

| ಪ್ರಕಾಶ್ ಮಂಜೇಶ್ವರ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣಾ ಚಟುವಟಿಕೆಗಳು ಗರಿಗೆದರಿದ್ದು, ಕಾರ್ಯಕ್ರಮಗಳ ಆಯೋಜನೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮುಂಚೂಣಿಯಲ್ಲಿವೆ. ಮೂರನೇ ಸ್ಥಾನದಲ್ಲಿ ಎಸ್ಡಿಪಿಐ ಇದೆ. ಜೆಡಿಎಸ್, ಸಿಪಿಐ (ಎಂ), ಸಿಪಿಐ ಹಾಗೂ ಪಕ್ಷೇತರ ಅಭ್ಯರ್ಥಿಗಳ ಪಾತ್ರ ಇಲ್ಲಿ ನಗಣ್ಯ. ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ 7 ಬಿಜೆಪಿ ಕೈಯಲ್ಲಿದೆ. ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯಿತಿ ಮತ್ತು ಹೆಚ್ಚಿನ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಅಧಿಕಾರ ಹೊಂದಿರುವ ಬಿಜೆಪಿಯು ಮತ್ತೊಮ್ಮೆ ಜಿಲ್ಲೆಯಲ್ಲಿ ಆಧಿಪತ್ಯ ಸ್ಥಾಪಿಸುವ ಉತ್ಸಾಹದಲ್ಲಿದೆ. ಕರಾವಳಿಯ ಹಿಂದುತ್ವ ಅಲೆ ಪಕ್ಷಕ್ಕೆ ಟ್ರಂಪ್ ಕಾರ್ಡ್. ಇದರೊಂದಿಗೆ ಸಂಘ ಪರಿವಾರದ ಮಾರ್ಗದರ್ಶನ, ಕಾರ್ಯಕರ್ತರ ಕ್ಷೇತ್ರಕಾರ್ಯ ಧನಾತ್ಮಕ ಅಂಶ. ಕಮಲಪಡೆಯ ಹಾಲಿ ಶಾಸಕರೆಲ್ಲರೂ ಈ ಬಾರಿಯೂ ಟಿಕೆಟ್ ಪಡೆಯಲಿದ್ದಾರೆ ಎನ್ನುವ ಸುದ್ದಿ ಇದೆಯಾದರೂ, ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಬದಲಾವಣೆ ಸಾಧ್ಯತೆ ಕುರಿತ ಚರ್ಚೆ ಪಕ್ಷದ ಆಂತರಿಕ ವಲಯದಲ್ಲಿ ಕೇಳಿಬರುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ, ಸರ್ಕಾರದ ವೈಫಲ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಜಿಲ್ಲೆಯಲ್ಲಿ ಪಕ್ಷದ ವೈಭವವನ್ನು ಮರು ಸ್ಥಾಪಿಸಲು ಕಾಂಗ್ರೆಸ್ ಪ್ರಯಾಸಪಡುತ್ತಿದೆ. ಸರ್ವ ಧರ್ವಿುಯರ ಸಮನ್ವಯ ಕಾಂಗ್ರೆಸ್ ಮುಂದಿರುವ ಸವಾಲು. ಈ ನಡುವೆ ಎಲ್ಲ ಕ್ಷೇತ್ರಗಳಲ್ಲಿ ಎಸ್ಡಿಪಿಐ ಬಲವರ್ಧನೆ ಕಾಂಗ್ರೆಸ್ಗೆ ತಲೆನೋವು.