ಶಿಕ್ಷಣ ಇಲಾಖೆ ಅವಾಂತರ ಸಿಎಂಗೆ ಬಹಿರಂಗ ಪತ್ರ

19Tmk_MLC_CM_Letter
Published on

ತುಮಕೂರು: ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಹಾಗೂ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಯಲ್ಲಿನ ಗೊಂದಲ ಹಾಗೂ ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಅವಾಂತರಗಳನ್ನು ಸರಿಪಡಿಸುವಂತೆ ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ. ಗೌಡ ಬಹಿರಂಗ ಪತ್ರ ಬರೆದಿದ್ದಾರೆ.

ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರಿಂದ ಫಲಿತಾಂಶ ಶೇ. 40ರಷ್ಟು ಕುಸಿದಿದೆ ಎಂಬ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಣ ಸಚಿವರ ಸಮಜಾಯಿಸಿ ನಿಜಕ್ಕೂ ಆತಂಕಕಾರಿ ಎನಿಸಿದೆ. ಈ ಹೇಳಿಕೆಯನ್ನು ಗಮನಿಸಿದರೆ ನಮ್ಮ ರಾಜ್ಯದಲ್ಲಿ ಇಷ್ಟು ವರ್ಷಗಳ ಎಸ್ಸೆಸ್ಸೆಲ್ಸಿ ಫಲಿತಾಂಶ ಅಕ್ರಮವೇ ಎನ್ನುವ ಪ್ರಶ್ನೆ ಮೂಡಿದೆ ಎಂದು ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ಕೃಪಾಂಕ ಅಕ್ಷಮ್ಯ: ಸರ್ಕಾರ ಅಥವಾ ಸಿಎಂ ಗಮನಕ್ಕು ತರದೆ ಶಿಕ್ಷಣ ಇಲಾಖೆ ಅಧಿಕಾರಿಗಳು ಶೇ. 20 ಕೃಪಾಂಕ ನೀಡಿರುವುದು ಅಕ್ಷಮ್ಯ ಅಪರಾಧ. ಈ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದು ಸರ್ಕಾರದ ಹೊಣೆಗಾರಿಕೆ. ಇನ್ನೂ ಎಸ್ಸೆಸ್ಸೆಲ್ಸಿಯಲ್ಲಿ ಮೂರು ಪರೀಕ್ಷೆಗಳನ್ನು ಮಾಡುವುದು ವೈಜ್ಞಾನಿಕವೇ. ಈ ಪದ್ದತಿಯನ್ನು ಕೈಬಿಟ್ಟು ಮೊದಲಿನಿಂತೆ ಎರಡು ಪರೀಕ್ಷೆ ಪದ್ಧತಿ ತನ್ನಿ ಎಂದು ಚಿದಾನಂದ್ ಆಗ್ರಹಿಸಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯಲ್ಲಿ ಲೋಪವೇನಿದೆ. ಇದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬಹುದಾಗಿದೆ. ಅಲ್ಲದೆ, ರಾಜ್ಯ ಪಠ್ಯಕ್ರಮ ಕಲಿಯುತ್ತಿರುವ ಮಕ್ಕಳಿಗೆ ಯಾವ ರೀತಿಯ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದೇವೆ ಎಂಬ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಲ್ಲವೇ? ಈ ಕುರಿತು ಆಳವಾದ ಅಧ್ಯಯನ ಮಾಡಿ ವರದಿ ನೀಡಲು ತಜ್ಞರ ಸಮಿತಿಯನ್ನು ನೇಮಕ ಮಾಡುವ ಬಗ್ಗೆ ಚಿಂತನೆ ನಡೆಸುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.

ವಿವೇಚನಾ ರಹಿತವಾಗಿ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ)ಗೆ ವಿರುದ್ಧವಾಗಿ 5, 8, 9ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸಲಾಯಿತು. ಸುಪ್ರೀಂ ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡು ಫಲಿತಾಂಶವನ್ನು ತಡೆ ಹಿಡಿಯಲಾಯಿತು. ಇದು ಮಕ್ಕಳ ಹಾಗೂ ಪೋಷಕರನ್ನು ಸಾಕಷ್ಟು ಅತಂಕಕ್ಕೀಡು ಮಾಡಿದೆ. ಶಿಕ್ಷಣ ಇಲಾಖೆ ಎಡವಟ್ಟುಗಳ ಬಗ್ಗೆ ಪರಾಮರ್ಶಿಸುವಂತೆ ಮುಖ್ಯಮಂತ್ರಿಗಳನ್ನು ಕೋರಿದ್ದಾರೆ.

