

ಗೌರಿಬಿದನೂರು: ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಕಡ್ಡಾಯವಾಗಿ ಮರಳಿ ಶಾಲೆಗೆ ಕರೆತರಬೇಕು. ಬಾಲಕಾರ್ಮಿಕ ತಪಾಸಣೆ ಕೈಗೊಂಡು ಮಕ್ಕಳನ್ನು ಮುಖ್ಯವಾಹನಿಗೆ ತರಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಪಿ.ಎಂ. ಸಚಿನ್ ಕರೆ ನೀಡಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಹಾಗೂ ಬಾಲ, ಕಿಶೋರ ಕಾರ್ಮಿಕ ನಿರ್ಮೂಲನೆ, ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಕಾಯ್ದೆ 1986 ಹಾಗೂ ತಿದ್ದುಪಡಿ ಕಾಯ್ದೆ 2016ರ ಕುರಿತು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಮಕ್ಕಳು ದುಡಿಯುತ್ತಿರುವುದು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಂಡು ಮಕ್ಕಳು ಶಾಲೆಗೆ ಬರುವಂತೆ ಮಾಡಬೇಕು. ಮಕ್ಕಳ ರಕ್ಷಣೆಗೆ ಸರ್ಕಾರ ಹಲವು ಕಾನೂನು ಹಾಗೂ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೂ ಪಾಲಕರಿಲ್ಲದ ಮಕ್ಕಳು ಅಥವಾ ಬಡತನದಿಂದಾಗಿ ಹೋಟೆಲ್, ಅಂಗಡಿ, ಗ್ಯಾರೇಜ್, ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಬಾಲಕಾರ್ಮಿಕರು ಕಂಡುಬಂದರೆ ಕಾರ್ಮಿಕ ಇಲಾಖೆಗೆ ಮಾಹಿತಿ ನೀಡಿ ರಕ್ಷಿಸಲು ಪ್ರಜ್ಞಾವಂತ ನಾಗರಿಕರು ಸಹಕರಿಸಬೇಕು. ಬಾಲಕಾರ್ಮಿಕ ಪದ್ಧತಿಯನ್ನು ತಳಮಟ್ಟದಿಂದ ತೊಡೆದು ಹಾಕಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳು, ಸಂಘ ಸಂಸ್ಥೆಗಳು ಯತ್ನಿಸಬೇಕು ಎಂದರು.
ಸರ್ಕಾರಿ ಅಭಿಯೋಜಕ ಫಯಾಜ್ ಪಟೇಲ್ ಮಾತನಾಡಿ, ದೇಶ ಅಭಿವೃದ್ಧಿಯಾಗಬೇಕಾದರೆ ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು ಎಂದು ತಿಳಿಸಿದರು.
ಕಟ್ಟಡ ಕಾರ್ಮಿಕರಿಗೆ ಟೂಲ್ಕಿಟ್‌ಗಳನ್ನು ವಿತರಿಸಲಾಯಿತು. ಕಾರ್ಮಿಕ ಇಲಾಖೆಯ ಪವನ್, ಕಾರ್ಮಿಕ ಸಂಘಟನೆಯ ವೆಂಕಟಾದ್ರಿ, ರಮೇಶ್, ಚರಣ್, ಅಂಜಿ ಹಾಗೂ ಕಟ್ಟಡ ಕಾರ್ಮಿಕರು ಉಪಸ್ಥಿತರಿದ್ದರು.
ಸಮಸ್ಯೆಗೆ ಶಿಕ್ಷಣದಿಂದ ಮಾತ್ರ ಪರಿಹಾರ
ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವುದರಿಂದ ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಬಹುದು. ಸಮಾಜದಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ, ಶಿಕ್ಷಣದಿಂದ ಮಾತ್ರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ. ನಗರದಲ್ಲೂ ಕಿಶೋರ ಕಾರ್ಮಿಕರು ಕಂಡು ಬಂದಿದ್ದರು. ಅವರನ್ನು ನೇಮಕ ಮಾಡಿಕೊಂಡ ಮಾಲೀಕರಿಗೆ ಈಗಾಗಲೇ ದಂಡ ಹಾಕಲಾಗಿದೆ. ಇಂತಹ ಪದ್ಧತಿಗಳಿಗೆ ಯಾರೂ ಪ್ರೋತ್ಸಾಹಿಸಬಾರದು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಸಮಾಜದಲ್ಲಿ ಮಾದರಿ ವ್ಯಕ್ತಿಗಳನ್ನಾಗಿ ರೂಪಿಸಬೇಕು ಎಂದು ತಾಲೂಕು ಕಾರ್ಮಿಕ ನಿರೀಕ್ಷಕ ಸತೀಶ್ ತಿಳಿಸಿದರು.
ಹೆಣ್ಣುಮಕ್ಕಳಿಗೆ ಆದ್ಯತೆ ನೀಡಿ
ಸಂವಿಧಾನದಲ್ಲಿ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಲಾಗಿದೆ. ಶಿಕ್ಷಣದಿಂದ ಸಮಾಜದಲ್ಲಿರುವ ಜಾತಿ, ಧರ್ಮ, ಲಿಂಗಭೇದದಂತಹ ಸಾಮಾಜಿಕ ಪಿಡುಗುಗಳಿಗೆ ಕಡಿವಾಣ ಹಾಕಬಹುದು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪಾಲಕರು ಆದ್ಯತೆ ನೀಡಬೇಕು. ಸರ್ಕಾರ ಮಹಿಳೆಯರಿಗೆ ವಿಶೇಷ ಸ್ಥಾನಮಾನ ಮತ್ತು ಅವಕಾಶಗಳನ್ನು ನೀಡಿದೆ. ಎಲ್ಲರೂ ದೈನಂದಿನ ಜೀವನದಲ್ಲಿ ಕಾನೂನನ್ನು ತಿಳಿದು ಪಾಲಿಸಬೇಕು. ಬಡವರಿಗೆ ಕಾನೂನು ಸಮಸ್ಯೆಗಳು ಎದುರಾದರೆ ಕಾನೂನು ಸೇವಾ ಸಮಿತಿಯಿಂದ ಉಚಿತವಾಗಿ ನೆರವು ನೀಡಲು ಸಿದ್ಧ ಎಂದು ವಕೀಲ ಗೋಪಾಲ್ ತಿಳಿಸಿದರು.