ಶಿಕ್ಷಕರನ್ನು ಗೌರವಿಸಿದರೆ ಶಿಕ್ಷಣವೂ ಉತ್ತಮ

Published on

ಹೊಳೆನರಸೀಪುರ: ವಿದ್ಯೆ ಕಲಿಯಬೇಕೆಂದರೆ ಮೊದಲು ಶಿಕ್ಷಕರನ್ನು ಗೌರವಿಸುವುದನ್ನು ಕಲಿಯಬೇಕು. ಶಿಕ್ಷಕರೊಂದಿಗೆ ವಿನಯದಿಂದ ಇದ್ದರೆ ನಮ್ಮ ಶಿಕ್ಷಣವೂ ಉತ್ತಮವಾಗಿರುತ್ತದೆ. ತಂದೆ-ತಾಯಿ ನಮಗೆ ಜನ್ಮ ನೀಡುತ್ತಾರೆ. ಶಿಕ್ಷಕರು ನಮ್ಮ ಬದುಕನ್ನು ಉತ್ತಮವಾಗಿ ರೂಪಿಸುತ್ತಾರೆ ಎಂದು ಕಾಂಗ್ರೆಸ್ ಮುಖಂಡ ಶ್ರೇಯಸ್ ಎಂ. ಪಟೇಲ್ ತಿಳಿಸಿದರು.

ಬುಧವಾರ ತಾಲೂಕಿನ ಕೆರಗೋಡು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ನಾವು ಓದುವ ದಿನಗಳಲ್ಲಿ ಉತ್ತಮವಾಗಿ ಓದಿದರೆ ನಮ್ಮ ಮುಂದಿನ ಬದುಕು ಉತ್ತಮವಾಗಿರುತ್ತದೆ ಎಂದರು.

ಗ್ರಾಮದ ಕೆ.ಎಚ್. ಕೃಷ್ಣಸ್ವಾಮಿ ಮಾತನಾಡಿ, ನಮ್ಮೂರಿನ ಸರ್ಕಾರಿ ಶಾಲೆಯನ್ನು ನಾವೆಲ್ಲಾ ನಮ್ಮ ಶಾಲೆ ಎಂದೇ ಭಾವಿಸಿದ್ದೇವೆ. ಹಿಂದೆ ಸಚಿವರಾಗಿದ್ದ ದಿವಂಗತ ಜಿ. ಪುಟ್ಟಸ್ವಾಮಿಗೌಡರು ನಮ್ಮೂರಿಗೆ ಒಂದು ಕಾಲೇಜನ್ನು ಮಂಜೂರು ಮಾಡಿಸಿದ್ದರು. ಆ ಸಮಯದಲ್ಲಿ ಊರಿನ ಅನೇಕರಿಗೆ ಈ ಕಾಲೇಜನ್ನು ಉತ್ತಮವಾಗಿ ಬೆಳೆಸಿ ಉಳಿಸಬೇಕು ಎಂದು ಹೇಳಿದ್ದರು. ಅಂದಿನಿಂದ ನಮ್ಮ ಗ್ರಾಮದ ಜನರು ಈ ಕಾಲೇಜಿಗೆ ಸಹಕಾರ ನೀಡುತ್ತಿದ್ದಾರೆ. ಬೇಕಾದ ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದಾರೆ. ಕಳೆದ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾಲೂಕಿಗೆ ಅತಿಹೆಚ್ಚು ಅಂಕ ಪಡೆದ 5 ವಿದ್ಯಾರ್ಥಿಗಳಲ್ಲಿ ಮೂವರು ನಮ್ಮ ಕಾಲೇಜಿನವರು ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆ ಎನಿಸುತ್ತದೆ. ವಿದ್ಯಾರ್ಥಿಗಳ ಈ ಸಾಧನೆಗೆ ಉಪನ್ಯಾಸಕರ ಉತ್ತಮ ಬೋಧನೆಯೂ ಕಾರಣವಾಗಿದ್ದು, ಅವರೂ ಅಭಿನಂದನಾರ್ಹರು ಎಂದರು.

ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ವೀರಪ್ಪಾಜಿ ಪ್ರತಿಭಾವಂತ 15 ವಿದ್ಯಾರ್ಥಿಗಳಿಗೆ ತಲಾ 1 ಸಾವಿರ ನಗದು ಬಹುಮಾನ ನೀಡಿದರೆ, ರಾಮೇನಹಳ್ಳಿ ಕುಮಾರ್ ಅವರು ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ತಲಾ 500 ರೂ ನೀಡಿದರು. ಯೋಗಸ್ವಾಮಿ ಹಾಗೂ ಕೃಷ್ಣಸ್ವಾಮಿ ಅವರು ನೆನಪಿನ ಕಾಣಿಗೆ ನೀಡಿ ಗೌರವಿಸಿದರು.

ಹಂಗರಹಳ್ಳಿ ಲಕ್ಷ್ಮಣ್, ಕಾಲೇಜು ಅಭಿವೃದ್ಧಿ ಸಮಿತಿಯ ಅನಿಲ್, ಶಾಂತಮೂರ್ತಿ , ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕಿ ಶಶಿಕಲಾ, ಪ್ರಾಂಶುಪಾಲ ಕುಮಾರ್, ಉಪನ್ಯಾಸಕಿ ಕಾಂಚನಾ, ಲಯನ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಗವಪ್ಪ, ಶಿಕ್ಷಕ ಲಕ್ಷ್ಮೇಗೌಡ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net