ಖಾಸಗಿ ಶಾಲೆಗಳಿಂದ ಶಿಕ್ಷಣ ಇಲಾಖೆ ಕಚೇರಿಗೆ ಮುತ್ತಿಗೆ

FotoJet (2)
Published on

ಜಟಾಪಟಿಗೆ ಕಾರಣವಾದ ಪರವಾನಗಿ ರದ್ದು ವಿಚಾರ | ತಾರತಮ್ಮ ಆದೇಶಕ್ಕೆ ಭ್ರಷ್ಟಾಚಾರ ಕಾರಣ ಆರೋಪ

ಚಿಕ್ಕಬಳ್ಳಾಪುರ : ಪರವಾನಗಿ ರದ್ದು ವಿಚಾರವೀಗ ಖಾಸಗಿ ಶಾಲೆ ಮತ್ತು ಶಿಕ್ಷಣ ಇಲಾಖೆ ನಡುವೆ ಜಟಾಪಟಿಗೆ ಕಾರಣವಾಗಿದೆ.
ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ 71 ಖಾಸಗಿ ಶಾಲೆಗಳ ಮಾನ್ಯತೆಯನ್ನು ಡಿಡಿಪಿಐ ಬೈಲಾಂಜಿನಪ್ಪ ರದ್ದುಪಡಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಶಿಕ್ಷಣ ಸಂಸ್ಥೆಗಳು, ಪಾಲಕರು ನಗರದ ಶಿಕ್ಷಣ ಇಲಾಖೆ ಕಚೇರಿಗೆ ಗುರುವಾರ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಹಾಗೂ ತಾರತಮ್ಯ ಆದೇಶಕ್ಕೆ ಭ್ರಷ್ಟಾಚಾರ ಕಾರಣ ಎಂದು ಆರೋಪಿಸಿದರು.


ಕಚೇರಿಯಲ್ಲಿ ಮಾತಿನ ಜಟಾಪಟಿ
ನಗರದ ಸರ್ಕಾರಿ ಜೂನಿಯರ್ ಕಾಲೇಜು ಮುಂಭಾಗದ ಡಿಡಿಪಿಐ ಕಚೇರಿ ಎದುರು ಧರಣಿ ಕುಳಿತು, ಶಿಕ್ಷಣ ಸಂಸ್ಥೆಯ ಮಾಲೀಕರು ಮತ್ತು ಸಿಬ್ಬಂದಿ ಕಿಡಿಕಾರಿದರು. ಇದರ ನಡುವೆ ಬೈಲಾಂಜಿನಪ್ಪಗೆ ಮುತ್ತಿಗೆ ಹಾಕಿದ ಕೆಲವರು, ಆಕ್ರೋಶದಲ್ಲಿ ಸವಾಲು ಎಸೆದರು. ಸ್ಥಳಕ್ಕೆ ಇಲಾಖೆಯ ಆಯುಕ್ತರನ್ನು ಕರೆಸಬೇಕು ಎಂದು ಪಟ್ಟು ಹಿಡಿದರು. ರದ್ದು ಪ್ರಶ್ನಿಸಿ ಹೋರಾಟ ನಡೆಸುತ್ತಿರುವುದಕ್ಕೆ ಸಂಬಂಧಿಸಿದಂತೆ ಯಾರೇ ಬಂದರೂ, ಪ್ರಕರಣ ದಾಖಲಿಸಿದರೂ ಭಯಬೀಳುವುದಿಲ್ಲ. ಏನಾದರೂ ಆಗಲಿ, ಎಲ್ಲದಕ್ಕೂ ಸಿದ್ಧವಿದ್ದೇವೆ ಎಂದರು. ಒಂದು ಹಂತದಲ್ಲಿ ಹೇಗೆ ಮಾನ್ಯತೆ ರದ್ದು ಮಾಡಿದೆ?, ಯಾವ ರೂಲ್ಸ್ ಹೇಳುತ್ತೀಯಾ?, ಪಟ್ಟಿಯನ್ನು ಹೇಗೆ ಪ್ರಕಟಿಸಿದೆ?, ಸರ್ಕಾರಿ ಶಾಲೆಗಳಲ್ಲಿ ಎಲ್ಲವೂ ಸರಿ ಇದೆಯಾ?, ಎಲ್ಲವನ್ನೂ ಚೆಕ್ ಮಾಡಿಸೋಣವೇ ಎಂದು ಏಕವಚನದಲ್ಲಿಯೇ ಕಿಡಿಕಾರಿದರು.


