

ರಟ್ಟಿಹಳ್ಳಿ: ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆ, ಬಾಳೆಹಣ್ಣು ಹಾಗೂ ಶೇಂಗಾ ಚಕ್ಕಿ ನೀಡುವ ಮೂಲಕ ವಿದ್ಯಾರ್ಥಿಗಳ ದೈಹಿಕ ಬೆಳವಣಿಗೆಗೆ ಸರ್ಕಾರ ಆದ್ಯತೆ ನೀಡಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ಪಟ್ಟಣದ ಶ್ರೀ ಕುಮಾರೇಶ್ವರ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ರಟ್ಟಿಹಳ್ಳಿ ಸಹಯೋಗದೊಂದಿಗೆ ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಯೋಜನೆಯಡಿ ವಿದ್ಯಾರ್ಥಿಗಳಿಗೆ ಮೊಟ್ಟೆ, ಬಾಳೆಹಣ್ಣು ಮತ್ತು ಶೇಂಗಾ ಚಕ್ಕಿ ವಿತರಣೆಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ತಿಂಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ: 2018ರಲ್ಲಿ ಶ್ರೀ ಕುಮಾರೇಶ್ವರ ಪ್ರೌಢಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕದ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಭರವಸೆ ನೀಡಿದ್ದೆ. ಅದರಂತೆ ಇನ್ನೊಂದು ತಿಂಗಳಲ್ಲಿ ಘಟಕದ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಅಕ್ಷರದಾಸೋಹ ಶಿಕ್ಷಣಾಧಿಕಾರಿ ಜಡ್. ಎಂ. ಖಾಜಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅಪೌಷ್ಠಿಕತೆ ನಿವಾರಣೆಯಾಗಬೇಕು ಮತ್ತು ಸದೃಢ ದೇಹ ಹೊಂದಲು ಈ ಯೋಜನೆಯನ್ನು ಸರ್ಕಾರ ಜಾರಿ ಮಾಡುತ್ತಿದೆ. ರಾಜ್ಯದಲ್ಲಿ ಮೊಟ್ಟೆ ವಿತರಣೆಗಾಗಿ ಸರ್ಕಾರ 750 ಕೋಟಿ ರೂ. ಹಣವನ್ನು ಮೀಸಲಿಟ್ಟಿದೆ ಎಂದರು.
ಬಿಇಒ ಎನ್. ಶ್ರೀಧರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಕೆ.ಎಚ್. ಮಾರುತೆಪ್ಪ, ಶಿಕ್ಷಣ ಸಂಯೋಜಕ ಎನ್.ವಿ. ನಾಯಕ, ದೈಹಿಕ ಶಿಕ್ಷಣ ನಿರ್ದೇಶಕ ಎಂ. ರೇವಣಸಿದ್ದಪ್ಪ, ನಿವೃತ್ತ ಪ್ರಾಚಾರ್ಯ ಎನ್.ಸಿ. ಕಠಾರೆ, ಪ್ರಾಚಾರ್ಯ ಎನ್.ಎಂ. ಶಾಸ್ತ್ರಿ, ಪಿಎಸ್ಐ ಜಗದೀಶ್ ಜಿ., ಪರಮೇಶಣ್ಣ ಕಟ್ಟೇಕಾರ, ಕೆ.ವಿ. ಭೀಮಪ್ಪನವರ, ವೀರನಗೌಡ್ರ ಪ್ಯಾಟಿಗೌಡ್ರ ಮುಖ್ಯ ಶಿಕ್ಷಕ ಕುಬೇರಪ್ಪ ಎಂ. ಇತರರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಆರ್.ಬಿ. ಪೂಜಾರ ಮತ್ತು ಎಂ.ಎಚ್. ಲಿಂಗರಾಜ ನಿರ್ವಹಿಸಿದರು.