ಚುನಾವಣೆ ಬಾಂಡ್ ಅಧಿಕೃತ ಲಂಚದ ವ್ಯವಹಾರ

20spt9
Published on

ಸೋಮವಾರಪೇಟೆ: ಸಂವಿಧಾನಿಕ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಗಾಗಿ ಬಿಜೆಪಿ ನೇತೃತ್ವದ ಸರ್ಕಾರವನ್ನು ದೇಶದಿಂದ ಕಿತ್ತೊಗೆಯಬೇಕು ಎಂದು ಸಿಪಿಐ(ಎಂಎಲ್)ನ ಮಾಸ್‌ಲೈನ್ ರಾಜ್ಯ ಕಾರ್ಯದರ್ಶಿ ಡಿ.ಎಚ್.ಪೂಜಾರ ಹೇಳಿದರು.


ಸಿಪಿಐ(ಎಂಎಲ್) ಕೊಡಗು ಜಿಲ್ಲಾ ಸಮಿತಿ ವತಿಯಿಂದ ಪಟ್ಟಣದ ಮಾನಸ ಹಾಲ್‌ನಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕರ್ತರ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.


2ಜಿ ಸ್ಪೆಕ್ಟ್ರಂ ಹಗರಣಕ್ಕಿಂತ ಹತ್ತು ಪಟ್ಟು ಚುನಾವಣೆ ಬಾಂಡ್ ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕಿದೆ. ತಾರತಮ್ಯದಿಂದ ಕೂಡಿರುವ ಹಾಗೂ ವಿರೋಧ ಪಕ್ಷಗಳ ವಿರೋಧದ ನಡುವೆ ಏಕಪಕ್ಷಿಯವಾಗಿ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಯಾವುದೇ ಆಸ್ತಿ ಹಕ್ಕುಗಳ ದಾಖಲಾತಿಗಳಿಲ್ಲದ ಕೋಟ್ಯಂತರ ಬಡ ಆದಿವಾಸಿಗಳನ್ನು ಮತ್ತು ಅಲ್ಪಸಂಖ್ಯಾತರಾದ ಮುಸ್ಲಿಮರನ್ನು ಎರಡನೇ ನಾಗರಿಕರನ್ನಾಗಿಸುವ ಹುನ್ನಾರ ನಡೆದಿದೆ. ಧಾರ್ಮಿಕ ಸ್ವಾತಂತ್ರ್ಯಕ್ಕೆ ಗೌರವ ಹಾಗೂ ಎಲ್ಲ ಸಮುದಾಯಗಳಿಗೆ ಸಮಾನ ಹಕ್ಕುಗಳು ನೆಲದ ಕಾನೂನು ಅಡಿಯಲ್ಲಿ ದೊರಕಬೇಕು. ಇದು ಪ್ರಜಾಪ್ರಭುತ್ವದ ಪ್ರತಿಪಾದನೆಯಾಗಿದೆ ಎಂದು ಹೇಳಿದರು.


ರಾಜ್ಯ ಸಂಘಟಕ ಡಿ.ಎಸ್.ನಿರ್ವಾಣಪ್ಪ ಮಾತನಾಡಿ, ಬಾಂಡ್ ಖರೀದಿ ಚುನಾವಣೆ ದೇಣಿಗೆ ಅಲ್ಲ. ಸರ್ಕಾರದ ಅಧಿಕೃತ ಲಂಚದ ವ್ಯವಹಾರವಾಗಿದೆ. ಈ ಕಾರಣದಿಂದ ಎನ್‌ಡಿಎ ಅಧಿಕಾರ ಕಳೆದುಕೊಳ್ಳಬೇಕು. ದೇಶದ ನಾಗರಿಕರು ಭ್ರಷ್ಟರ ವಿರುದ್ಧ ಮತಚಲಾಯಿಸಬೇಕು ಎಂದು ಮನವಿ ಮಾಡಿದರು.
ರಾಜ್ಯ ಸಮಿತಿಯ ಸದಸ್ಯರಾದ ಕೆ.ಬಿ.ಗೋನಾಳ, ಬಿ.ಎನ್.ಯರದಿಹಾಳ, ರಮೇಶ ಪಾಟೀಲ, ಬಸವರಾಜ ನರೆಗಲ್, ಚಿಟ್ಟಿಬಾಬು, ಕೊಡಗು ಜಿಲ್ಲಾ ಸಮಿತಿಯ ಸುರೇಶ್, ಮಂಜುನಾಥ, ಸಿದ್ದಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net