ಪ್ರತಿಭಟನೆಯ ಆಕ್ರೋಶ
ಖಾಸಗಿ ಶಾಲೆಗಳ ಮಾನ್ಯತೆ ರದ್ದು ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ, ಡಿಡಿಪಿಐ ಕಚೇರಿ ಎದುರು ಪ್ರತಿಭಟಿಸಲಾಯಿತು. ಖಾಸಗಿ ಶಿಕ್ಷಣ ಸಂಸ್ಥೆಗಳು ನಿಯಮಾನುಸಾರ ಕಾರ್ಯ ನಿರ್ವಹಿಸುತ್ತಿವೆ. ಇದರ ನಡುವೆ ತಾಂತ್ರಿಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕಿರುಕುಳ ನೀಡಲಾಗುತ್ತಿದೆ. ಮಾನ್ಯತೆ ರದ್ದು ವಿಚಾರದಲ್ಲಿ ಶಾಸಕರು ಶಿಾರಸಿನ ಬಳಿಕ ಎರಡು ಶಾಲೆಗಳಿಗೆ ವಿನಾಯಿತಿ ಸಿಕ್ಕಿದೆ. ದಾಖಲೆಗಳ ಸಲ್ಲಿಕೆಗೆ ಒಂದೊಂದು ಸಂಸ್ಥೆಯನ್ನು ಕರೆಸಿಕೊಳ್ಳಲಾಗುತ್ತಿದೆ. ಇದಕ್ಕೆ ಕೇವಲ ಹಣ ವಸೂಲಿಯೇ ಪ್ರಮುಖ ಕಾರಣ. ಇಲ್ಲಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಎಲ್ಲವನ್ನೂ ಬಯಲಿಗೆಳೆಯುವುದರ ಜತೆಗೆ ಅಧಿಕಾರಿಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಖಾಸಗಿ ಶಾಲೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಿ.ವಿ.ಶ್ರೀನಿವಾಸ್, ಪದಾಧಿಕಾರಿಗಳಾದ ಡಾಲ್ಫಿನ್ ನಾಗರಾಜ್, ತಮೀಷ್ ಪಾಷಾ, ಹೆನ್ರಿ ಪ್ರಸನ್ನ ಕುಮಾರ್, ಆನಂದ್ ಮತ್ತಿತರರು ಭಾಗವಹಿಸಿದ್ದರು.


ಸರಿಯಾಗಿ ನಡೆಸಿ, ಸಮಸ್ಯೆ ಇಲ್ಲ
ಖಾಸಗಿ ಶಾಲೆಗಳು ಇಲಾಖೆ ನಿಯಮಾನುಸಾರ ಕಾರ್ಯ ನಿರ್ವಹಿಸಿದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಪ್ರತಿಯೊಬ್ಬರು ನಿಯಮ ಪಾಲಿಸಲೇಬೇಕು ಎಂದು ಡಿಡಿಪಿಐ ಬೈಲಾಂಜಿನಪ್ಪ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ ಕಟ್ಟಡ ಸುರಕ್ಷತೆ, ವಿದ್ಯಾರ್ಥಿಗಳಿಗೆ ಮೂಲಸೌಕರ್ಯ, ವಿವಿಧ ಇಲಾಖೆಗಳ ದೃಢೀಕರಣ ಸೇರಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ, ಕಾಲಕಾಲಕ್ಕೆ ಮರು ನವೀಕರಣ ಮಾಡಿಕೊಳ್ಳಬೇಕು. ಅನಿರೀಕ್ಷಿತ ತಪಾಸಣೆಯ ಸಂದರ್ಭದಲ್ಲಿ ಲೋಪದೋಷಗಳು ಕಂಡು ಬಂದಾಗ ನಿಯಮಾನುಸಾರ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದರು. ಮೇಲಧಿಕಾರಿಗಳ ಆದೇಶದಂತೆ ಶಿಕ್ಷಣ ಸಂಸ್ಥೆಗಳ ನಿರ್ವಹಣೆಯ ಮೇಲೆ ಸಮರ್ಪಕ ನಿಗಾ ವಹಿಸಬೇಕು. ಇಲ್ಲಿ ನಿಯಮ ಉಲ್ಲಂಸಿರುವ ಶಾಲೆಗಳಿಗೆ ಹಲವು ಬಾರಿ ನೋಟಿಸ್ ನೀಡಲಾಗಿದೆ. ಇದಾದ ಬಳಿಕ ಮಾನ್ಯತೆ ರದ್ದುಪಡಿಸಲಾಗಿದೆ. ಲೋಪಗಳನ್ನು ಸರಿಪಡಿಸಿಕೊಂಡರೆ ಮತ್ತೆ ಅನುಮತಿ ಸಿಗುತ್ತದೆ ಎಂದು ತಿಳಿಸಿದರು.


ವಿಜಯವಾಣಿ ಸುದ್ದಿ ಚರ್ಚೆ
ವಿಜಯವಾಣಿ ಪತ್ರಿಕೆಯಲ್ಲಿ ಶಿಕ್ಷಣ ಇಲಾಖೆಯಿಂದ ಖಾಸಗಿ ಶಾಲೆಗಳ ಮಾನ್ಯತೆ ರದ್ದು ವಿಚಾರವಾಗಿ ವಿಶೇಷ ವರದಿ ಪ್ರಕಟವಾಗಿದ್ದು ಇದು ಪ್ರತಿಭಟನೆಯಲ್ಲಿ ಚರ್ಚೆಗೆ ಗ್ರಾಸವಾಯಿತು. ಅಧಿಕಾರಿಗಳು ಮತ್ತು ಸಂಸ್ಥೆಯ ಮಾಲೀಕರ ನಡುವೆ ವಾಗ್ವಾದ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net