

ಉಡುಪಿ: ಯಕ್ಷಶಿಕ್ಷಣ ಟ್ರಸ್ಟ್ ಆಶ್ರಯದಲ್ಲಿ ಉಡುಪಿ, ಕಾಪು ಮತ್ತು ಕುಂದಾಪುರ ವಿಧಾನಸಭಾ ಕ್ಷೇತ್ರದ 69 ಪ್ರೌಢಶಾಲೆಗಳ ಮಕ್ಕಳಿಂದ ಯಕ್ಷಗಾನ ಪ್ರದರ್ಶನ ನ. 29ರಿಂದ ಜನವರಿ 5ರ ವರೆಗೆ ಬ್ರಹ್ಮಾವರ, ಉಡುಪಿ, ಕಾಪು, ಶಿರ್ವ, ಮಣೂರು ಹಾಗೂ ಕುಂದಾಪುರದಲ್ಲಿ ಆಯೋಜಿಸಲಾಗಿದೆ. ಈ ಬಗ್ಗೆ ಮುಖ್ಯಶಿಕ್ಷಕರ ಸಮಾಲೋಚನಾ ಸಭೆ ಶುಕ್ರವಾರ ಉಡುಪಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಸಲಾಯಿತು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಯಕ್ಷಶಿಕ್ಷಣ ಟ್ರಸ್ಟ್ನ ಅಭಿಯಾನವನ್ನು ನಾವೆಲ್ಲರೂ ಯಶಸ್ವಿಗೊಳಿಸಬೇಕಾಗಿದೆ. ಯಕ್ಷಶಿಕ್ಷಣ ಎಸ್.ಎಸ್.ಎಲ್.ಸಿ ಫಲಿತಾಂಶಕ್ಕೆ ಪೂರಕ ಹೊರತು ಮಾರಕವಲ್ಲ ಎಂದರು. ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಶಾಲಾ ಮುಖ್ಯಸ್ಥರಿಗೆ ಮಾರ್ಗದರ್ಶನ ನೀಡಿದರು.
ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಯಕ್ಷಶಿಕ್ಷಣ ಟ್ರಸ್ಟ್ನ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ನಿರೂಪಿಸಿದರು. ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ವಿ.ಜಿ. ಶೆಟ್ಟಿ, ಸದಸ್ಯರಾದ ಅನಂತರಾಜ ಉಪಾಧ್ಯ, ಗಣೇಶ್ ಬ್ರಹ್ಮಾವರ, ನಟರಾಜ ಉಪಾಧ್ಯ, ನಾಗರಾಜ ಹೆಗಡೆ, ಎಚ್. ಎನ್. ವೆಂಕಟೇಶ್ ಪಾಲ್ಗೊಂಡಿದ್ದರು. ಕೋಶಾಧಿಕಾರಿ ಎಚ್. ಎನ್. ಶೃಂಗೇಶ್ವರ ವಂದಿಸಿದರು.