

ಹಗರಿಬೊಮ್ಮನಹಳ್ಳಿ: ದಾನಿಗಳಿಂದ ಸರ್ಕಾರಿ ಶಾಲೆಗಳ ಪ್ರಗತಿ ಸಾಧ್ಯ ಎಂದು ಪಿಎಂಶ್ರೀ ಸಮಾಹಿಪ್ರಾ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಮಜ್ಗಿ ವೀರೇಶ ಹೇಳಿದರು.
ಇದನ್ನೂ ಓದಿ:ಯಕ್ಷಶಿಕ್ಷಣ ಶಾಲಾ ಮುಖ್ಯಶಿಕ್ಷಕರ ಸಮಾವೇಶ
ಪಟ್ಟಣದ ಹಳೇಊರಿನ ಪಿಎಂಶ್ರೀ ಸಮಾಹಿಪ್ರಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದರು. 3 ವರ್ಷದ ಅವಧಿಯಲ್ಲಿ ಎಸ್ಡಿಎಂಸಿ, ಸಿಬ್ಬಂದಿ, ಶಾಸಕ, ಪುರಸಭೆ ಸದಸ್ಯರು, ಶಾಲಾಭಿಮಾನಿಗಳಿಂದ ದಾನ ಪಡೆದು ಕಂಪ್ಯೂಟರ್ ಕೊಠಡಿ, ಶೌಚಗೃಹ, 4 ಕೊಠಡಿ ನಿರ್ಮಾಣ, ಕೆಕೆಆರ್‌ಡಿಬಿ ಅನುದಾನದಲ್ಲಿ ಕೊಠಡಿ ಛಾವಣಿ, ಶಾಲೆ ಹಳೇ ಕಟ್ಟಡಗಳ ದುರಸ್ತಿ, ಆಟದ ಮೈದಾನ ನಿರ್ಮಿಸಲಾಗಿದೆ. ಇದರಿಂದ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಸರ್ಕಾರಿ ಶಾಲಾ ಮಕ್ಕಳಿಗೆ ಟ್ರ್ಯಾಕ್‌ಸೂಟ್ ಎಲ್‌ಕೆಜಿ ಮತ್ತು ಯುಕೆಜಿ ಮಕ್ಕಳಿಗೆ ಸಮವಸ್ತ್ರ ನೀಡಲಾಗಿದೆ ಎಂದು ತಿಳಿಸಿದರು.
ಬಿಇಒ ಮೈಲೇಶ್ ಬೇವೂರು ಮಾತನಾಡಿ, ಗುಣಮಟ್ಟದ ಶಿಕ್ಷಣಕ್ಕೆ ಎಸ್ಡಿಎಂಸಿ ಮತ್ತು ಶಿಕ್ಷಕರ ಒಗ್ಗಟ್ಟು ಮುಖ್ಯ ಎಂದರು. ಸ್ಕೌಟ್ಸ್, ಗೈಡ್ಸ್ ಬುಲ್‌ಬುಲ್ ತಂಡ, ರಾಜ್ಯಪಾಲರಿಂದ ಪ್ರಶಸ್ತಿ ಪಡೆದ ಮಕ್ಕಳಿಗೆ ಪ್ರಶಂಸಾಪತ್ರ ಮತ್ತು ಬಹುಮಾನ ವಿತರಿಸಲಾಯಿತು. ನಂತರ ದಾನಿಗಳನ್ನು ಸನ್ಮಾನಿಸಲಾಯಿತು.
ಮುಖ್ಯಶಿಕ್ಷಕ ವೀರನಗೌಡ, ಪುರಸಭೆ ಸದಸ್ಯರಾದ ಮಂಗಳಾ ರವೀಂದ್ರ ಗೌಡ, ಚನ್ನಮ್ಮ ವಿಜಯಕುಮಾರ್, ನಾಮ ನಿರ್ದೇಶಕರಾದ ಉಪ್ಪಾರ ಬಾಳಪ್ಪ, ತ್ಯಾವಣಿಗಿ ಕೊಟ್ರೇಶ್, ಬಿಆರ್‌ಸಿ ಪರಮೇಶ್ವರಯ್ಯ ಸೊಪ್ಪಿಮಠ, ನಿವೃತ್ತ ಮುಖ್ಯಶಿಕ್ಷಕರಾದ ಎಚ್.ಬಸಪ್ಪ, ವಿ.ಎಸ್.ಮಲ್ಲಿಕಾರ್ಜುನ, ರೆಡ್ಡಿ ಕೊಟ್ರೇಶ್, ದಾನಿಗಳಾದ ವಿ.ಎಂ.ಕೊಟ್ರೇಶ, ಬಸವರಾಜ ಮಡಿವಾಳ, ಎಚ್.ಎಂ.ಶಿವಕುಮಾರ, ಎಸ್ಡಿಎಂಸಿ ಉಪಾಧ್ಯಕ್ಷೆ ಗೀತಾತಟ್ಟಿ, ಸದಸ್ಯರಾದ ಸುನಿಲ್, ವೆಂಕಟೇಶ್ ಪತ್ತಾರ್, ಸೋಮಶೇಖರ , ಶಬೀರಾ ಬಿ, ಶಿಲ್ಪಾ, ಗೀತಾ ಪತ್ತಾರ್, ಬುಡೆನ್ ಸಾಬ್ ಇತರರಿದ್ದರು.