‘ಬ್ರ್ಯಾಂಡ್ ಬೆಂಗಳೂರು’ ಅಭಿಯಾನಕ್ಕೆ ಶಿಕ್ಷಣ ಸೇರ್ಪಡೆ

preethi
Published on

ಬೆಂಗಳೂರು: ರಾಜಧಾನಿಯಲ್ಲಿ ಉತ್ತಮ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಒಳ್ಳೆಯ ಯೋಜನೆ ರೂಪಿಸುವ ಅಗತ್ಯವಿದೆ ಎಂದು ಬಿಬಿಎಂಪಿಯ ಶಿಕ್ಷಣ ವಿಭಾಗದ ವಿಶೇಷ ಆಯುಕ್ತೆ ಹಾಗೂ ಶೈಕ್ಷಣಿಕ ಬೆಂಗಳೂರಿನ ನೋಡಲ್ ಅಧಿಕಾರಿ ಪ್ರೀತಿ ಗೆಹ್ಲೋಟ್ ಹೇಳಿದ್ದಾರೆ.

‘ಬ್ರ್ಯಾಂಡ್ ಬೆಂಗಳೂರು’ ಯೋಜನೆಯಡಿ ಶೈಕ್ಷಣಿಕ ಬೆಂಗಳೂರು ವಿಷಯಕ್ಕೆ ಸಂಬಂಧಿಸಿದಂತೆ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಸೋಮವಾರ ನಡೆದ ಮೊದಲ ಸಭೆಯಲ್ಲಿ ಮಾತನಾಡಿದರು.

ಉತ್ತಮ ಗುಣಮಟ್ಟ ಶಿಕ್ಷಣ ನೀಡಲು ಎಲ್ಲರ ಸಹಕಾರ ಅಗತ್ಯವಿದೆ. ನಾವೆಲ್ಲರೂ ಸೇರಿ ಉತ್ತಮ ಯೋಜನೆ ರೂಪಿಸಬೇಕಿದೆ. ಬೆಂಗಳೂರು ಅನ್ನು ಸಂಚಾರಯುಕ್ತ, ಹಸಿರು, ಸ್ವಚ್ಛ, ಜನರಹಿತ, ಆರೋಗ್ಯಕರ, ಟೆಕ್ ಮತ್ತು ಜಲಸುರಕ್ಷಾ ವಿಭಾಗದಲ್ಲಿ ಬದಲಾವಣೆಗೆ ಆರಂಭಿಸಿರುವ ಯೋಜನೆಯಡಿ ನಾಗರಿಕರು, ಸಂಘ ಸಂಸ್ಥೆಗಳು, ಎನ್‌ಜಿಒಗಳು ಹಾಗೂ ಕಂಪನಿಗಳಿಂದ ಸಲಹೆ ಮತ್ತು ಅಭಿಪ್ರಾಯಗಳು ಸ್ವೀಕಾರವಾಗಿವೆ. ಯೋಜನೆಯಡಿ ಹೊಸದಾಗಿ ‘ಶೈಕ್ಷಣಿಕ ಬೆಂಗಳೂರು’ ವಿಷಯ ಸೇರಿಸಲಾಗಿದೆ ಎಂದರು.

ಶಿಕ್ಷಣ ಸಂಬಂಧಪಟ್ಟಂತೆ ಮುಂದೆ ಬರುವ ಸಲಹೆಗಳನ್ನು ಶೈಕ್ಷಣಿಕ ಸಂಸ್ಥೆಗಳ ಪಾಲುದಾರಿಕೆ ಸಹಯೋಗದಲ್ಲಿ ಕ್ರೋಢೀಕರಿಸಿ ವರದಿ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು.ಬಿಬಿಎಂಪಿ ವ್ಯಾಪ್ತಿಯಲ್ಲಿ ಅಂದಾಜು 3 ಸಾವಿರ ಹಾಗೂ ಪಾಲಿಕೆ ಒಡೆತನದ 166 ಶಾಲಾ-ಕಾಲೇಜುಗಳಿವೆ. ಈ ಎಲ್ಲವನ್ನೂ ದತ್ತು ಪಡೆಯುವ ಸಲುವಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜತೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಶಿಕ್ಷಣ ವಿಭಾಗದ ಸಹಾಯ ಆಯುಕ್ತ ವೆಂಕಟರಾಜು, ಕಾಲೇಜು ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧಿಕಾರಿಗಳು, ಶಿಕ್ಷಣ ತಜ್ಞರು ಮತ್ತಿತರರಿದ್ದರು.

ಪ್ರಮುಖ ಸಲಹೆಗಳು ಸ್ವೀಕಾರ:

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟ ಶಿಕ್ಷಣ ನೀಡಿಕೆ, ಮೂಲಸೌಕರ್ಯ ವ್ಯವಸ್ಥೆ, ಪಾರಂಪರಿಕ ಶಾಲಾ ಕಾಲೇಜು ಗುರುತಿಸಿ ವಿನ್ಯಾಸಗೊಳಿಸುವುದು, ಮಕ್ಕಳು ಹಾಗೂ ಪಾಲಕರಿಗೆ ಕೌನ್ಸಿಲಿಂಗ್ ನೀಡಿ ಎಲ್ಲ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವಂತೆ ಮಾಡುವುದು, ಬೆಂಗಳೂರನ್ನು ಜ್ಞಾನ ನಗರಿಯನ್ನಾಗಿ ಪರಿವರ್ತಿಸುವುದು, ನಗರದಲ್ಲಿ ಹೆಚ್ಚು ಗ್ರಂಥಾಲಯ ತೆರೆದು ಓದುವ ಹವ್ಯಾಸ ಹೆಚ್ಚಿಸುವುದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ಮಕ್ಕಳಿಗೆ ತರಬೇತಿ ನೀಡುವುದು, ಮಕ್ಕಳಿಗಾಗಿ ಕ್ಲಸ್ಟರ್ ಅಕಾಡೆಮಿಕ್ ಸೆಂಟರ್ ತೆರೆಯುವುದು, ತಂತ್ರಜ್ಞಾನ ಬಳಸಿಕೊಂಡು ಸುಲಭ ರೀತಿಯಲ್ಲಿ ಶಿಕ್ಷಣ ಕಲಿಯುವ ವ್ಯವಸ್ಥೆ ಕಲ್ಪಿಸುವುದು, ವಿಷಯದ ಜತೆಗೆ ಲೋಕಜ್ಞಾನದ ಬಗ್ಗೆ ಅರಿವು ಮೂಡಿಸಬೇಕು, ಯಾವ ವಿಷಯದಲ್ಲಿ ಮಕ್ಕಳಿಗೆ ಹೆಚ್ಚು ಆಸಕ್ತಿಯಿದೆ ಎಂಬುದನ್ನು ಅರಿತು ಅದೇ ವಿಷಯದಲ್ಲಿ ಹೆಚ್ಚು ಪ್ರೋತ್ಸಾಹ ನೀಡಬೇಕು ಹಾಗೂ ಸಿಎಸ್‌ಆರ್ ಅಡಿ ಶೈಕ್ಷಣಿಕ ವ್ಯವಸ್ಥೆಯಲ್ಲಿ ಬದಲಾವಣೆ ತರುವುದು ಸೇರಿ ಇತರ ಸಲಹೆಗಳು ಸ್ವೀಕರವಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net