

ಕೊಳ್ಳೇಗಾಲ: ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಗೌರಿ-ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬ ಕುರಿತು ಶಾಂತಿ ಸಭೆ ಆಯೋಜಿಸಲಾಗಿತ್ತು.
ಈ ವೇಳೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಪೊಲೀಸ್ ವೃತ್ತ ನಿರೀಕ್ಷಕ ಶಿವಮಾದಯ್ಯ ಮಾತನಾಡಿ, ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬವನ್ನು ಎಲ್ಲರೂ ಒಗ್ಗೂಡಿ ಯಾರ ಭಾವನೆಗೆ ಧಕ್ಕೆ ಉಂಟಾಗದಂತೆ ಶಾಂತಿ, ಸೌಹಾರ್ದತೆಯಿಂದ ಆಚರಣೆ ಮಾಡಬೇಕು ಎಂದು ತಿಳಿಸಿದರು.
ಗಣಪತಿ ಪ್ರತಿಷ್ಠಾಪನೆಗೆ ಸಂಬಂಧಪಟ್ಟ ಎಲ್ಲ ಇಲಾಖೆಯ ಅನುಮತಿ ಕಡ್ಡಾಯ ಅಗತ್ಯವಾಗಿದೆ. ಐದು ದಿನಗಳ ಮಾತ್ರ ಪ್ರತಿಷ್ಠಾಪನೆ ಮಾಡಲು ಕಾಲಾವಕಾಶ ನೀಡಲಾಗಿದೆ. ಗಣಪತಿ ಪ್ರತಿಷ್ಠಾಪನೆ ಮಾಡುವ ಸ್ಥಳದ ಮಾಲೀಕರ ಅನುಮತಿ ಪಡೆಯ ಬೇಕಿದೆ. ಗ್ರಾಮದ ಎಲ್ಲ ಕೋಮಿನ ಮುಖಂಡರು ಜನರು ಒಗ್ಗೂಡಿ ಒಂದು ಅಥವಾ ಎರಡು ಕಡೆ ಗಣಪತಿ ಪ್ರತಿಷ್ಠಾಪನೆ ಮಾಡುವುದು ಒಳಿತು ಎಂದು ಸಲಹೆ ನೀಡಿದರು.
ಗಣಪತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಬೇಕು. ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಕುರಿತು ಸರಿಯಾದ ಮಾಹಿತಿಯನ್ನು ಪೊಲೀಸರಿಗೆ ನೀಡಬೇಕು. ಗಣಪತಿ ಪ್ರತಿಷ್ಠಾಪನೆ ಮಾಡುವ ಯುವಕರಿಗೆ ಆಯಾ ಗ್ರಾಮದ ಹಿರಿಯರು ಸರಿಯಾದ ಮಾಹಿತಿ ನೀಡಿ ಸೌಹಾರ್ದತೆಯಿಂದ ಆಚರಣೆ ಮಾಡಬೇಕು ಎಂದು ಸಲಹೆ ನೀಡಿದರು.
ಕಳೆದ ಬಾರಿ ಗಣಪತಿ ಹಬ್ಬದ ವೇಳೆ ಗಲಾಟೆ ನಡೆದಿದ್ದಲ್ಲಿ, ಅಂತಹವರ ಬಗ್ಗೆ ಮಾಹಿತಿ ನೀಡಿದ್ದರೆ ಅವರನ್ನು ಠಾಣೆಗೆ ಕರೆಯಿಸಿ ಸೂಚನೆ ನೀಡುತ್ತೇವೆ. ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬದ ಕುರಿತು ಪೋಸ್ಟ್ ಮಾಡುವಾಗ ಯಾರ ಧಾರ್ಮಿಕ ಭಾವನೆಗೂ ಧಕ್ಕೆ ಉಂಟಾಗದಂತೆ ಪೋಸ್ಟ್ ಹಾಕಬೇಕು. ಧ್ವನಿವರ್ಧಕವನ್ನು ಬೆಳಗ್ಗೆ 6 ಗಂಟೆ ಯಿಂದ ರಾತ್ರಿ 10 ರವರೆಗೆ ಮಾತ್ರ ಅವಕಾಶ ಇರುತ್ತದೆ. ಬೆಂಕಿ ಅನಾಹುತ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದರು.
ಸೆ.5 ರಂದು ಈದ್‌ಮಿಲಾದ್ ಹಬ್ಬವನ್ನು ಮುಸ್ಲಿಂ ಬಾಂಧವರು ಅಚರಣೆ ಮಾಡುವ ಮೂಲಕ ಯಾರ ಭಾವನೆಗೂ ಧಕ್ಕೆ ಮಾಡಬಾರದು ಎಂದು ತಿಳಿಸಿದರು.
ಸಭೆಯಲ್ಲಿ ಪಟ್ಟಣ ಪೊಲೀಸ್ ಠಾಣೆಯ ಪಿಎಸ್‌ಐ ಬಿ.ವಿ ವರ್ಷಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ವೀರಶೈವ ಲಿಂಗಾಯತ ಸಮಾಜದ ಮುಖಂಡ ವೀರಭದ್ರಸ್ವಾಮಿ, ನಗರಸಭೆ ಸದಸ್ಯ ಶಾಂತರಾಜು, ಭೀಮನಗರದ ಯಜಮಾನ ಚಿಕ್ಕಮಾಳಿಗೆ, ಪಾಪಣ್ಣ, ಮಹದೇವಸ್ವಾಮಿ, ಮುಸ್ಲಿಂ ಸಮುದಾಯ ಮುಖಂಡ ಅಕ್ಮಲ್ ಪಾಷ, ಬಸ್ತೀಪುರ ಗ್ರಾಮದ ಮುಖಂಡ ರವಿ, ಉಪ್ಪಾರ ಸಮಾಜದ ಮುಖಂಡ ರಾಮ ಕೃಷ್ಣಮೋಳೆ, ನಾಯಕ ಸಮುದಾಯ ಚಿಕ್ಕಮಾದನಾಯಕ ಇತರರು ಇದ್ದರು.