ಈದ್ ಮಿಲಾದ್ ದಿನ ಗಣೇಶ ವಿಸರ್ಜನೆ ರದ್ದು

20knk2
ಈದ್ ಮಿಲಾದ್-ಗಣೇಶ ಚತುರ್ಥಿ ಭಾಗವಾಗಿ ಕನಕಗಿರಿ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿಸಭೆಯಲ್ಲಿ ತಹಸೀಲ್ದಾರ ವಿಶ್ವನಾಥ ಮುರುಡಿ ಮಾತನಾಡಿದರು. ಜೆಸ್ಕಾಂ ಶಾಖಾಧಿಕಾರಿ ಸಿದ್ದನಗೌಡ, ಉಪವಲಯ ಅರಣ್ಯಾಧಿಕಾರಿ ಎಂ.ಡಿ ಸುಲೇಮಾನ್, ಅಬಕಾರಿ ನೀರಿಕ್ಷಕ ವಿಠ್ಠಲ ಇತರರಿದ್ದರು.
Published on

ಕನಕಗಿರಿ: ಸರ್ಕಾರ ಹೊರಡಿಸುವ ಮಾರ್ಗಸೂಚಿಗಳಂತೆ ಗಣೇಶ ಹಬ್ಬ ಆಚರಿಸಲು ಸಂಘ ಸಂಸ್ಥೆಗಳು ಮುಂದಾಗಬೇಕು ಎಂದು ತಹಸೀಲ್ದಾರ್ ವಿಶ್ವನಾಥ ಮುರುಡಿ ಹೇಳಿದರು.

ಇಲ್ಲಿನ ಪೊಲೀಸ್ ಠಾಣೆಯಲ್ಲಿ ಬುಧವಾರ ನಡೆದ ಗಣೇಶ ಚತುರ್ಥಿ-ಈದ್ ಮಿಲಾದ್ ನಿಮಿತ್ತ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು. ಪಟ್ಟಣದಾದ್ಯಂತ ಸಿಸಿ ಕ್ಯಾಮರ ಅಳವಡಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದು, ಅದರಂತೆ ಎಲ್ಲೆಡೆ ಕ್ಯಾಮರಾಗಳ ಅಳವಡಿಕೆ ನಡೆದಿದೆ.

ಯಾವುದೇ ಕಾರಣಕ್ಕೂ ಅಹಿತಕರ ಘಟನೆ ನಡೆಯುವುದಕ್ಕೆ ಅವಕಾಶ ನೀಡುವುದಿಲ್ಲ. ಸಂಘ ಸಂಸ್ಥೆಗಳು ಸಹ ಸರ್ಕಾರದ ಮಾರ್ಗಸೂಚಿ ಪಾಲಿಸುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಮುಂದಾಗಬೇಕು. ಗಣೇಶ ಪ್ರತಿಷ್ಠಾಪನೆಯ 9ದಿನಕ್ಕೆ ಈದ್ ಮಿಲಾದ್ ಇರುವುದರಿಂದು ಅಂದು ಗಣೇಶ ವಿಸರ್ಜನೆಗೆ ಅವಕಾಶ ನೀಡುವುದಿಲ್ಲ. ಗಣೇಶ ಕೂರಿಸುವವರು ಸಂಪೂರ್ಣ ಮಾಹಿತಿ ಒದಗಿಸಿ ಸಂಬಂಧಿಸಿದ ಇಲಾಖೆಯಿಂದ ಅನುಮತಿ ಪಡೆಯಲು ಸಿಂಗಲ್ ವಿಂಡೋ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಪಿಐ ಎಂ.ಡಿ ಫೈಜುಲ್ಲಾ ಮಾತನಾಡಿ, ಗಣೇಶ ವಿಸರ್ಜನೆ ಬೇಗನೆ ಪೂರ್ಣಗೊಳಿಸಬೇಕು. ಅದಕ್ಕಾಗಿ ಗಣೇಶ ವಿಸರ್ಜನಾ ಸಮಯದಲ್ಲಿ ಹರಾಜು ಪ್ರಕ್ರಿಯೆ ಬೇಗ ಆರಂಭಿಸಿ, ಮೆರವಣಿಗೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎಂದರು. ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ಅಯ್ಯನಗೌಡರೆಡ್ಡಿ ಮಾತನಾಡಿ, ಅನ್ಯ ಧರ್ಮಿಯರ ಹಬ್ಬಗಳಲ್ಲಿ ಬಳಸುವ ವಿದ್ಯುತ್ ಸಂಪರ್ಕಕ್ಕೆ ಬಿಲ್ ಪಾವತಿ ಬೇಕಾಗಿಲ್ಲ. ನಿಯಮಗಳು ಜಾರಿಯಾಗುವುದಿಲ್ಲ.

ಆದರೆ, ಸ್ವಾತಂತ್ರ್ಯ ಹೋರಾಟಕ್ಕಾಗಿ ಜನರನ್ನು ಒಗ್ಗೂಡಿಸಲು ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಆರಂಭವಾಯಿತು. ಇದೀಗ ಜೆಸ್ಕಾಂನವರಿಗೆ ವಿದ್ಯುತ್ ಬಿಲ್ ಭರಿಸುವುದಕ್ಕೆ ಕೂಡಿಸಿದಂತಾಗುತ್ತಿದೆ. ಈ ನಿಟ್ಟಿನಲ್ಲಿ ಉಚಿತ ವಿದ್ಯುತ್ ನೀಡಬೇಕೆಂದು ಮನವಿ ಮಾಡಿದರು.

ಜೆಸ್ಕಾಂ ಶಾಖಾಧಿಕಾರಿ ಸಿದ್ದನಗೌಡ, ಉಪವಲಯ ಅರಣ್ಯಾಧಿಕಾರಿ ಎಂ.ಡಿ ಸುಲೇಮಾನ್, ಅಬಕಾರಿ ನೀರಿಕ್ಷಕ ವಿಠ್ಠಲ, ಪ್ರಮುಖರಾದ ಸಣ್ಣ ಕನಕಪ್ಪ, ರವಿ ಭಜಂತ್ರಿ, ಮಹಾಂತೇಶ ಸಜ್ಜನ್, ಮುಕ್ತುಂಸಾಬ ಚಳ್ಳಮರದ, ಹನುಮೇಶ ಗಂಗಾಮತ, ಸಂಪತ್‌ಕುಮಾರ, ಬಸವರಾಜ ನಾಯಕ, ಶರಣು ಕನಕಾಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net