ಪಿಎಲ್‌ಡಿ ಬ್ಯಾಂಕಿಗೆ ನಿರ್ದೇಶಕರ ಆಯ್ಕೆ

ಪಿಎಲ್‌ಡಿ ಬ್ಯಾಂಕಿಗೆ ನಿರ್ದೇಶಕರ ಆಯ್ಕೆ
Published on

ತಿ.ನರಸೀಪುರ: ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ನಿರ್ದೇಶಕರ ಆಯ್ಕೆಗೆ ಭಾನುವಾರ ನಡೆದ ಚುನಾವಣೆಯಲ್ಲಿ 5 ನಿರ್ದೇಶಕರು ಜಯಗಳಿಸಿದರೆ, ಎರಡು ಕ್ಷೇತ್ರಗಳ ಚುನಾವಣಾ ಫಲಿತಾಂಶವನ್ನು ತಡೆಹಿಡಿಯಲಾಯಿತು.

14 ಸದಸ್ಯರ ನಾಮಬಲ ಹೊಂದಿರುವ ಗ್ರಾಮೀಣಾಭಿವೃದ್ಧಿ ಬ್ಯಾಂಕಿನ 7 ಕ್ಷೇತ್ರಗಳಿಗೆ ಭಾನುವಾರ ಪಟ್ಟಣದ ಬಿಇಒ ಕಚೇರಿ ಹಿಂಭಾಗದಲ್ಲಿರುವ ಬಾಲಕಿಯರ ಪ್ರೌಢಶಾಲೆಯಲ್ಲಿ ಚುನಾವಣೆ ನಡೆಯಿತು.

ಸಾಲಗಾರರ ಕ್ಷೇತ್ರದಿಂದ 6 ನಿರ್ದೇಶಕರು ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ಒಂದು ನಿರ್ದೇಶಕರ ಸ್ಥಾನದ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಬೆಳಗ್ಗೆಯಿಂದಲೇ ಬ್ಯಾಂಕಿನ ರೈತ ಸದಸ್ಯರು ಉತ್ಸಾಹದಿಂದಲೇ ಮತ ಚಲಾಯಿಸಿದರು. ಸಂಜೆ 4 ಗಂಟೆಯ ನಂತರ ಮತ ಎಣಿಕೆ ನಡೆದು 7 ಕ್ಷೇತ್ರಗಳ ಪೈಕಿ 5 ಕ್ಷೇತ್ರದ ಚುನಾವಣಾ ಫಲಿತಾಂಶ ಪ್ರಕಟಿಸಲಾಯಿತು.

ಬನ್ನೂರು ಸಾಲಗಾರರ ಕ್ಷೇತ್ರದಿಂದ ಸಾಮಾನ್ಯ ವರ್ಗಕ್ಕೆ ಮೀಸಲಾದ ಒಂದು ಸ್ಥಾನ ಹಾಗೂ ಸಾಲಗಾರರಲ್ಲದ ಒಂದು ಕ್ಷೇತ್ರದ ಚುನಾವಣಾ ಫಲಿತಾಂಶವನ್ನು ನ್ಯಾಯಾಲಯದ ಆದೇಶದ ಮೇರೆಗೆ ತಡೆ ಹಿಡಿಯಲಾಯಿತು.

ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಸಾಲಗಾರರ ಕ್ಷೇತ್ರದಿಂದ ಆಯ್ಕೆ ಬಯಸಿದ್ದ ಹೆಮ್ಮಿಗೆ ಗ್ರಾಮದ ಸೋಮಣ್ಣ ತಮ್ಮ ಪ್ರತಿ ಸ್ಪರ್ಧಿ ಪ್ರಭುಸ್ವಾಮಿ ಅವರ ವಿರುದ್ಧ ಜಯಗಳಿಸಿದರೆ, ಸೋಸಲೆ ಕ್ಷೇತ್ರದಿಂದ ಪರಿಶಿಷ್ಟ ಜಾತಿಗೆ ಮೀಸಲಾದ ಸ್ಥಾನಕ್ಕೆ ಲಿಂಗಪ್ಪಾಜಿ 25 ಮತ ಪಡೆದು ಎರಡನೇ ಬಾರಿಗೆ ಗೆಲುವು ದಾಖಲಿಸಿದರೆ, ಪ್ರತಿಸ್ಪರ್ಧಿಗಳಾದ ಪರಶಿವಮೂರ್ತಿ ಹಾಗೂ ಚಿಕ್ಕತಾಯಮ್ಮ ತಲಾ 13ಮತ ಪಡೆದು ಪರಾಭವಗೊಂಡರು.

