ಅಂಗವಿಕಲರಿಗೆ ಮನೆಯಲ್ಲೇ ಶಿಕ್ಷಣ

web12
Published on

ಪಾಲಕರ ಸಹಕಾರದೊಂದಿಗೆ ಓದು-ಬರಹ ಜಿಲ್ಲೆಯಲ್ಲಿ 287 ಮಕ್ಕಳಿಗೆ ವಿವಿಧ ಸೌಲಭ್ಯ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಅಂಗವೈಕಲ್ಯ ಹೊಂದಿರುವ 287 ಮಕ್ಕಳು ಮನೆಯಾಧಾರಿತ ಶಿಕ್ಷಣ ಪಡೆಯುತ್ತಿದ್ದಾರೆ.

ಯಾವುದೇ ಮಗು ಶಾಲಾ ಕಲಿಕೆಯಿಂದ ದೂರ ಉಳಿಯಬಾರದು, ಎಲ್ಲ ಮಕ್ಕಳಿಗೂ ಶಿಕ್ಷಣ ಸಿಗಬೇಕೆಂಬ ಪರಿಕಲ್ಪನೆಯಲ್ಲಿ ಸರ್ಕಾರವು ಉಚಿತ ದಾಖಲಾತಿ, ವಿವಿಧ ಸೌಕರ್ಯ ಒದಗಿಸುತ್ತಿದೆ. ಸಾಮಾನ್ಯ ಮಕ್ಕಳು, ಭಾಗಶಃ ಅಂಗವಿಕಲ ಮಕ್ಕಳು ಶಾಲೆಗಳಿಗೆ ಹಾಜರಾಗುತ್ತಿದ್ದಾರೆ. ಇದರ ನಡುವೆ ನಡೆಯಲು ಸಾಧ್ಯವಾಗದಿರುವವರಿಗೆ ವಿಶೇಷ ತರಬೇತಿಯ ಮಾರ್ಗದರ್ಶನ ನೀಡಲು ವಿಶೇಷ ಶಿಕ್ಷಕರ ಮೂಲಕ ಕಲಿಸಲಾಗುತ್ತಿದೆ.

ಅಂಗವೈಕಲ್ಯ ಮೆಟ್ಟಿ ಜೀವನ ಅನ್ವಯದ ಕಲಿಕಾ ಚಟುವಟಿಕೆ ಮೂಲಕ ದೌರ್ಬಲ್ಯ ನಿವಾರಿಸುವಂತಹುದು, ದೈಹಿಕ ಮತ್ತು ಮನೋಬಲ ಉತ್ತೇಜನಕಾರಿಯ ಕೆಲಸವು ದೊಡ್ಡ ಸವಾಲು. ಇದಕ್ಕೆ ಪಾಲಕರ ಸಹಕಾರದೊಂದಿಗೆ ಮನೆಯಲ್ಲಿಯೇ ಓದು ಬರಹ, ಸರಾಗ ಅಭ್ಯಾಸ ಸೇರಿ ವಿವಿಧ ಚಟುವಟಿಕೆ ಮಾಡಲಾಗುತ್ತಿದೆ.

ವಿಶೇಷ ಬೋಧನೆ

ಗೃಹಾಧಾರಿತ ಮಕ್ಕಳ ಯೋಜನೆಯಡಿ ವಿಶೇಷ ಚೇತನರಿಗೆ, ದೈಹಿಕ ವಿಕಲಾಂಗ, ಹಿಂದುಳಿದ ಹಿನ್ನೆಲೆಯಲ್ಲಿ ಮಕ್ಕಳಿಗೆ ಬೋಧಿಸಲು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ, ಸಾಮಾನ ಮತ್ತು ಅಂತರ್ಗತ ಶಿಕ್ಷಣ ಮಾರ್ಗಸೂಚಿ ಅನ್ವಯ ಶಿಕ್ಷಣ ನೀಡಲಾಗುತ್ತಿದೆ. ಸಂಚಾರಿ ಸಂಪನ್ಮೂಲ ಶಿಕ್ಷಕರು ತೀವ್ರ ಅಂಗವೈಕಲ್ಯ ಹೊಂದಿರುವ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ, ಮಗು ಕಲಿಕಾಮಟ್ಟ ಸಾಧಿಸುವವರೆಗೂ ಅಗತ್ಯ ಮಾರ್ಗದರ್ಶನ ನೀಡುತ್ತಾರೆ. ಇಂತಹ ಸಂದರ್ಭದಲ್ಲಿ ನಿಯಮಿತ ಶಾಲಾ ಶಿಕ್ಷಣಕ್ಕೆ ಪರಿವರ್ತಿಸುವ ಕೆಲಸವನ್ನೂ ಮಾಡಲಾಗುತ್ತದೆ. ಇದು ವಿದ್ಯಾರ್ಥಿಗಳಿಗೆ ಅವರ ಅಸಮರ್ಥತೆಯನ್ನು ಲೆಕ್ಕಿಸದೆ ಸಮಾನ ಶೈಕ್ಷಣಿಕ ಅವಕಾಶ ಒದಗಿಸುವ ಬದ್ಧತೆ ತೋರಿಸುತ್ತದೆ. ಹಾಗೆಯೇ ಬಲವಾದ ಬಾಲ್ಯ ಶೈಕ್ಷಣಿಕ ವ್ಯವಸ್ಥೆ ರಚಿಸುವ ಗುರಿ ಸಾಧಿಸುತ್ತದೆ.

