

ಬೆಂಗಳೂರು: ಕರೊನಾ ಹೊಡೆತಕ್ಕೆ ಸಿಲುಕಿದ್ದ ಶಿಕ್ಷಣ ಸಂಸ್ಥೆಗಳು ಕಳೆದ ಒಂದು ವರ್ಷದಿಂದ ಶಾಲೆಗಳನ್ನು ತೆರೆಯಲಾಗದೆ ಕಂಗಲಾಗಿ ಕುಳಿತಿದ್ದವು. ಆದರೆ ರಾಜ್ಯ ಸರ್ಕಾರ ಪರಿಸ್ಥಿತಿ ಅವಲೋಕಿಸಿ ಇಂದಿನಿಂದ 6, 7, 8ನೇ ತರಗತಿಗಳನ್ನ ಪೂರ್ಣಪ್ರಮಾಣದಲ್ಲಿ ಆರಂಭಿಸಿದೆ. ಈ ನಡುವೆಯೇ ಶಾಲೆಗಳ ಪರಿಸ್ಥಿತಿ ವಿದ್ಯಾರ್ಥಿಗಳ ಹಾಜರಾತಿ ಬಗ್ಗೆ ಮಾಹಿತಿ ಪಡೆಯಲು ಶಿಕ್ಷಣ ಸಚಿವ ಎಸ್.ಸುರೇಶ್ಕುಮಾರ್ ಅವರು ಇಂದು ಹಲವು ಶಾಲೆಗಳಿಗೆ ಭೇಟಿ ನೀಡಿದರು.
ಶಾಲೆಗಳಿಗೆ ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮಗಳನ್ನು ಪರಿಶೀಲಿಸಿದ ಸಚಿವರು, ಶಾಲಾ ಕೊಠಡಿಗಳಲ್ಲಿ ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಮತ್ತು ನೆಲಮಂಗಲ ತಾಲೂಕಿನ ಹಲವು ಶಾಲೆಗಳಿಗೆ ಭೇಟಿ ನೀಡಿದ ಸಚಿವರು ಶಾಲೆಗಳಿಗೆ ಮಕ್ಕಳ ಹಾಜರಾತಿ, ಶಾಲೆಗಳಲ್ಲಿ ತೆಗೆದುಕೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆದು ಪರಿಶೀಲನೆ ನಡೆಸಿದರು. ಕರೊನಾದಿಂದಾಗಿ ಕಳೆದ ಒಂದು ವರ್ಷದಿಂದ ಶಾಲೆಗಳನ್ನು ಮುಚ್ಚಲಾಗಿತ್ತು. ಜನವರಿಯಿಂದ 9 ಮತ್ತು 10ನೇ ತರಗತಿ ಪ್ರಾರಂಭಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದ ಸರ್ಕಾರ ಉಳಿದ ತರಗತಿಗಳನ್ನು ಪ್ರಾರಂಭ ಮಾಡಿರಲಿಲ್ಲ. ಆದರೆ ಇದೀಗ ಕರೊನಾ ಕಡಿಮೆ ಆಗುತ್ತಿರುವುದನ್ನು ಗಮನಿಸಿ ಇಂದಿನಿಂದ 6-8 ನೇ ತರಗತಿಯನ್ನ ಪೂರ್ಣಪ್ರಮಾಣದಲ್ಲಿ ಆರಂಭಿಸಿದೆ.
ವಾರದ ಐದು ದಿನಗಳಲ್ಲಿ ಬೆಳಗ್ಗೆ 10.30ರಿಂದ ಸಂಜೆ 4.30ರವರೆಗೆ ತರಗತಿ ನಡೆಯಲಿದ್ದು, ಶನಿವಾರ ಮಾತ್ರ ಬೆಳಗ್ಗೆ 10ರಿಂದ ಮದ್ಯಾಹ್ನ 12.30 ವರೆಗೆ ತರಗತಿ ನಡೆಯಲಿದೆ. ಬೆಂಗಳೂರು ನಗರ ಹಾಗೂ ರಾಜ್ಯದ ಗಡಿಭಾಗಗಳಲ್ಲಿ ಕರೊನಾ ಆತಂಕದ ಹಿನ್ನೆಲೆಯಲ್ಲಿ 8ನೇ ತರಗತಿಯನ್ನು ಮಾತ್ರ ಪೂರ್ಣಪ್ರಮಾಣದಲ್ಲಿ ತೆರೆಯಲು ಅವಕಾಶ ನೀಡಲಾಗಿದ್ದು, 6-7 ನೇ ತರಗತಿಗೆ ಅವಕಾಶ ನೀಡಿಲ್ಲ. ಮಕ್ಕಳ ಯೋಗಕ್ಷೇಮ, ಆರೋಗ್ಯ ಹಾಗೂ ಶೈಕ್ಷಣಿಕ ಭವಿಷ್ಯ ದೃಷ್ಟಿಯಿಂದ ಶಾಲೆ ಆರಂಭ ಮಾಡಿದ್ದೇವೆ ಎಂದು ಸಚಿವ ಸುರೇಶ್ಕುಮಾರ್ ತಿಳಿಸಿದರು.
ಮಕ್ಕಳು ಹೆಚ್ಚುಕಾಲ ಶಾಲೆಯಿಂದ ವಂಚಿತರಾದರೆ ಕೂಲಿ ಕೆಲಸ, ಬಾಲಕಾರ್ಮಿಕರ ಪದ್ಧತಿ ಜಾಸ್ತಿಯಾಗಲಿದೆ. ತಂದೆ-ತಾಯಿ ಒಪ್ಪಿಗೆ ಪತ್ರವನ್ನು ತರುವಂತೆ ತಿಳಿಸಿದ್ದೆವು. ಹೀಗಾಗಿ ಇಲ್ಲಿಯೇ ಹತ್ತು ಪರ್ಸೆಂಟ್ ಬಿಟ್ಟು ಉಳಿದ ಎಲ್ಲರೂ ಒಪ್ಪಿಗೆ ಪತ್ರ ತಂದಿದ್ದಾರೆ. ಇಂದು ಆರಂಭವಾಗಿರುವ ತರಗತಿಗಳಲ್ಲಿ ಮಕ್ಕಳ ಹಾಜರಾತಿ ನನಗೆ ಖುಷಿ ತಂದಿದೆ ಶಾಲೆಯೊಂದರ ಪರಿಶೀಲನೆ ಬಳಿಕ ಸುದ್ದಿಗಾರರಿಗೆ ತಿಳಿಸಿದರು. ಇನ್ನು ಆನಲೈನ್ ಕ್ಲಾಸ್ನಲ್ಲಿ ಅಷ್ಟು ಸಮರ್ಪಕವಾಗಿ ತಿಳಿದುಕೊಳ್ಳಲು ಸಾಧ್ಯವಿಲ್ಲ, ಆ ಕಾರಣದಿಂದ ಇಂದಿನಿಂದ ಶಾಲೆಯನ್ನು ಪ್ರಾರಂಭಿಸಿದ್ದೇವೆ. ಈ ಭಾರಿ ಎಸ್ಎಸ್ಎಲ್ಸಿ ಪರೀಕ್ಷೆಗೆ ತಾತ್ಕಲಿಕಾ ವೇಳಾಪಟ್ಟಿ ನೀಡಲಾಗಿದ್ದು, ಈ ತಿಂಗಳ 25ರೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಆ ಬಳಿಕ ನಂತರ ಎಸ್ಎಸ್ಎಲ್ಸಿ ಪರಿಕ್ಷಾ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ಸಚಿವರು ಹೇಳಿದರು.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