

ವಿಜಯವಾಣಿ ಸುದ್ದಿಜಾಲ ಕಾರ್ಕಳ
ವಿವೇಕವಿಲ್ಲದೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಿಲ್ಲ ಎಂದು ಬೆಂಗಳೂರು ರಾಮಕೃಷ್ಣ ಮಠದ ವೀರೇಶಾನಂದಜಿ ಹೇಳಿದರು. ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ ಆಯೋಜಿಸಿದ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಸವಾಲು ಮತ್ತು ಪ್ರತಿಕೂಲತೆಗಳನ್ನು ಎದುರಿಸಲು ಸ್ವಾಮಿ ವಿವೇಕಾನಂದರ ಸ್ಫೂರ್ತಿ’ ಕುರಿತು ಉಪನ್ಯಾಸ ನೀಡಿದರು.
ತನ್ನತನದ ಕುರಿತು ಯಾವಾಗಲೂ ಅಭಿಮಾನ ಇರಬೇಕೇ ಹೊರತು ಪ್ರತ್ಯೇಕತೆಯ ಭಾವ ಬರಬಾರದು. ದಿವ್ಯತೆಯ ಬೆಳಕೊಂದನ್ನು ಹೃದಯದಲ್ಲಿ ಮೂಡಿಸುವ ಪ್ರಯತ್ನದಲ್ಲಿ ವಿದ್ಯಾರ್ಥಿಗಳು ಸಜ್ಜಾಗಿರಬೇಕು. ಇವತ್ತಿನ ವಿದ್ಯಾರ್ಥಿಗಳಿಗೆ ಆಧ್ಯಾತ್ಮಿಕ ವಿದ್ಯೆಯ ಅಗತ್ಯವಿದೆ ಎಂದರು.
ಪ್ರಾಂಶುಪಾಲ ಮಂಜುನಾಥ್ ಎ.ಕೋಟ್ಯಾನ್ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳಿಗೆ ಈ ವಯಸ್ಸಲ್ಲಿ ಆಧ್ಯಾತ್ಮಿಕತೆಯ ಬೋಧನೆಗಳು ಅರಿವಿಗೆ ಬರದೇ ಇದ್ದರೂ ಭವಿಷ್ಯದಲ್ಲಿ ಅನುಕೂಲವಾಗಲಿದೆ. ಒತ್ತಡಗಳಿಲ್ಲದ ಶಿಕ್ಷಣ ಇವತ್ತು ಸಿಗುತ್ತಿಲ್ಲ. ಅದಕ್ಕಾಗಿ ಮನಸ್ಸನ್ನು ಹಿಡಿದಿಡುವ ಆಧ್ಯಾತ್ಮಿಕತೆಯ ಭದ್ರಬುನಾದಿ ಹಾಕುವ ಕೆಲಸ ವಿದ್ಯಾರ್ಥಿ ದೆಸೆಯಲ್ಲಿಯೇ ಆಗಬೇಕಿದೆ ಎಂದರು.
ಹಿರಿಯ ಸ್ವಯಂಸೇವಕ ಬೆಳ್ಳಾಳ ಗೋಪಿನಾಥ್ ರಾವ್, ಕಾಲೇಜಿನ ಆಂತರಿಕ ಗುಣಮಟ್ಟದ ಭರವಸೆ ಕೋಶ ಸಂಯೋಜಕ ನಾಗಭೂಷಣ ಎಚ್.ಜಿ. ಉಪಸ್ಥಿತರಿದ್ದರು. ರಾಮಕೃಷ್ಣ ಮಿಷನ್ ಮಂಗಳೂರು ಮುಖ್ಯ ಸಂಯೋಜಕ ರಂಜನ್ ಬೆಳ್ಳರ್ಪಾಡಿ ಪ್ರಸ್ತಾವನೆಗೈದರು. ಕನ್ನಡ ವಿಭಾಗ ಮುಖ್ಯಸ್ಥೆ ವನಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ.ಮಂಜುನಾಥ್ ಭಟ್ ವಂದಿಸಿದರು.
ವಿದ್ಯಾರ್ಥಿಗಳು ಸದಾ ಸವಾಲನ್ನು ಎದುರಿಸುವ ಸಲುವಾಗಿ ಧೈರ್ಯವಂತರಾಗಿರಬೇಕು. ಜ್ಞಾನಾರ್ಜನೆ ಮಾಡುವುದು ಸುಲಭದ ಮಾತಲ್ಲ. ಸವಾಲುಗಳನ್ನು ಎದುರಿಸುತ್ತಾ ಮುನ್ನುಗ್ಗುವ ಛಾತಿ ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆಗೆ ವಿದ್ಯಾಭ್ಯಾಸ ಭಾರವೆನ್ನುವ ಸ್ಥಿತಿಯಿಂದ ಹೊರಬರಬೇಕಿದೆ.
ವೀರೇಶಾನಂದಜೀ, ರಾಮಕೃಷ್ಣ ಮಠ, ಬೆಂಗಳೂರು