಪ್ಪ, ಅಮರನಾಥ್, ಜಗದೀಶ್, ಶ್ರೀನಿವಾಸರೆಡ್ಡಿ, ಎನ್.ಮೂರ್ತಿ ಹಾಜರಿದ್ದರು.
ಹಲವರಿಂದ ಉಮೇದುವಾರಿಕೆ
ನಾಮಪತ್ರ ಸಲ್ಲಿಕೆಗೆ ಮೊದಲ ದಿನವಾದ ಬುಧವಾರ ಆರೋಗ್ಯ ಇಲಾಖೆ ಮತಕ್ಷೇತ್ರದಿಂದ ಸಾರ್ವಜನಿಕ ಆಸ್ಪತ್ರೆಯ ದೇವರಾಜು, ಟಿ.ಟಿ.ನರಸಿಂಹಪ್ಪ, ಅಕ್ಕಲರೆಡ್ಡಿ, ಲಲಿತಮ್ಮ, ರಹಮತ್ ಉಲ್ಲಾ, ಕೃಷಿಇಲಾಖೆ ಮತಕ್ಷೇತ್ರದಿಂದ ರವಿ, ಪ್ರಾಥಮಿಕ ಶಿಕ್ಷಣ ಮತಕ್ಷೇತ್ರದಿಂದ ಮುಜಾಫಿರ್, ಪ್ರೌಢಶಾಲಾ ಶಿಕ್ಷಣ ಮತಕ್ಷೇತ್ರದಿಂದ ಮಳಮಾಚನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ವಿ.ಬೈರಾರೆಡ್ಡಿ, ದೊಡ್ಡತೇಕಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಸಿ.ಕೆ.ಹರೀಶ್‌ಬಾಬು, ಲೋಕೋಪಯೋಗಿ ಇಲಾಖೆ ಮತಕ್ಷೇತ್ರದಿಂದ ಪದ್ಮಾವತಮ್ಮ, ಭೂಮಾಪನಾ, ಕಂದಾಯ ಮತ್ತು ಭೂದಾಖಲೆ, ಉಪನೊಂದಣಾಧಿಕಾರಿ ಇಲಾಖೆ ಮತಕ್ಷೇತ್ರದಿಂದ ಜಿ.ಡಿ.ವಸಂತಕುಮಾರ್, ನಾಮಪತ್ರ ಸಲ್ಲಿಸಿದರು.