ವಿದ್ಯಾಭ್ಯಾಸ ಮಾಡಿ ಸಮುದಾಯಕ್ಕೆ ಕೀರ್ತಿ ತನ್ನಿ- ಮಾಜಿ ಶಾಸಕ ಎ.ಪಾಪರೆಡ್ಡಿ ಸಲಹೆ

Raichur Prathibha Puraskara
ರಾಯಚೂರಿನ ವೀರಾಂಜನೇಯ ಮುನ್ನೂರು ಕಾಪು ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಮಾಜಿ ಶಾಸಕ ಎ.ಪಾಪರೆಡ್ಡಿ ಉದ್ಘಾಟಿಸಿದರು.
Published on

ರಾಯಚೂರು: ಮುನ್ನೂರು ಕಾಪು ಸಮುದಾಯದ ಯುವಕ, ಯುವತಿಯರು ಹೆಚ್ಚಿನ ವಿದ್ಯಾಭ್ಯಾಸ ಮಾಡಿ ಸಮಾಜ ಸೇವೆ ಮೂಲಕ ಸಮುದಾಯಕ್ಕೆ ಕೀರ್ತಿ ತರಬೇಕು ಎಂದು ಮುನ್ನೂರು ಕಾಪು ಸಮಾಜದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮತ್ತು ಮಾಜಿ ಶಾಸಕ ಎ.ಪಾಪರೆಡ್ಡಿ ಹೇಳಿದರು.

ನಗರದ ವೀರಾಂಜನೇಯ ಮುನ್ನೂರು ಕಾಪು ಕಲ್ಯಾಣ ಮಂಟಪದಲ್ಲಿ ಸಮುದಾಯದಿಂದ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಶನಿವಾರ ಮಾತನಾಡಿದರು.

ಸಮುದಾಯದ ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದು ಶ್ಲಾಘನೀಯ. ಸಮುದಾಯ ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಅಭಿವೃದ್ಧಿಯತ್ತ ಸಾಗುತ್ತಿದೆ. ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ 11ವರ್ಷ ಕಳೆದಿವೆ. 35ವಿದ್ಯಾರ್ಥಿಗಳು ಎಂಬಿಬಿಎಸ್ ಓದುತ್ತಿದ್ದಾರೆ ಎಂದು ತಿಳಿಸಿದರು.

ಮುಂಗಾರು ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮುನ್ನೂರು ಕಾಪು ಸಮುದಾಯ ಮಾದರಿಯಾಗಿರುವುದು ಸಮಾಜದ ಪ್ರಾಬಲ್ಯ ಪ್ರದರ್ಶಸುತ್ತದೆ. ಮೂಲತಃ ಕೃಷಿ ಅವಲಂಬಿತ ಸಮುದಾಯ, ವಿಶ್ವಾರ್ಹತೆ ಮತ್ತು ಸ್ವಾವಲಂಬಿ ತನದಿಂದ ಇಂದು ಎಲ್ಲ ರಂಗಗಳಲ್ಲೂ ಬೆಳೆದು ನಿಂತಿದೆ. ರಾಜೇಂದ್ರ ಗಂಜ್‌ನಲ್ಲಿ ಗುಮಾಸ್ತರಾಗಿ ಜೀವನ ಆರಂಭಿಸಿದ ಸಮುದಾಯ, ಕೃಷಿ, ಹಮಾಲಿ ಹಂತದಿಂದ ಗಂಜ್ ಅಂಗಡಿ ಮಾಲೀಕರಾಗುವ ಮಟ್ಟಕ್ಕೆ ಬೆಳೆದಿದೆ. ರೈಸ್ ಮಿಲ್, ಜಿಂನಿಂಗ್ ಪ್ರೆಸ್ಸಿಂಗ್ ಹಾಗೂ ಹೋಟೆಲ್ ವ್ಯವಹಾರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದರು.

ಮುಖಂಡರಾದ ಬೆಲ್ಲಮ್ ನರಸರೆಡ್ಡಿ, ಚನ್ನಬಸಯ್ಯ ಹಿರೇಮಠ, ವೀರ ಹನುಮಾನ, ಕೃಷ್ಣಮೂರ್ತಿ, ಜಿ.ಬಸವರಾಜ ರೆಡ್ಡಿ, ರಾಳ್ಳ ತಿಮ್ಮಾರೆಡ್ಡಿ, ಬುಡತಪ್ಪಗಾರು ಆಂಜನೇಯ, ಸೂಗಣ್ಣಗಾರು ವೆಂಕಟರೆಡ್ಡಿ, ಫಕ್ಕೀರಪ್ಪಗಾರು ನರಸರೆಡ್ಡಿ, ಕೆ.ನರಸಿಂಹಲು, ಶೇಖರರೆಡ್ಡಿ, ಬಂಗಿ ನರಸರೆಡ್ಡಿ, ಗುಡ್ಸಿ ನರಸರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net