ನೀರಿನ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ

Published on

ಆಂಧ್ರ ಡಿಸಿಎಂ ಪವನ್​ ಕಲ್ಯಾಣ್​ ಭರವಸೆ |  ಬಯಲುಸೀಮೆ ಜಿಲ್ಲೆಗಳು ಅಕ್ಷಯ ಪಾತ್ರೆಗಳೆಂದು ಬಣ್ಣನೆ

ವಿಜಯವಾಣಿ ಸುದ್ದಿಜಾಲ ಚಿಂತಾಮಣಿ

ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಕೋಲಾರ&ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಆಹಾರ ನೀಡುವ ಅಕ್ಷಯ ಪಾತ್ರೆಯಾಗಿದ್ದು, ಇಲ್ಲಿನ ನೀರಿನ ಸಮಸ್ಯೆ ಬಗೆಹರಿಸಲು ಈ ಭಾಗದ ಸಹೋದರನಾಗಿ ಪ್ರಯತ್ನ ಮಾಡುವೆ ಎಂದು ಆಂಧ್ರದ ಉಪಮುಖ್ಯಮಂತ್ರಿ ಪವನ್​ ಕಲ್ಯಾಣ್​ ಭರವಸೆ ನೀಡಿದರು.

ಸುಪ್ರಿಂ ಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡರ 75ನೇ ಹುಟ್ಟು ಹಬ್ಬದ ಅಂಗವಾಗಿ ನಗರದ ಹೊರವಲಯದ ಬೆಂಗಳೂರು ರಸ್ತೆಯ ಚಿನ್ನಸಂದ್ರ ಬಳಿ ಹಮ್ಮಿಕೊಂಡಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸತ್ಯದ ಪ್ರತಿಕ ಗೋಪಾಲ್​ಗೌಡ: ಸುಪ್ರೀಂ ಕೋರ್ಟ್​ನ ವಿಶ್ರಾಂತ ನ್ಯಾಯಮೂರ್ತಿ ವಿ.ಗೋಪಾಲ್​ಗೌಡರು ನ್ಯಾಯ, ಸತ್ಯ ಮತ್ತು ಸಾಮಾಜಿಕ ನ್ಯಾಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕಾರ್ಮಿಕರು, ರೈತರು ಮತ್ತು ಸಾಮಾನ್ಯ ಜನರ ಹಿತಕ್ಕಾಗಿ ಹೋರಾಡಿ, ನ್ಯಾಯಾಂಗದಲ್ಲಿ ಧೈರ್ಯ ಮತ್ತು ಸತ್ಯದ ಪ್ರತಿಕವಾಗಿ ಪರಿಗಣಿಸಲ್ಪಟ್ಟಿದ್ದಾರೆ ಎಂದು ಪವನ್​ ಕಲ್ಯಾಣ್​ ಬಣ್ಣಿಸಿದರು. ನ್ಯಾಯಾಂಗದ ತೀರ್ಪುಗಳು ಮತ್ತು ಕಾರ್ಯವೈಖರಿ ಪ್ರೇರಣೆಯಾಗಿ ಪರಿಣಮಿಸುತ್ತವೆ. ಅಂತೆಯೇ ಗೋಪಾಲ್​ಗೌಡರು ನೀರಿನ ಸಮಸ್ಯೆ, ಭೂಸ್ವಾಧಿನ ಮತ್ತು ಸಾಮಾಜಿಕ ಸೌಹಾರ್ದ ಸಂಬಂಧಿತ ವಿಷಯಗಳ ಮೇಲೂ ಗಮನ ಹರಿಸಿದ್ದಾರೆ ಎಂದರು. ಗೋಪಾಲಗೌಡರು ನ್ಯಾಯಮೂರ್ತಿ ಎನ್ನುವುದಕ್ಕಿಂತ ಕಾರ್ಮಿಕರು, ರೈತರು ಮತ್ತು ಸಾಮಾಜಿಕ ವರ್ಗಗಳ ಹಿತಕ್ಕಾಗಿ ಹೋರಾಡಿದ ನಾಯಕ. ಅವರ ತೀರ್ಪುಗಳಲ್ಲಿ ಸಾಮಾನ್ಯ ಜನರ ಹಕ್ಕು ರಕ್ಷಣೆ ಮತ್ತು ಸಬಲೀಕರಣದ ಸ್ಪಷ್ಟ ಸಂದೇಶವಿದೆ, ಇದು ಸಮಾಜದಲ್ಲಿ ನ್ಯಾಯತಂತ್ರದ ಸಾರ್ಥಕತೆ ಹೆಚ್ಚಿಸಿದೆ ಎಂದರು.

