

ಗಂಗೊಳ್ಳಿ: 38 ವರ್ಷಗಳಿಂದ ಸೇವಾ ಸಂಗಮ ನಿವೇದಿತಾ ಶಿಶು ಮಂದಿರ ಪುಟಾಣಿಗಳಲ್ಲಿ ಭಾರತೀಯ ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರಗಳನ್ನು ಬೆಳೆಸುವ ಉದ್ದೇಶದಿಂದ ಮಕ್ಕಳ ಬೆಳವಣಿಗೆಗೆ ಪೂರಕವಾದ ಶಿಕ್ಷಣವನ್ನು ನೀಡುತ್ತಿದೆ. ಮಕ್ಕಳ ಶಿಕ್ಷಣಕ್ಕೆ ಯಾವುದೇ ರೀತಿಯ ಚ್ಯುತಿ ಬಾರದಂತೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಿಶು ಮಂದಿರ ಶ್ರಮಿಸಲಿದೆ ಎಂದು ಗಂಗೊಳ್ಳಿಯ ಸೇವಾ ಸಂಗಮ ನಿವೇದಿತಾ ಶಿಶು ಮಂದಿರದ ಸಂಚಾಲಕ ಡಾ.ಕಾಶೀನಾಥ ಪೈ ಹೇಳಿದರು.
ಶಿಶು ಮಂದಿರದ ನಗರ ಜಯವಂತ ನಾಯಕ್ ಸಭಾಭವನದಲ್ಲಿ ಸೋಮವಾರ ಜರುಗಿದ 2024-25ನೇ ಸಾಲಿನ ಶಿಶು ಮಂದಿರ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ವಹಿಸಿ ಮಾತನಾಡಿದರು.
ಶಿಶು ಮಂದಿರ ಅಧ್ಯಕ್ಷ ಬಿ.ರಾಘವೇಂದ್ರ ಪೈ ಅಧ್ಯಕ್ಷತೆ ವಹಿಸಿದ್ದರು. ಶಿಶು ಮಂದಿರಕ್ಕೆ ಆಗಮಿಸಿದ ಪುಟಾಣಿಗಳ ಕಾಲುಗಳನ್ನು ತೊಳೆದು, ಕುಂಕುಮದ ತಿಲಕವನ್ನಿಟ್ಟು, ಆರತಿ ಬೆಳಗಿ ಸಂಪ್ರದಾಯಬದ್ಧವಾಗಿ ಅದ್ದೂರಿಯಾಗಿ ಸ್ವಾಗತಿಸಿಕೊಳ್ಳಲಾಯಿತು. ಶಿಶು ಮಂದಿರ ಸದಸ್ಯರಾದ ಬಿ.ಲಕ್ಷ್ಮೀಕಾಂತ ಮಡಿವಾಳ, ವಸಂತಿ ಎನ್.ಖಾರ್ವಿ, ಗಾಯತ್ರಿ ಕೊಡಂಚ, ಮಾತಾಜಿ ಪ್ರೇಮಾ, ರತ್ನಾ, ಪಾಲಕರು ಮೊದಲಾದವರು ಉಪಸ್ಥಿತರಿದ್ದರು.
ಅಧ್ಯಕ್ಷ ಬಿ.ರಾಘವೇಂದ್ರ ಪೈ ಸ್ವಾಗತಿಸಿದರು. ಮಾಜಿ ಅಧ್ಯಕ್ಷೆ ಸವಿತಾ ಯು.ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಅಶ್ವಿತಾ ಜಿ.ಪೈ ವಂದಿಸಿದರು.