

ಮಾಗಡಿ: ವೈದ್ಯರ ಹಾಗೂ ನರ್ಸ್‌ಗಳ ಬೇಜವಾಬ್ದಾರಿಯಿಂದ ಅಜ್ಜಿ ವೀರಮ್ಮ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿ ಆಸ್ಪತ್ರೆ ಆಡಳಿತಾಧಿಕಾರಿ ಹಾಗೂ ವೈದ್ಯರು, ನರ್ಸ್‌ಗಳೊಂದಿಗೆ ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಮಾತಿನ ಚಕಮಕಿ ನಡೆಸಿದರು.
ತಾಲೂಕಿನ ಗಡಿ ಗ್ರಾಮ ನೀಲಸಂದ್ರ ಗ್ರಾಮದ ನಿವಾಸಿ ವೀರಮ್ಮ (75) ಮೃತೆ. 3 ದಿನಗಳ ಹಿಂದೆ ವಾಂತಿ- ಭೇದಿಯಿಂದ ನರಳುತ್ತಿದ್ದ ಅವರನ್ನು ಸೂಕ್ತ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ವೀರಮ್ಮ ಬುಧವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ. ಇದಕ್ಕೆ ವೈದ್ಯರು, ನರ್ಸ್‌ಗಳ ಬೇಜವ್ದಾರಿಯಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿ ವಾಗ್ವಾದ ಮಾಡಿದರು.
ಆಸ್ಪತ್ರೆ ಆಡಳಿತಾಧಿಕಾರಿ ಡಾ.ಜ್ಞಾನಪ್ರಕಾಶ್ ಕುಟುಂಬಸ್ಥರ ಮನವೊಲಿಸಿ ಮೃತದೇಹವನ್ನು ಆಂಬುಲೆನ್ಸ್ ಮೂಲಕ ಕಳುಹಿಸಿಕೊಟ್ಟರು.
ಮೊಮ್ಮಗ ಶಿವು ಮಾತನಾಡಿ, 3 ದಿನಗಳಿಂದ ಚಿಕಿತ್ಸೆಪಡೆದು ಇಂದು ಗುಣಮುಖರಾಗಿದ್ದರು. ಆದರೆ, ಏಕಾಏಕಿ ತೀರ ನರಳಾಡತೊಡಗಿದರು. ಈ ವೇಳೆ ನಾಲ್ಕೈದು ಬಾರಿ ವೈದ್ಯರನ್ನು, ನರ್ಸ್‌ಗಳನ್ನು ಸಂಪರ್ಕಿಸಿದಾಗ ವೈದ್ಯರಿಗೆ ಸಭೆಯಿದೆ ಎಂದು ಚಿಕಿತ್ಸೆ ನೀಡದೆ ವಿಳಂಬಮಾಡಿದರು. ಹೀಗಾಗಿ ಅಜ್ಜಿ ಆಸ್ಪತ್ರೆಯಲ್ಲೆ ಕೊನೆ ಉಸಿರು ಎಳೆದರು ಎಂದು ಆರೋಪಿಸಿದರು.
ಅಜ್ಜಿ ಚೇತರಿಸಿಕೊಂಡು ಎಲ್ಲರೊಂದಿಗೂ ಮಾತನಾಡಿ ಆಹಾರ, ಜ್ಯೂಸ್ ಸೇವಿಸುತ್ತಿದ್ದರು. ಆದರೆ, ವೈದ್ಯರು ನಿಮ್ಮ ಅಜ್ಜಿ ಕಳೆದ ಮೂರುದಿನಗಳಿಂದ ಮಾತನಾಡುತ್ತಿರಲಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಮುಂದೆ ಇಂತಹ ಘಟನೆಗಳು ಮರುಕಳಿಸುವುದು ಬೇಡ ಎಂದು ಅಳಲನ್ನು ತೊಡಿಕೊಂಡರು.
ಸಂಬಂಧಿ ಸಿದ್ದಲಿಂಗ ಶಾಸ್ತ್ರಿ ಮಾತನಾಡಿ, ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್‌ಗಳು ಮತ್ತು ವೈದ್ಯರು ಸಕಾಲಕ್ಕೆ ರೋಗಿಗಳಿಗೆ ಚಿಕಿತ್ಸೆ ನೀಡದೆ ಗಂಟೆಗಟ್ಟಲೆ ಕಾಯಿಸುತ್ತಾರೆ. ಸುಖಾಸುಮ್ಮನೆ ಕಾಲಹರಣ ಮಾಡುತ್ತಾರೆ. ಅಜ್ಜಿಗೆ ಆಮ್ಲಜನಕ ಕೊರತೆ ಇತ್ತು. ಕೂಡಲೇ ನರ್ಸ್‌ಗಳನ್ನು ಸಂಪರ್ಕಿಸಿದರೂ ಅಮ್ಲಜನಕದ ಸಿಲಿಂಡರ್ ಎಲ್ಲಿದೆ ಎಂದು ಹುಡುಕಾಟ ನಡೆಸಿ ಕೊನೆಗೆ ಆಸ್ಪತ್ರೆಯಲ್ಲಿದ್ದ ಆಮ್ಲಜನಕದ ಸಿಲಿಂಡರ್ ಹುಡುಕಿ ನಾವೇ ತಂದುಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ್ದಾರೆ, ಸಾಮಾನ್ಯವಾಗಿ ವಯಸ್ಸಾದವರಿಗೆ ಹೃದಯಾಘಾತ ಸಹಜ. ಅದರಂತೆ ಇದು ಆಗಿರಬಹುದು. ವೈದ್ಯರ, ನರ್ಸ್‌ಗಳ ಬೇಜವಾಬ್ದಾರಿ ಇಲ್ಲ. | ಜ್ಞಾನ ಪ್ರಕಾಶ್ , ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