ಪೆನ್ನಾರ್​ ಮತ್ತು ಪಾಲಾರ್​ ನದಿ ನೀರಿನ ಸಮಸ್ಯೆ ಮತ್ತು ಕೋಲಾರ ಭಾಗದ ಕೆರೆಗಳ ಸಂರಕ್ಷಣೆ ಮತ್ತು ನದಿ ನೀರಿನ ಕುರಿತು ಅವರು ಹೆಚ್ಚು ಮುತುವರ್ಜಿವಹಿಸಿದ್ದಾರೆ. ಕೆಲ ವಿಚಾರದಲ್ಲಿ ಅವರ ತೀರ್ಪುಗಳು ಪರಿಸರ ಸಂರಕ್ಷಣೆ ಮಹತ್ವ ಬಲಪಡಿಸುತ್ತವೆ ಎಂದು ಹೇಳಿದರು.ಆಂಧ್ರ ಮತ್ತು ಕರ್ನಾಟಕದ ಸಂಬಂಧ ಗೌರವದಿಂದ ಕೂಡಿದೆ. ಕಲೆ ಮತ್ತು ಸಂಸತಿ ಎಲ್ಲರನ್ನು ಒಂದೂಗೂಡಿಸಬೇಕೇ ವಿನ@ ಬೇರ್ಪಡಿಸಬಾರದು. ನಾವೆಲ್ಲ ಭಾರತ ಮಾತೆಯ ಮಕ್ಕಳು. ಕರ್ನಾಟಕವು ಅದ್ಭುತ ಪರಂಪರೆ,

ಸಂಸತಿಯ ನಾಡು ಎಂದರು.

ಕೇಂದ್ರ ಸಚಿವ ವಿ.ಸೋಮಣ್ಣ ಮಾತನಾಡಿ, ಗೋಪಾಲಗೌಡರು ಕಾನೂನಿನಡಿ ಎಲ್ಲ ವರ್ಗದವರಿಗೂ ಸಮಾನತೆ ಕೊಡಬೇಕು ಎನ್ನುವ ತೀರ್ಮಾನ ಮಾಡಿ, ಪಶ್ಚಿಮ ಬಂಗಾಳದಂತಹ ರಾಜ್ಯದಲ್ಲಿನ ಬಡವರಿಗೆ ಅನ್ಯಾಯ ಆಗಬಾರದು ಎಂದು ಹಲವಾರು ಜನಪರ ಆದೇಶ ಮಾಡಿದ್ದಾರೆ ಎಂದು ಬಣ್ಣಿಸಿದರು.

ಸಾಮಾಜಿಕ ನ್ಯಾಯ, ನೀರಿನ ಹೋರಾಟ ಮತ್ತು ರಾಜಕೀಯ ನಾಯಕತ್ವದ ಮಹತ್ವವನ್ನು ಒಟ್ಟಾಗಿ ಬಿಂಬಿಸುವುದು, ಸ್ಥಳಿಯ ಸಮುದಾಯಕ್ಕೆ ಪ್ರೇರಣೆಯಾಗಿದೆ ಮತ್ತು ಭವಿಷ್ಯದ ಬೆಳವಣಿಗೆಗಳಿಗೆ ಈ ಸಮಾರಂಭದ ದಿಕ್ಸೂಚಿಯಾಗಲಿದೆ ಎಂದರು.