1449 ಮಕ್ಕಳು ನೋಂದಣಿ

ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾಕ್ಷರತಾ ಮತ್ತು ಶಿಕ್ಷಣ ಇಲಾಖೆ ಸೇರಿ ವಿವಿಧ ಇಲಾಖೆಗಳ ಜತೆಗೆ ಸರ್ಕಾರವು ಮಕ್ಕಳ ಸರ್ವೇ ಕಾರ್ಯವನ್ನು ಕೈಗೊಳ್ಳುತ್ತಿದ್ದು ಶೈಕ್ಷಣಿಕ, ಆರೋಗ್ಯ ಸುಧಾರಣಾ ಕ್ರಮ ಜಾರಿಗೆ ತರುತ್ತಿದೆ. ಅದರಂತೆ ಜಿಲ್ಲೆಯಲ್ಲಿ 2027 ಶಾಲೆಗಳಲ್ಲಿ ಕಿವುಡು, ಕುರುಡು, ಭಾಗಶಃ ಕುರುಡು, ನರ ದೌರ್ಬಲ್ಯ ಸೇರಿ ವಿವಿಧ ದೈಹಿಕ ನ್ಯೂನತೆಯುಳ್ಳ 1449 ಮಕ್ಕಳು ನೋಂದಣಿಯಾಗಿದ್ದಾರೆ. ಇವರಲ್ಲಿ 834 ಬಾಲಕರು ಮತ್ತು 615 ಬಾಲಕಿಯರು ಸೇರಿದ್ದಾರೆ. ಇವರಿಗೆ ಅಗತ್ಯ ಕಲಿಕೋಪಕರಣ, ನೆರವಿನ ಸಾಮಗ್ರಿ ವಿತರಿಸಲಾಗುತ್ತಿದೆ.

ವಿಶೇಷ ಶಿಕ್ಷಕರ ಹುದ್ದೆ

ಕಲಿಕೆಯಲ್ಲಿ ವಿಶೇಷ ಸಾಮರ್ಥ್ಯದ ಮಕ್ಕಳಿಗೆ (ಅಂಗವಿಕಲರು) ಬೋಧಿಸಲು ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗೆ ತಲಾ 12 ಶಿಕ್ಷಕರಂತೆ 24 ವಿಶೇಷ ಶಿಕ್ಷಕರ ಹುದ್ದೆಗೆ ಸರ್ಕಾರ ಮಂಜೂರಾತಿ ನೀಡಿದ್ದು, ಈ ಪೈಕಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ತಲಾ 10 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಉಳಿದಂತೆ 14 ವಿಶೇಷ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಗೃಹಾಧಾರಿತ ಶಾಲಾ ಶಿಕ್ಷಣವನ್ನು ಬೆಂಬಲಿಸಲು ವಿಶೇಷ ಶಿಕ್ಷಕರನ್ನು ನಿಯೋಜಿಸುತ್ತಿದ್ದು, ಕಾಲಕಾಲಕ್ಕೆ ವಿದ್ಯಾರ್ಥಿಗಳಿಗೆ ಉತ್ತಮ ರೀತಿಯಲ್ಲಿ ನೆರವಾಗುವುದಕ್ಕೆ ಪೂರಕವಾಗಿ ತರಬೇತಿಯನ್ನೂ ನೀಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net