ಭರ್ಜರಿ ಗೆಲುವು ದಾಖಲಿಸಿದ ಯೋಗೇಶ್ವರ್ ; ಎಚ್.ಡಿ.ಡಿ.ಕುಟುಂಬ, ಜೆಡಿಎಸ್ ಪಾಳಯಕ್ಕೆ ಆಘಾತ ತಂದ ನಿಖಿಲ್ ಸೋಲು

cpt
Published on

ರಾಮನಗರ : ದೇಶದ ಗಮನ ಸೆಳೆದಿದ್ದ ಚನ್ನಪಟ್ಟಣ ಉಪಚುನಾವಣಾ ಸಮರದಲ್ಲಿ ಸಿ.ಪಿ.ಯೋಗೇಶ್ವರ್ ವಿಜಯ ಪತಾಕೆ ಹಾರಿಸಿದ್ದು, ನಿಖಿಲ್ ಕುಮಾರಸ್ವಾಮಿ ಸೋಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ಮತ್ತು ಜೆಡಿಎಸ್ ಪಾಳಯಕ್ಕೆ ಆಘಾತ ನೀಡಿದೆ.

ಸುಮಾರು 20 ದಿನ ಕ್ಷೇತ್ರದಲ್ಲಿ ನಡೆದ ರಾಜಕೀಯ ವಾಕ್ಸಮರ, ಹರಿದ ಹಣದ ಹೊಳೆ ಇಲ್ಲಿನ ರಾಜಕೀಯ ಚಿತ್ರಣವನ್ನೇ ಬದಲಾವಣೆ ಮಾಡುತ್ತದೆ ಎನ್ನುವ ಲೆಕ್ಕಾಚಾರ ಎಲ್ಲರಲ್ಲೂ ಇತ್ತು. ನಿಖಿಲ್ ಗೆಲುವು ಸಲೀಸು ಎನ್ನುವ ಮಾತುಗಳು ವ್ಯಾಪಕವಾಗಿದ್ದವು. ಆದರೆ, ಗುಟ್ಟು ಬಿಟ್ಟುಕೊಡದ ಮತದಾರ ಸ್ಥಳೀಯರೂ ಆದ ಯೋಗೇಶ್ವರ್ ಕೈ ಹಿಡಿದ್ದಾರೆ.

7ರ ನಂತರ ... ...!

ಚನ್ನಪಟ್ಟಣ ಕ್ಷೇತ್ರದ ಮತ ಎಣಿಕೆ ಒಟ್ಟು 20 ಸುತ್ತು ನಡೆಯಿತು. ಮೊದಲ ಸುತ್ತಿನಲ್ಲಿ ಯೋಗೇಶ್ವರ್ ಅಲ್ಪ ಮುನ್ನಡೆ ಕಾಯ್ದುಕೊಂಡರು. ನಂತರ 6ನೇ ಸುತ್ತಿನವರೆಗೂ ನಿಖಿಲ್ ಲೀಡ್ ಬಿಟ್ಟುಕೊಡಲೇ ಇಲ್ಲ. ಆದರೆ ನಗರ ಪ್ರದೇಶಕ್ಕೆ ಮತ ಎಣಿಕೆ ಪ್ರವೇಶ ಪಡೆಯುತ್ತಿದ್ದಂತೆ ಯೋಗೇಶ್ವರ್ ಆರ್ಭಟವನ್ನು ತಪ್ಪಿಸಲು ಸಾಧ್ಯವಾಗಲೇ ಇಲ್ಲ. ನಗರ ಪ್ರದೇಶದಲ್ಲಿ ಎಲ್ಲಿಯೂ ಹಿಂದೆ ಬೀಳಲಿಲ್ಲ. ಇಷ್ಟರಲ್ಲಾಗಲೇ ನಿಖಿಲ್ ಸುಮಾರು 22 ಸಾವಿರ ಮತಗಳ ಹಿನ್ನಡೆ ಅನುಭವಿಸಿದರು. ಅಂತಿಮವಾಗಿ 25,413 ಮತಗಳ ಅಂತರದಿಂದ ಸಿ.ಪಿ.ವೈ. ಎದುರು ಸೋಲೊಪ್ಪಿಕೊಂಡರು.

ಠೇವಣಿ ಕಳೆದುಕೊಂಡರು

ಇದೇ ಮೊದಲ ಬಾರಿಗೆ ಚನ್ನಪಟ್ಟಣದ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ 2 ಇವಿಎಂಗಳು ಕೆಲಸ ಮಾಡಿದ್ದವು. ಒಟ್ಟು 31 ಅಭ್ಯರ್ಥಿಗಳು ಕಣದಲ್ಲಿದ್ದರು. ಇದರಲ್ಲಿ 10 ಅಭ್ಯರ್ಥಿಗಳು ವಿವಿಧ ಪಕ್ಷಗಳಿಂದ ಸ್ಪರ್ಧಿಸಿದ್ದರೆ, ಪಕ್ಷೇತರರಾಗಿ 21 ಮಂದಿ ಅಖಾಡದಲ್ಲಿದ್ದರು. ನಿಖಿಲ್ ಹಾಗೂ ಸಿಪಿವೈ ಬಿಟ್ಟರೆ, ಇನ್ನುಳಿದ 29 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.

