ವೃದ್ಧ ದಂಪತಿ ಜೀವನ ದುಸ್ತರ

kalusanka
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಪಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅವರಾಲು ಮಟ್ಟು ಗ್ರಾಮದ ವೃದ್ಧ ದಂಪತಿ ಮನೆಗೆ ತಲುಪಲು ಏಕೈಕ ದಾರಿಯಾಗಿರುವ ಹೊಳೆಯೊಳಗಿನ ಶಿಥಿಲಗೊಂಡ ಕಾಲುಸಂಕ ವೀಕ್ಷಿಸಿದ ತಹಸೀಲ್ದಾರ್ ಪ್ರತಿಭಾ ಆರ್. ಹೊಸ ಸುರಕ್ಷಿತ ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿದರು.

ದಿನನಿತ್ಯದ ಕೆಲಸಗಳಿಗೆ ಹೊರಗೆ ಬರಬೇಕೆಂದರೆ ಭೋಜ ಸಾಲ್ಯಾನ್ ಮತ್ತು ವಸಂತಿ ದಂಪತಿ ಮರದ ಸಣ್ಣ ಹಲಗೆ ಮೇಲೆಯೇ ನಡೆದಾಡಬೇಕಾದ ಪರಿಸ್ಥಿತಿ ಇದೆ. ದಿನಸಿ ತರಲು, ಹೊರಗಿನ ಜನರನ್ನು ಭೇಟಿ ಮಾಡಲು, ಪೇಟೆ ಬೀದಿಗೆ ಬರಲು, ಇನ್ಯಾವುದೇ ಕೆಲಸಕ್ಕೂ ಈ ಶಿಥಿಲ ಕಾಲುಸಂಕದ ಮೇಲೆಯೇ ಜೀವಕೈಲಿ ಹಿಡಿದುಕೊಂಡು ಹೋಗಬೇಕಾದ ಸ್ಥಿತಿ. ಅವರ ಸಮಸ್ಯೆ ಮನಗಂಡ ಇಸ್ಮಾಯಿಲ್ ಪಲಿಮಾರು ತಹಸೀಲ್ದಾರ್ ಗಮನಕ್ಕೆ ತಂದಿದ್ದು, ಅದರಂತೆ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿದರು.

ವೃದ್ಧ ದಂಪತಿಗಳ ಪರಿಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ. ನಾನೂ ಸ್ವತಃ ಈ ಹಲಗೆ ಮೇಲೆ ನಡೆದುಬಂದೆ, ನಿಜಕ್ಕೂ ಭಯವಾಯಿತು. ಕಾಲಿಟ್ಟರೆ ಅಲ್ಲಾಡುವ, ಒಂದು ಹೆಜ್ಜೆ ಇರಿಸುವಷ್ಟು ಮಾತ್ರವೇ ಅಗಲವಿರುವ ಶಿಥಿಲಗೊಂಡ ಮರದ ಹಲಗೆ ಮೇಲೆ ನಡೆದುಕೊಂಡು ಬಂದು ಹೊಳೆ ದಾಟಿ ತಮ್ಮ ದಿನ ನಿತ್ಯದ ಅಗತ್ಯ ಪೂರೈಸಿಕೊಳ್ಳಬೇಕಾದ ಪರಿಸ್ಥಿತಿ ಈ ವೃದ್ಧ ದಂಪತಿಯದು. ಮಳೆಗಾಲದಲ್ಲಿ ನೆರೆ ಆವರಿಸುತ್ತದೆ. ಪಕ್ಕದಲ್ಲೇ ಇರುವ ಇನ್ನೊಂದು ಮನೆಯವರು ಈ ಕಷ್ಟ ಸಹಿಸಲಾಗದೆ ಈಗಾಗಲೇ ಸ್ವಂತ ಮನೆ ತೊರೆದು ಬೇರೆ ಕಡೆ ಸ್ಥಳಾಂತರಗೊಂಡಿದ್ದಾರೆ. ಆದರೆ ಈ ವೃದ್ಧ ದಂಪತಿಗೆ ಇರುವುದೊಂದೇ ಸೂರು, ಹೊಳೆಗೆ ಸುಭದ್ರ ಸೇತುವೆ ನಿರ್ಮಿಸಿಕೊಡಲು ಮನವಿ ಮಾಡಿಕೊಂಡಿದ್ದಾರೆ ಓಡಾಡಲು ಸುರಕ್ಷಿತ, ಸುಭದ್ರ ಸೇತುವೆ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಸಂಬಂಧಪಟ್ಟ ಇಲಾಖೆ ಮತ್ತು ಯಾರಾದರೂ ದಾನಿಗಳ ಸಹಕಾರದಿಂದ ಇದನ್ನು ಸಾಧ್ಯವಾಗಿಸಲು ಪ್ರಯತ್ನಿಸುವುದಾಗಿ ಪ್ರತಿಭಾ ವಿವರಿಸಿದ್ದಾರೆ.

ಪಲಿಮಾರು ಗ್ರಾಪಂ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಸದಸ್ಯರಾದ ಜಯಂತಿ, ಸತೀಶ್ ದೇವಾಡಿಗ, ಯೋಗಾನಂದ, ಶಿವರಾಮ ಪೂಜಾರಿ ಅವರು ಈ ವೃದ್ಧ ದಂಪತಿಗಳಿಗೆ ರಸ್ತೆ ನಿರ್ಮಿಸಿಕೊಡಲು ಸಹಕರಿಸುವುದಾಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net