ಮಾಜಿ ಶಾಸಕ ಎಂ.ಕೃಷ್ಣಾರೆಡ್ಡಿ ಮಾತನಾಡಿ, ರಾಜ್ಯ ಸರ್ಕಾರ ಅವಿಭಜಿತ ಎರಡು ಜಿಲ್ಲೆಗಳಿಗೆ ಕುಡಿಯುವ ನೀರಿಗಾಗಿ ಎತ್ತಿನಹೊಳೆ ಯೋಜನೆ ಜಾರಿಗೆ ತರುವುದಾಗಿ ಹೇಳಿ ಪ್ರತಿ ವರ್ಷ ಕೋಟ್ಯಂತರ ರೂ. ವ್ಯಯ ಮಾಡುತ್ತಿದೆಯೇ ಹೊರತು ನೀರು ಮಾತ್ರ ಬರಲಿಲ್ಲ. ಆದ್ದರಿಂದ ಕೃಷ್ಣಾ ನದಿ ನೀರನ್ನು ನಮ್ಮ ಜಿಲ್ಲೆಗಳಿಗೆ ಹರಿಸುವ ಬಗ್ಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಜತೆ ಚರ್ಚೆಸಿ ನೀರಿನ ಸಮಸ್ಯೆ ನೀಗಿಸಲು ಸಹಕಾರ ನೀಡುವಂತೆ ಮನವಿ ಮಾಡಿದರು. ಸಮಾಜ ಸೇವಕರನ್ನು ಸನ್ಮಾನಿಸಲಾಯಿತು. ಜಿಲ್ಲಾ ರಕ್ಷಣಾಧಿಕಾರಿ ಕುಶಲ್​ ಚೌಕ್ಸೆ ಬಂದೋಬಸ್ತ್​ ಕಲ್ಪಿಸಿದ್ದರು.

ಕೃಷ್ಣಾ ನದಿ ನೀರಿಗಾಗಿ ಜಲಾಗ್ರಹ ಸಮಾವೇಶ

ನ್ಯಾಯಮೂರ್ತಿ ವಿ.ಗೋಪಾಲ್​ ಗೌಡ ಮಾತನಾಡಿ,75ನೇ ಹುಟ್ಟುಹಬ್ಬದ ಸಂಭ್ರಮಕ್ಕಿಂತ ಅವಿಭಜಿತ ಜಿಲ್ಲೆಗಳಾದ ಕೋಲಾರ ಮತ್ತು ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು ಹರಿಸಲು ಮನವಿ ಮಾಡುವ ಉದ್ದೇಶದಿಂದ ಇಲ್ಲಿಗೆ ಕರೆತಂದಿರುವುದು.ಕೃಷ್ಣಾ ನದಿ ನೀರಿಗಾಗಿ ಹೋರಾಟ ನಡೆಸಲು ಜಲಾಗ್ರಹ ಹೆಸರಿನಲ್ಲಿ ಸಮಾವೇಶ ಹಮ್ಮಿಕೊಂಡಿರುವುದಾಗಿ ಹೇಳಿದರು.

ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಜತೆ ಪವನ್​ ಕಲ್ಯಾಣ್​ ಚರ್ಚಿಸಿ, ನೀರು ಹರಿಸುವ ಕ್ರಮ ಕೈಗೊಳ್ಳುತ್ತಾರೆಂಬ ಭರವಸೆ ನನಗಿದೆ ಎಂದರು.

ಕನ್ನಡದಲ್ಲೇ ಭಾಷಣ!

ಮೊದಲಿಗೆ ಮಾತು ಆರಂಭಿಸಿದ ಪವನ್​ ಕಲ್ಯಾಣ್​ ಕನ್ನಡದಲ್ಲೇ ಮಾತನಾಡಿದ್ದು, ಗಮನ ಸೆಳೆಯಿತು. ನೆಚ್ಚಿನ ನಟನನ್ನು ನೋಡಲು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿ ಆಂಧ್ರದ ಅಭಿಮಾನಿಗಳ ಮಹಾಪೂರವೇ ಹರಿದು ಬಂದಿತ್ತು. ನೀರಿನ ಸಮಸ್ಯೆ ಕುರಿತ ಪುಸ್ತಕವನ್ನ ವಿ.ಗೋಪಾಲಗೌಡರು ಪವನ್​ ಕಲ್ಯಾಣ್​ಗೆ ನೀಡಿ ಸ್ಥಳಯ ಸಮಸ್ಯೆ ಬಗ್ಗೆ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net