ತಲಕಾಡು ಹಿಂದುಳಿದ ಪ್ರವರ್ಗ ಎ ವರ್ಗಕ್ಕೆ ಮೀಸಲಾದ ಕ್ಷೇತ್ರದಿಂದ ವಿದ್ಯೋದಯ ಕಾಲೇಜಿನ ನಿವೃತ್ತ ಆಡಳಿತಾಧಿಕಾರಿ ಎಸ್.ಎಂ.ಶಿವನಂಜಪ್ಪ ಅವರ ಪುತ್ರ ಎಸ್.ಮಹೇಶ್ 22 ಮತ ಪಡೆದು ಜಯಗಳಿಸಿದರೆ, 10 ಮತ ಪಡೆದ ರುದ್ರಸ್ವಾಮಿ ಸೋಲನುಭವಿಸಿದರು. ಕೊತ್ತೇಗಾಲ ಕ್ಷೇತ್ರದಿಂದ ಸಾಮಾನ್ಯ ವರ್ಗಕ್ಕೆ ಮೀಸಲಾದ ಸ್ಥಾನಕ್ಕೆ ಮಾಜಿ ಅಧ್ಯಕ್ಷ ಮಾಡ್ರಹಳ್ಳಿ ಎಂ.ಎಸ್.ಶಿವಮೂರ್ತಿ 48 ಮತ ಪಡೆದು ಜಯಗಳಿಸಿದರೆ ಎದುರಾಳಿ ಸ್ಪರ್ಧಿ ಮಂಜುನಾಥ್ ಕೇವಲ 2 ಮತ ಪಡೆದು ಹೀನಾಯವಾಗಿ ಸೋಲನುಭವಿಸಿದರು.

ಯಾಚೇನಹಳ್ಳಿ ಕ್ಷೇತ್ರದಿಂದ ಸಾಮಾನ್ಯ ವರ್ಗಕ್ಕೆ ಮೀಸಲಾದ ಸ್ಥಾನಕ್ಕೆ ತುರುಗನೂರು ಟಿ.ಎಸ್.ಪ್ರಸನ್ನ 38 ಮತ ಪಡೆದು ಜಯಗಳಿಸಿದರು.

7 ಸಾಲಗಾರರ ಕ್ಷೇತ್ರಗಳ ಪೈಕಿ ಕುಪ್ಯ ಕ್ಷೇತ್ರದಿಂದ ಹಾಲಿ ಅಧ್ಯಕ್ಷ ಕೆಂಪಯ್ಯನಹುಂಡಿ ಮಹದೇವಣ್ಣ, ಸೋಮನಾಥಪುರ ಕ್ಷೇತ್ರದಿಂದ ವಡ್ಗಲ್ಲೇಗೌಡ ಉ: ವಜ್ರೇಗೌಡ, ಅತ್ತಹಳ್ಳಿ ಕ್ಷೇತ್ರದಿಂದ ಎ.ಎಂ.ಮಹದೇವ, ಚಿದರವಳ್ಳಿಕ್ಷೇತ್ರದಿಂದ ಎನ್.ಎನ್.ಮಹದೇವಸ್ವಾಮಿ, ಮೂಗೂರು ಕ್ಷೇತ್ರದಿಂದ ರಾಜಮಣಿ, ಕಸಬಾ ಕ್ಷೇತ್ರದಿಂದ ಎಂ.ನಾಗರತ್ನ ಹಾಗೂ ದೊಡ್ಡೇಬಾಗಿಲು ಕ್ಷೇತ್ರದಿಂದ ಎಂ.ಮಲ್ಲಿಕಾರ್ಜುನ ಸ್ವಾಮಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಚುನಾವಣಾಧಿಕಾರಿ ಎಚ್.ಎಸ್.ಮನೋಜ್ ಕುಮಾರ್, ಸಹಾಯಕ ಚುನಾವಣಾಧಿಕಾರಿ ವಿಮಲ್ ಕುಮಾರ್ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಬ್ಯಾಂಕಿನ ಹಾಲಿ ಅಧ್ಯಕ್ಷ ಕೆಂಪಯ್ಯನಹುಂಡಿ ಮಹದೇವಣ್ಣ, ನೂತನ ನಿರ್ದೇಶಕ ದೊಡ್ಡೇಬಾಗಿಲು ಮಲ್ಲಿಕಾರ್ಜುನಸ್ವಾಮಿ, ಮಹದೇವಸ್ವಾಮಿ,ವಾಟಾಳು ನಾಗೇಶ್, ಶಂಭುದೇವನಪುರ ರಮೇಶ್, ಕುಮಾರ್, ಪುರಸಭೆ ಸದಸ್ಯ ಎಸ್.ಕೆ.ಕಿರಣ್, ಪರಮೇಶ್, ಹೆಮ್ಮಿಗೆ ಶೇಷಾದ್ರಿ, ಮಾವಿನಹಳ್ಳಿ ಪುಟ್ಟಸ್ವಾಮಿ, ಗೌಡ್ರ ರಾಜಶೇಖರ್, ಅಕ್ಕೂರು ಗುರುಮೂರ್ತಿ, ಕೆ.ಎಂ.ಶಾಂತರಾಜು, ಚೌಹಳ್ಳಿ ಮಹದೇವಪ್ಪ, ಕು.ಶಿ ಬೃಂಗೀಶ್, ಪುಟ್ಟಬುದ್ದಿ, ಪ್ರಭುಸ್ವಾಮಿ, ಹಿರಿಯೂರು ನವೀನ, ಬಸವರಾಜು, ಮಾಡ್ರಹಳ್ಳಿ ನಾಗೇಂದ್ರ, ಮರಿಸ್ವಾಮಿ, ಎಂ.ಆರ್.ಮಹದೇವಸ್ವಾಮಿ, ಶಿವಣ್ಣ(ದೇವ್ರ) ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net