ಗುಣಮಟ್ಟ ಶಿಕ್ಷಣದ ಗ್ಯಾರಂಟಿ ಕೊಡಿ: ಸಾಮಾಜಿಕ ನ್ಯಾಯ, ಸರ್ವರಿಗೂ ಸಮಪಾಲು-ಸಮಬಾಳು ಎಂಬ ವಿಷಯಗಳ ಬಗ್ಗೆ ಮಾತನಾಡುವ ತಾವುಗಳು ದುಸ್ಥಿತಿಯಲ್ಲಿರುವ ರಾಜ್ಯದ ಸುಮಾರು 50 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಪುನರ್ ನಿರ್ಮಾಣ ಮಾಡಿ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಖಾಲಿ ಇರುವ ಹುದ್ದೆಗಳಿಗೆ ಶಿಕ್ಷಕರನ್ನು ನೇಮಿಸಿ ಸುಮಾರು 46 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಗ್ಯಾರಂಟಿ ನೀಡುತ್ತೀರಾ ಎಂದು ಬಹಿರಂಗ ಪತ್ರದಲ್ಲಿ ಮುಖ್ಯಮಂತ್ರಿಗಳನ್ನು ಚಿದಾನಂದ ಗೌಡ ಪ್ರಶ್ನಿಸಿದ್ದಾರೆ.

ವರ್ಗಾವಣೆ ಸಾಲದು, ಶಿಸ್ತ ಕ್ರಮ ಜರುಗಿಸಿ

ವೃತ್ತಿಪರ ಕೋರ್ಸ್‌ಗಳ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯಲ್ಲಿ 50ಕ್ಕು ಹೆಚ್ಚು ಪ್ರಶ್ನೆಗಳನ್ನು ಔಟ್ ಆಫ್ ಸಿಲಬಸ್ ನೀಡಿರುವುದನ್ನು ಸಮರ್ಥಿಸಿಕೊಂಡಿದ್ದ ಕೆಇಎ ನಿರ್ದೇಶಕಿ ರಮ್ಯಾಗೆ ವರ್ಗಾವಣೆ ಶಿಕ್ಷೆ ನೀಡಲಾಗಿದೆ. ಲಕ್ಷಾಂತರ ಮಕ್ಕಳ ಭವಿಷ್ಯದ ಜತೆ ಕೆಇಎ ಚೆಲ್ಲಾಟವಾಡಿದೆ. ಇದರ ಹೊಣೆ ಹೊತ್ತ ಅಧಿಕಾರಿಗಳನ್ನು ಬೇರೆ ಇಲಾಖೆಗೆ ವರ್ಗ ಮಾಡಿದರಷ್ಟೇ ಸಾಲದು, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಚಿದಾನಂದ್ ಒತ್ತಾಯಿಸಿದ್ದಾರೆ.

ಪುರ್ನಬಲನ ತರಗತಿ ಮುಂದೂಡಿಕೆ ?

ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗಳಿಗೆ ಮಕ್ಕಳನ್ನು ತಯಾರಿ ಮಾಡಲು ಶಾಲೆಗಳಿಗೆ ಹಾಜರಾಗಿ ಪುರ್ನಬಲನ ತರಗತಿ ನಡೆಸಲು ಆದೇಶ ನೀಡಿ, ತದನಂತರ ಆದೇಶವನ್ನು ಮುಂದೂಡಲಾಗಿದೆ. ಲೋಕಸಭಾ ಚುನಾವಣೆ ಕಾರ್ಯ, ಎಸ್ಸೆಸ್ಸೆಲ್ಸಿ. ಪಿಯುಸಿ ಮೌಲ್ಯಮಾಪನ. ಹಿಗೆ ವಿಶ್ರಾಂತಿಯಿಲ್ಲದೇ ನಿರಂತರವಾಗಿ ಶಿಕ್ಷಕರು ವರ್ಷ ಪೂರ್ತಿ ದುಡಿದರೆ ಅವರ ಕಾರ್ಯ ಕ್ಷಮತೆ ಕುಗ್ಗುವುದಿಲ್ಲವೇ, ಅವರ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲವೆ. ಹಾಗಾದರೆ ಶಿಕ್ಷಕರ ಹುದ್ದೆಗಳನ್ನು ರಜಾ ರಹಿತ ಹುದ್ದೆಗಳನ್ನಾಗಿ ಏಕೆ ಪರಿವರ್ತಿಸಬಾರದು ಎಂದು ಎಂಎಲ್ಸಿ ಚಿದಾನಂದ ಗೌಡ ಪತ್ರದಲ್ಲಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net