8.85 ಲಕ್ಷ ರೂ. ಉಳಿತಾಯ ಬಜೆಟ್

28ark -1
Published on

ಅರಕಲಗೂಡು: ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಬುಧವಾರ ಪಪಂ ಆಡಳಿತಾಧಿಕಾರಿ ಬಸವರೆಡ್ಡಪ್ಪ ರೋಣದ 2024- 25ನೇ ಸಾಲಿಗೆ 8.85 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಿದರು.


ಅರಂಭಿಕ ಶಿಲ್ಕು 7.76 ಲಕ್ಷ ರೂ. ಸೇರಿದಂತೆ 24.49 ಕೋಟಿ ರೂ. ಆದಾಯ ನಿರೀಕ್ಷಿಸಿದ್ದು 24.40 ಕೋಟಿ ರೂ. ವೆಚ್ಚ ತೋರಿಸಲಾಗಿದೆ. ಆದಾಯದಲ್ಲಿ ಆಸ್ತಿ ತೆರಿಗೆಯಿಂದ 1.25 ಕೋಟಿ ರೂ., ಮಳಿಗೆ ಬಾಡಿಗೆ 46.75 ಲಕ್ಷ ರೂ., ನೀರು ಸರಬರಾಜು ಶುಲ್ಕ 45 ಲಕ್ಷ ರೂ., ಅಭಿವೃದ್ಧಿ ಶುಲ್ಕ 75 ಲಕ್ಷ ರೂ., ಸಂತೆ ಸುಂಕ, ಕೋಳಿ ಮಾಂಸ, ಮೀನು ಮಾರಾಟದ ಅಂಗಡಿಗಳ ಹರಾಜಿನಿಂದ 18 ಲಕ್ಷ ರೂ. ಹಾಗೂ ಸರ್ಕಾರದಿಂದ 15.29 ಕೋಟಿ ರೂ. ವಿವಿಧ ಅನುದಾನಗಳನ್ನು ನಿರೀಕ್ಷಿಸಲಾಗಿದೆ. ಪಪಂ ವಾಣಿಜ್ಯ ಮಳಿಗೆ ದುರಸ್ತಿಗೆ 85 ಲಕ್ಷ ರೂ., ಬೀದಿದೀಪ ನಿರ್ವಹಣೆಗೆ 15 ಲಕ್ಷ ರೂ., ಚರಂಡಿ, ರಸ್ತೆ ಹಾಗೂ ಯಂತ್ರಗಳ ದುರಸ್ತಿಗೆ 50 ಲಕ್ಷ ರೂ. ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 24.40 ಲಕ್ಷ ರೂ.ವೆಚ್ಚ ತೋರಿಸಲಾಗಿದೆ.


ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಸದಸ್ಯೆ ಎಚ್.ಎಸ್.ರಶ್ಮಿ ಮಾತನಾಡಿ, ಬಜೆಟ್ ಕಳೆದ ಸಾಲಿನ ನಕಲಾಗಿದೆ. ಮುಂಗಡ ಪತ್ರದಲ್ಲಿ ಹೊಸದೇನೂ ಇಲ್ಲ, ಅಭಿವೃದ್ಧಿ ಕಾಮಗಾರಿಗಳಿಗೆ ದೊಡ್ಡ ಮೊತ್ತದ ಹಣ ಮೀಸಲಿರಿಸಿರುವುದಾಗಿ ತೋರಿಸಲಾಗುತ್ತಿದೆ. ಆದರೆ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಕಳೆದ ಬಾರಿಯೂ ವಾಣಿಜ್ಯ ಮಳಿಗೆ ದುರಸ್ತಿಗೆ 85 ಲಕ್ಷ ರೂ. ಹಣ ಇಡಲಾಗಿತ್ತು. ಆದರೆ, ಯಾವ ಮಳಿಗೆಯೂ ದುರಸ್ತಿ ಕಂಡಿಲ್ಲ ಎಂದು ಆರೋಪಿಸಿದರು.


