ವಿದ್ಯೆಗಿದೆ ಅಪಾರ ಮಹತ್ವ

ವಿದ್ಯೆಗಿದೆ ಅಪಾರ ಮಹತ್ವ
Published on

ಮದ್ದೂರು: ಪ್ರಪಂಚದಲ್ಲಿ ವಿದ್ಯೆಗಿರುವ ಶಕ್ತಿ ಹಾಗೂ ಮಹತ್ವ ಬೇರೆ ಯಾವುದಕ್ಕೂ ಇಲ್ಲ ಎಂಬುವುದನ್ನು ಅರಿತು ಕಠಿಣ ಪರಿಶ್ರಮಪಟ್ಟು ವ್ಯಾಸಂಗ ಮಾಡುವ ಮೂಲಕ ಪಾಲಕರಿಗೆ ಹಾಗೂ ಶಿಕ್ಷಕರಿಗೆ ಕೀರ್ತಿ ತರಬೇಕೆಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ತಾಲೂಕಿನ ಹೆಮ್ಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಗ್ರಾಪಂ, ಕೃಷ್ಣೇಗೌಡ ಚಾರಿಟಬಲ್ ಟ್ರಸ್ಟ್ ಹುಳಗನಹಳ್ಳಿ ಹಾಗೂ ಹಳೆಯ ವಿದ್ಯಾರ್ಥಿಗಳ ಸಹಯೋಗದಲ್ಲಿ ನೂತನವಾಗಿ ನಿರ್ಮಿಸಿರುವ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳ ಪ್ರಾರಂಭೋತ್ಸವ ಹಾಗೂ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ವಿದ್ಯೆ ಯಾರು ಕದಿಯಲಾಗದ ಆಸ್ತಿ, ವಿದ್ಯೆಯಿಂದ ಸಮಾಜದಲ್ಲಿ ಗೌರವ, ಉನ್ನತ ಹುದ್ದೆ ಲಭಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಉನ್ನತ ವಿದ್ಯಾಭ್ಯಾಸ ನಡೆಸಿ ಹುನ್ನತ ಹುದ್ದೆಗಳನ್ನು ಅಲಂಕರಿಸಿ ಸಮಾಜದಲ್ಲಿ ನೊಂದವರ ಬಾಳಿಗೆ ಬೆಳಕಾಗಬೇಕೆಂದರು.

ರೈತರ ಮಕ್ಕಳಿಗೆ ಶಿಕ್ಷಣ, ಪರಿಜ್ಞಾನ, ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ದೇಶದ ಸಂಸ್ಕಾರ, ಸಂಸ್ಕೃತಿಯನ್ನು ತಿಳಿಸಿ ಶ್ರೇಷ್ಠತೆಯ ಬದುಕನ್ನು ರೂಪಿಸಿಕೊಳ್ಳಲು ಈಗಿನಿಂದಲೇ ಅಣಿಗೊಳಿಸಬೇಕಾದ ಅವಶ್ಯಕತೆಯಿದೆ ಎಂದರು.

ಹಳೆಯ ವಿದ್ಯಾರ್ಥಿಗಳು, ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಮತ್ತು ಸ್ಥಳೀಯ ಗ್ರಾಮಸ್ಥರ ನೆರವಿನೊಡನೆ ಉತ್ತಮ ಸೌಲಭ್ಯವುಳ್ಳ ವಿಜ್ಞಾನ ಪ್ರಯೋಗಾಲಯ ಮತ್ತು ಸರ್ಕಾರಿ ಶಾಲೆಗಳ ಉಳಿವಿಗಾಗಿ ತಮ್ಮ ಗ್ರಾಮದಲ್ಲೇ ಎಲ್‌ಕೆಜಿ ಮತ್ತು ಯುಕೆಜಿಯನ್ನು ಪ್ರಾರಂಭಿಸಿ ಈ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುತ್ತಿರುವ ಕಾರ್ಯ ಶ್ಲಾಘನೀಯವೆಂದರು.

ಹುಳಗನಹಳ್ಳಿ ಕೃಷ್ಣೇಗೌಡ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಗ್ರಾ.ಪಂ. ಸದಸ್ಯ ಎಚ್.ಕೆ.ನಂದೀಶ್‌ಗೌಡ ಮಾತನಾಡಿ, ಹೆಮ್ಮನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಅಂಗನವಾಡಿ ಕೇಂದ್ರ, ಸರ್ಕಾರಿ ಶಾಲೆಗಳಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಿ ಮಾದರಿ ಗ್ರಾಮ ಪಂಚಾಯಿತಿಯನ್ನಾಗಿಸಲು ಸಹಕಾರ ನೀಡಿದ ಹಳೆಯ ವಿದ್ಯಾರ್ಥಿಗಳ ಕಾರ್ಯವನ್ನು ಸ್ಮರಿಸಿದರು.

