ಗ್ರಾಮೀಣ ಭಾಗದಲ್ಲಿ ಮಠಗಳಿಂದ ಶಿಕ್ಷಣ ಕ್ರಾಂತಿ

ಗ್ರಾಮೀಣ ಭಾಗದಲ್ಲಿ ಮಠಗಳಿಂದ ಶಿಕ್ಷಣ ಕ್ರಾಂತಿ
Published on

ಯಳಂದೂರು: ರಾಜ್ಯದ ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಮಠಗಳಿಂದ ಉನ್ನತ ಮಟ್ಟದ ಶಿಕ್ಷಣ ನೀಡಲು ಒತ್ತು ನೀಡುವ ಮೂಲಕ ಶಿಕ್ಷಣ ಕ್ರಾಂತಿಯನ್ನು ಮಾಡಲಾಗುತ್ತಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ನಿರ್ದೇಶಕ ಎನ್‌ರಿಚ್ ಮಹದೇವಸ್ವಾಮಿ ಹೇಳಿದರು.

ಪಟ್ಟಣದ ಕಾರಪುರ ವಿರಕ್ತಮಠದ ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ನಿರಂಜನ ಕಾನ್ವೆಂಟ್ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಮಠಗಳು ಇದ್ದು, ಇವು ಧಾರ್ಮಿಕ, ಶೈಕ್ಷಣಿಕ, ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ. ಕಾರಾಪುರ ವಿರಕ್ತಮಠವು 800 ವರ್ಷಗಳಷ್ಟು ಹಳೆಯದಾಗಿದೆ. ಮೈಸೂರು ರಾಜರ ಮನೆತನಕ್ಕೆ ಒಡೆಯರ ಬಿರುದನ್ನು ನೀಡಿದ ಕೀರ್ತಿ ಈ ಮಠಕ್ಕೆ ಸಲ್ಲುತ್ತದೆ. ಹೈದರಾಬಾದ್ ಸಂಶೋಧನ ಸಂಸ್ಥೆಯ ಈ ಮಠವು ಸಾಕಷ್ಟು ಹಳೆಯ ಮಠವಾಗಿದೆ ಎಂದು ತಿಳಿಸಿರುವುದು ಇದರ ಪುರಾತನ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಈ ಮಠದ ವಾತಾವರಣದಲ್ಲಿ ನಡೆಯುತ್ತಿರುವ ಶಾಲೆಯಲ್ಲಿ ಉತ್ತಮ ಶಿಕ್ಷಣವನ್ನು ನೀಡಲಾಗುತ್ತಿದೆ. ತಾಲೂಕಿನ ಸುತ್ತಮುತ್ತಲಿನ ಗ್ರಾಮಸ್ಥರು ತಮ್ಮ ಮಕ್ಕಳನ್ನು ಇಲ್ಲಿಗೆ ಸೇರಿಸುವ ಮೂಲಕ ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

ಮಕ್ಕಳು ಹೆಚ್ಚಾಗಿ ಮೊಬೈಲ್, ಟಿವಿಗಳಿಗೆ ಆದ್ಯತೆ ನೀಡುತ್ತಿದ್ದು, ಇದರಿಂದ ಶಿಕ್ಷಣ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದನ್ನು ಹೋಗಲಾಡಿಸುವ ಕೆಲಸವನ್ನು ಪಾಲಕರು ಮಾಡಬೇಕೆಂದು ಕಿವಿ ಮಾತು ಹೇಳಿದರು.

ಕಾರಪುರ ವಿರಕ್ತ ಮಠದ ಶ್ರೀ ಬಸವರಾಜಸ್ವಾಮಿ ಒಡೆಯರ್ ಮಾತನಾಡಿ, ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ, ಈ ಬಗ್ಗೆ ಪಾಲಕರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಶಾಲೆಯ ಸುತ್ತಮುತ್ತಲಿನ ಗ್ರಾಮೀಣ ಭಾಗದ ಜನರಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದು ತಿಳಿಸಿದರು. ಈ ಸಂದರ್ಭ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ಶಾಲೆಯ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ರೋಟರಿ ಅಧ್ಯಕ್ಷ ವೈ.ಎನ್.ಪ್ರಕಾಶ್, ಕೃಷಿಕ ಸಮಾಜದ ಅಧ್ಯಕ್ಷ ಗೌಡಹಳ್ಳಿ ರವಿ, ನಾಗೇಶ್, ಎಂ.ಮಲ್ಲಿಕಾರ್ಜುನಸ್ವಾಮಿ, ಬಸವಣ್ಣ, ಸೋಮಣ್ಣ, ನಾಗೇಶ್, ಮಂಜುನಾತ್, ಶ್ರೀನಿವಾಸ್, ತೇಜಸ್ವಿನಿ, ಶಶಿಧರ್, ಮುಖ್ಯ ಶಿಕ್ಷಕಿ ಶಮಂತಕಮಣಿ, ಶಿಕ್ಷಕರು, ಪಾಲಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net