ಕ್ಷೇತರ ಅಭ್ಯರ್ಥಿಗಳಿಬ್ಬರು ನಾಲ್ಕಂಕಿ ಮತ ಪಡೆದುಕೊಂಡಿರುವುದು ಬಿಟ್ಟರೆ ಉಳಿದಂತೆ ಯಾರೂ ಸಾಧನೆ ಮಾಡಲೇ ಇಲ್ಲ. ನಾಗರಾಜು ಮತ್ತು ಜೆ.ಟಿ ಪ್ರಕಾಶ್ 2ನೇ ಮತ ಯಂತ್ರದ ಮೊದಲ ಎರಡು ಹೆಸರುಗಳು ಇವರದ್ದೇ ಆಗಿದ್ದು, ಇವರು ಕ್ರಮವಾಗಿ 2,352 ಮತ್ತು 1,649 ಮತ ಪಡೆದುಕೊಂಡಿದ್ದಾರೆ.

ಉತ್ಸಾಹಕ್ಕೆ ತಣ್ಣೀರು ಬೆಳಗ್ಗೆ 6ಗಂಟೆಯಿಂದಲೇ ಉತ್ಸಾಹದಿಂದ ಮತ ಎಣಿಕಾ ಕೇಂದ್ರಗಳ ಸುತ್ತ ನೆರೆದಿದ್ದ ಮೂರು ಪಕ್ಷಗಳ ಕಾರ್ಯಕರ್ತರು ಪ್ರತಿ ಸುತ್ತಿನ ಮತ ಎಣಿಕೆ ವೇಳೆ ಹೊರ ಬೀಳುತ್ತಿದ್ದ ಲಿತಾಂಶಕ್ಕೆ ಅನುಗುಣವಾಗಿ ಸಂಭ್ರಮಿಸುತ್ತಿದ್ದರು. ಆದರೆ ಜೆಡಿಎಸ್ ಕಾರ್ಯಕರ್ತರ ಉತ್ಸಾಹಕ್ಕೆ 7 ಮತ್ತು ನಂತರದ ಸುತ್ತಿನ ಲಿತಾಂಶ ತಣ್ಣೀರೆರಚಿತು. 7ನೇ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಒಮ್ಮೆಲೇ 3,959 ಮತಗಳ ಮುನ್ನಡೆ ಕಾಯ್ದುಕೊಂಡರೆ, 8ನೇ ಸುತ್ತಿನಲ್ಲಿ ಬರೊಬ್ಬರಿ 11,174 ಮತಗಳ ಮುನ್ನಡೆ ಸಾಧಿಸಿದರು. ಹೀಗಾಗಿ ಜೆಡಿಎಸ್ ಕಾರ್ಯಕರ್ತರು ತಣ್ಣಗಾಗಿ ಜಾಗ ಖಾಲಿ ಮಾಡಿದರು. ನಂತರ ಕಾಂಗ್ರೆಸ್ ಕಾರ್ಯಕರ್ತರು ಗೆಲುವು ಸಂಭ್ರಮಿಸಿದರು.

ಹೆಸರು ಪಕ್ಷ ಪಡೆದ ಮತ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ 112,642 ನಿಖಿಲ್ ಕುಮಾರಸ್ವಾಮಿ ಜೆಡಿಎಸ್ 87,229 ಗೆಲುವಿನ ಅಂತರ 25413 ಮತದಾನ ಎಷ್ಟಾಗಿತ್ತು? ಒಟ್ಟು ಮತದಾರರು- 2,32,949 ಚಲಾವಣೆಗೊಂಡಿದ್ದ ಮತಗಳು-2,06,886 (ಶೇ.88.81) ಒಟ್ಟು ಕಣದಲ್ಲಿದ್ದ ಅಭ್ಯರ್ಥಿಗಳು- 31