ಸುಮಾರು ಐದು ಲಕ್ಷ ರೂ. ವೆಚ್ಚದಲ್ಲಿ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ಹಾಗೂ ವಿಜ್ಞಾನ ಪ್ರಯೋಗಾಲಯವನ್ನು ಉನ್ನತೀಕರಿಸಿದ್ದು ಯಾವೊಬ್ಬ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಸದುದ್ದೇಶದಿಂದ ಕೂಸಿನ ಮನೆಯನ್ನು ಪ್ರಾರಂಭಿಸಿ ಪ್ರಾಥಮಿಕ ಹಂತದ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಮೊಟ್ಟೆ, ಹಣ್ಣುಗಳು, ಶೂ, ಸಾಕ್ಸ್ ಇನ್ನಿತರ ಸೌಲಭ್ಯವನ್ನು ಕಲ್ಪಿಸಿರುವುದಾಗಿ ಹೇಳಿದರು.

ಪ್ರಸಕ್ತ ಸರ್ಕಾರಿ ಶಾಲೆಯು ನೂರು ವರ್ಷಗಳನ್ನು ಪೂರೈಸಲಿದ್ದು ಶಾಲೆಯಿಂದ ಶಿಕ್ಷಣ ಪಡೆದ ಅದೆಷ್ಟೋ ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಿ ತಮ್ಮ ಬದುಕನ್ನು ರೂಪಿಸಿಕೊಂಡಿದ್ದು ಅಂತಹ ವಿದ್ಯಾರ್ಥಿಗಳು ಆರ್ಥಿಕ ನೆರವು ನೀಡುವ ಜತೆಗೆ ಗ್ರಾ.ಪಂ. ನಡೆ ಸರ್ಕಾರಿ ಶಾಲೆಗಳ ಅಭಿವೃದ್ಧಿ ಕಡೆ ಎಂಬ ವಿನೂತನ ಯೋಜನೆಯನ್ನು ರೂಪಿಸಿರುವುದಾಗಿ ತಿಳಿಸಿದರು.

ಸಮವಸ್ತ್ರ ವಿತರಣೆ: ಎಲ್.ಕೆ.ಜಿ. ಮತ್ತು ಯು.ಕೆ.ಜಿ.ಗೆ ದಾಖಲಾದ ಮಕ್ಕಳಿಗೆ ಸಮವಸ್ತ್ರವನ್ನು ವಿತರಿಸಿದರಲ್ಲದೆ ಶಾಲೆ ಪ್ರಾರಂಭೋತ್ಸವಕ್ಕೆ ಆರ್ಥಿಕ ನೆರವು ನೀಡಿದ ಹಳೆಯ ವಿದ್ಯಾರ್ಥಿಗಳು, ಮುಖಂಡರನ್ನು ಕಾರ್ಯಕ್ರಮದ ವೇಳೆ ಅಭಿನಂದಿಸಿ ಗೌರವಿಸಿದರು.

ಗ್ರಾ.ಪಂ. ಅಧ್ಯಕ್ಷೆ ವೀಣಾ, ಉಪಾಧ್ಯಕ್ಷ ಅಪ್ಪಾಜಿಗೌಡ, ಸದಸ್ಯೆ ಸೌಭಾಗ್ಯ, ಬಿಇಒ ಧನಂಜಯ, ಎಸ್‌ಡಿಎಂಸಿ ಅಧ್ಯಕ್ಷ ಗಿರೀಶ್, ಧ್ವನಿ ಲಯನ್ ಸಂಸ್ಥೆಯ ಅಧ್ಯಕ್ಷೆ ರಜನಿರಾಜ್, ಪ್ರಭಾರ ಮುಖ್ಯ ಶಿಕ್ಷಕ ಸರೋಜಮ್ಮ, ಜೋಗಿಗೌಡ, ಪಿಡಿಒ ಲೀಲಾವತಿ, ರಾಮಣ್ಣ, ಬಿಆರ್‌ಸಿ ರಮೇಶ್, ಹನುಮಂತಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net