

ವಿಜಯವಾಣಿ ಸುದ್ದಿಜಾಲ ಕೋಟ
ಸರ್ಕಾರಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರಕುತ್ತಿದೆ ಎಂದು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್ ಹೇಳಿದರು. ಗಿಳಿಯಾರು ಕೋಟದ ಶಾಂಭವೀ ವಿದ್ಯಾದಾಯಿನಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ನೋಟ್‌ಬುಕ್ ಸಮವಸ್ತ್ರ, ಸ್ಕೂಲ್ ಬ್ಯಾಗ್, ಬೆಲ್ಟ್, ಐಡಿ ಕಾರ್ಡ್ ಹಾಗೂ ಕಲಿಕೋಪಕರಣ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಗಳಿಂದ ಕನ್ನಡ ಮಾಧ್ಯಮ ಅನುದಾನಿತ ಶಿಕ್ಷಣ ಸಂಸ್ಥೆಗಳು ಮಕ್ಕಳ ಕೊರತೆ ಎದುರಿಸುತ್ತಿದ್ದೇವೆ.ಪಾಲಕರಲ್ಲಿ ಆಂಗ್ಲ ಮಾಧ್ಯಮದ ವ್ಯಾಮೋಹ ಅತಿಯಾಗಿ ಕಾಡುತ್ತಿದೆ, ಪ್ರಸ್ತುತ ಕನ್ನಡ ಮಾಧ್ಯಮ ಶಾಲೆಗಳ ಮಕ್ಕಳಿಗೆ ಪ್ರತಿಯೊಂದು ಸವಲತ್ತು ಸಿಗುತ್ತಿದ್ದು, ಪಾಲಕರು ಸಂಸ್ಕಾರಭರಿತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಪಿ.ನರಸಿಂಹ ಐತಾಳ್ ಕಲಿಕೋಪಕರಣ ವಿತರಿಸಿದರು. ಶಾಂಭವಿ ಅನ್ನದಾಯಿನಿ ಟ್ರಸ್ಟ್ ಕೋಟ, ಗೀತಾನಂದ ಫೌಂಡೇಶನ್ ಮಣೂರು, ದಿ.ಸಾವಿತ್ರಮ್ಮ ಪರಮೇಶ್ವರ ಮಯ್ಯ ಸ್ಮಾರಕ ದತ್ತಿನಿಧಿ, ಯಜ್ಞನಾರಾಯಣ ಹೇರ್ಳೆ ಸ್ಮಾರಕ ದತ್ತಿನಿಧಿ ಇಂದಿರಾಕೃಷ್ಣ ಮಧ್ಯಸ್ಥ, ಗಿಳಿಯಾರು ಪಾರ್ವತಮ್ಮ ವೆಂಕಪ್ಪ ಮಯ್ಯ ಸ್ಮರಣಾರ್ಥ, ಪ್ರಕಾಶ್ ಪ್ರಿಂಟರ್ಸ್ ಕೋಟ ಕೊಡಮಾಡಿದ ಸಮವಸ್ತ್ರ, ನೋಟ್‌ಬುಕ್, ಇಂಗ್ಲಿಷ್ ಕಲಿಕಾ ಪುಸ್ತಕ, ಕಲಿಕೋಪಕರಣ, ಬೆಲ್ಟ್, ಸ್ಕೂಲ್ ಬ್ಯಾಗ್, ಉಚಿತ ಗುರುತಿನ ಚೀಟಿಯನ್ನು ವಿದ್ಯಾರ್ಥಿಗಳಿಗೆ ಹಸ್ತಾಂತರಿಸಲಾಯಿತು.
ಆಡಳಿತ ಮಂಡಳಿ ಅಧ್ಯಕ್ಷ ಕೆ.ರಾಜಾರಾಮ್ ಐತಾಳ್ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಸಂಚಾಲಕ ಸಚಿನ್ ಕಾರಂತ್,ಹಳೇ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಜಿ.ಸತೀಶ್ ಹೆಗ್ಡೆ, ಎಸ್‌ಡಿಎಂಸಿ ಅಧ್ಯಕ್ಷ ರವೀಂದ್ರ ಜೋಗಿ, ನಿವೃತ್ತ ಶಿಕ್ಷಕ ಎಂ.ಎನ್.ಮಧ್ಯಸ್ಥ, ಆಡಳಿತ ಮಂಡಳಿ ಸದಸ್ಯ ಜಿ.ವಿ.ಅಶೋಕ್ ಹೇರ್ಳೆ ಮತ್ತಿತರರು ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ದಿವಾಕರ್ ರಾವ್ ಸ್ವಾಗತಿಸಿ, ಶಿಕ್ಷಕಿ ವಿನೋದಾ ವಿ. ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಕ ರಮೇಶ್ ಕುಮಾರ್ ವಂದಿಸಿದರು.
ಕನ್ನಡ ಮಾಧ್ಯಮ ಶಾಲೆಗಳ ಅವನತಿಗೆ ಸರ್ಕಾರದ ನೀತಿಗಳೇ ಕಾರಣ. ಖಾಸಗಿ ಶಿಕ್ಷಣ ಸಂಸ್ಥೆಗಳು ವ್ಯವಹಾರಿಕ ಕ್ಷೇತ್ರವಾಗಿ ಮಾರ್ಪಾಡುಗೊಂಡಿದೆ. ಸರ್ಕಾರಿ, ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಶಿಕ್ಷಕರ ನೇಮಕಾತಿ ಇಲ್ಲದಾಗಿದೆ. ಈ ದಿಸೆಯಲ್ಲಿ ಸರ್ಕಾರದ ಕೆಟ್ಟ ನೀತಿ ಖಂಡಿಸಿ ಮಕ್ಕಳ ಭವಿಷ್ಯದ ಭದ್ರ ಬುನಾದಿಗೆ ಕನ್ನಡ ಮಾಧ್ಯಮ ಶಿಕ್ಷಣವೇ ಅಂತಿಮವಾಗಿದೆ.-ಪಿ.ನರಸಿಂಹ ಐತಾಳ್, ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