ಕೌತುಕ ಮನೆ ಮಾಡಿತ್ತು : ಮತ ಎಣಿಕೆಯ ಹಿಂದಿನ ರಾತ್ರಿಯಿಂದಲೇ ಸೋಲು-ಗೆಲುವಿನ ಲೆಕ್ಕಾಚಾರಗಳೊಂದಿಗೆ ದೇವರ ಪ್ರಾರ್ಥನೆಗಳು ಹೆಚ್ಚಾಗಿದ್ದವು. ಶಾಸಕರು, ಬೂತ್ ಎಜೆಂಟರುಗಳು ಮೊಬೈಲ್- ಟಿವಿಗಳನ್ನು ಬಿಟ್ಟು ಅಲುಗಾಡುತ್ತಿರಲಿಲ್ಲ. ಕ್ಷಣಕ್ಷಣದ ಮಾಹಿತಿ ಪಡೆದುಕೊಳ್ಳಲು ಹೆಣಗಾಡುತ್ತಿದ್ದರು. ಇನ್ನೊಂದೆಡೆ ಮತ ಎಣಿಕಾ ಕೇಂದ್ರಗಳ ಸುತ್ತಲೂ ಪೊಲೀಸರ ಮೂರುಸುತ್ತಿನ ಬಿಗಿ ಭದ್ರತೆಗಿಂತಲೂ ಹೆಚ್ಚಾಗಿ, ಕಾರ‌್ಯಕರ್ತರು ಎಣಿಕೆಯ ಕೌತುಕಕ್ಕೆ ಸಾಕ್ಷಿಯಾಗಿದ್ದರು.

ಬೆಳಗ್ಗೆ 6ಗಂಟೆಗೆ ಎಣಿಕಾ ಕೇಂದ್ರಗಳತ್ತ ದಾಪುಗಾಲಿಡುತ್ತಿದ್ದ ಕಾರ‌್ಯಕರ್ತರು, ಬೂತ್ ಎಜೆಂಟರು ಮಾತುಮಾತಿಗೂ ಗೆಲುವು-ಸೋಲುಗಳ ಲೆಕ್ಕಚಾರವನ್ನೆ ಹಾಕುತ್ತಿದ್ದರು. ತಿಂಡಿ ತಿನ್ನುವುದನ್ನು ಬಿಟ್ಟು ಮೊದಲ ಲಿತಾಂಶದ ಟ್ರೆಂಡ್ ನೋಡಲು ಕಾಯುತ್ತಿದ್ದರು.

ಎಣಿಕೆಗೆ ಬಾರದ ಅಭ್ಯರ್ಥಿಗಳು: ಮತ ಎಣಿಕೆ ಕೇಂದ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಹಾಗೂ ಜೆಡಿಎಸ್ ಅಭ್ಯರ್ಥಿ ನಿಖಿಲ್‌ಕುಮಾರಸ್ವಾಮಿ ಸೇರಿ ಕ್ಷೇತ್ರ ವ್ಯಾಪ್ತಿಯ ಯಾವುದೇ ಶಾಸಕರು, ಎಂಎಲ್‌ಸಿಗಳು ಆಗಮಿಸಲಿಲ್ಲ. ಗೆಲುವು ಖಚಿತವಾದ ಬಳಿಕ ಸಿ.ಪಿ.ಯೋಗೇಶ್ವರ್ ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ, ಸಂಭ್ರಮಾಚರಣೆ ನಡೆಸಿದರು. ಬಳಿಕ ಸಂಜೆ ವೇಳೆಗೆ ಚುನಾವಣಾಧಿಕಾರಿ ಬಿನೊಯ್ ಅವರಿಂದ ಪ್ರಮಾಣ ಪತ್ರ ಸ್ವೀಕರಿಸಲು ಮಾಜಿ ಸಂಸದ ಡಿ.ಕೆ.ಸುರೇಶ್ ಸಾಥ್ ನೀಡಿದರು. ಗೆಲುವಿನ ನಿರೀಕ್ಷೆಯಲ್ಲಿದ್ದ ನಿಖಿಲ್ ಮತ ಎಣಿಕೆ ಕೇಂದ್ರಕ್ಕೆ ಬರಲಿಲ್ಲ. ಲಿತಾಂಶದ ನಂತರ ಬಿಡದಿ ತೋಟದ ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ತಣ್ಣಗಾದರು.

ಚನ್ನಪಟ್ಟಣದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಶಿಗ್ಗಾವಿಯಲ್ಲಿ ಮಾಜಿ ಸಿಎಂ ಬೊಮ್ಮಾಯಿ ಅವರ ಪುತ್ರರನ್ನು ಜನ ಸೋಲಿಸಿದ್ದಾರೆ. ಇನ್ನಾದರೂ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಮೇಲೆ ಸುಳ್ಳು ಆರೋಪ ಮಾಡುವುದನ್ನು ಬಿಟ್ಟು ರಾಜ್ಯದ ಅಭಿವೃದ್ಧಿಗೆ ಸಹಕಾರ ನೀಡಲಿ. ನಾವು ಹಳ್ಳಿ ಹಳ್ಳಿಗೆ ಹೋಗಿ ಒಂದು ತಿಂಗಳ ಕಾಲ ಚುನಾವಣೆ ಮಾಡಿದ್ದೆವು. ಕ್ಷೇತ್ರದ ಒಳಗೆ ಅಭಿವೃದ್ಧಿ ವಿಚಾರವಷ್ಟೇ ಚರ್ಚೆಯಾಗಿತ್ತು. ಡಿ.ಕೆ.ಸುರೇಶ್, ಮಾಜಿ ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net