ಸದಸ್ಯ ನಿಖಿಲ್ ಕುಮಾರ್ ಮಾತನಾಡಿ, ಬಹಳಷ್ಟು ಕೋಳಿ ಅಂಗಡಿಗಳ ಮಾಲೀಕರು ಪರವಾನಗಿ ಪಡೆಯದ ಕಾರಣ ಪಪಂಗೆ ಆದಾಯ ನಷ್ಟವಾಗುತ್ತಿದೆ. ಈ ಕುರಿತು ತಾವು ಲಿಖಿತವಾಗಿ ದೂರು ನೀಡಿದರೂ ಕ್ರಮ ಕೈಗೊಳ್ಳದೆ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ. ಹೊಸದಾಗಿ ಪರವಾನಗಿ ನೀಡುವ ವೇಳೆ ಹಳೆಯ ಬಾಕಿ ವಸೂಲಿಗೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಕುರಿತು ಗಮನ ಹರಿಸಿ ಕ್ರಮ ಕೈಗೊಳ್ಳುವಂತೆ ಆಡಳಿತಾಧಿಕಾರಿ ಬಸವ ರೆಡ್ಡಪ್ಪ ರೋಣದ ಮುಖ್ಯಾಧಿಕಾರಿಗೆ ಸೂಚಿಸಿದರು.


ಸದಸ್ಯ ರಮೇಶ್ ವಾಟಾಳ್ ಮಾತನಾಡಿ, ಪಪಂ ನಿರ್ಮಿಸಿದ್ದ 354 ನಿವೇಶನಗಳ ವಿತರಣೆ ಈವರೆಗೂ ನಡೆದಿಲ್ಲ. ಮನೆಯಿಲ್ಲದೆ ಬಡಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಸತಿ ಯೋಜನೆಯ ಸೌಲಭ್ಯಗಳು ಜನರಿಗೆ ದೊರಕುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಅರಸೀಕರೆ ಶಾಸಕ ಕೆ.ಎಂ.ಶಿವಲಿಂಗೇಗೌಡರು ಗೃಹಮಂಡಳಿ ಅಧ್ಯಕ್ಷರಾಗಿದ್ದಾರೆ. ಪಟ್ಟಣ ವ್ಯಾಪ್ತಿಯಲ್ಲಿ 50 ಎಕರೆ ಜಮೀನು ಖರೀದಿಸಿ ಗೃಹ ಮಂಡಳಿ ಮನೆಗಳನ್ನು ನಿರ್ಮಿಸಿ ಕೊಡುವ ಮೂಲಕ ಪಟ್ಟಣದ ಬಡಜನರ ವಸತಿ ಸಮಸ್ಯೆ ನೀಗಲು ಪಪಂ ಆಡಳಿತ ಮನವಿ ಸಲ್ಲಿಸುವಂತೆ ಸದಸ್ಯ ರಮೇಶ್ ವಾಟಾಳ್ ಸಲಹೆ ನೀಡಿದರು.


ವಾಣಿಜ್ಯ ಮಳಿಗೆಗಳು ಪಪಂ ಆದಾಯದ ಪ್ರಮುಖ ಮೂಲವಾಗಿದೆ. ಇದರ ಹರಾಜು ಪ್ರಕ್ರಿಯೆ ನಡೆಸಲು ಅಧಿಕಾರಿಗಳು ನಿರ್ಲಕ್ಷೃ ತೋರುತ್ತಿದ್ದಾರೆ. ಈ ಕುರಿತು ನಿಜ ಸಂಗತಿ ಬಯಲಾಗಬೇಕು. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಪ್ರದೀಪ್‌ಕುಮಾರ್ ಹೇಳಿದರು.
ಸದಸ್ಯರಾದ ಕೃಷ್ಣಯ್ಯ, ಅನಿಕೇತನ್, ಲಕ್ಷ್ಮೀ, ಸುಮಿತ್ರಾ, ಹೂವಣ್ಣ, ಮುಖ್ಯಾಧಿಕಾರಿ ಬಸವರಾಜ ಟಾಕಪ್ಪ ಶಿಗ್ಗಾವಿ, ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net