More

    ಶಾಲೆ ಬಿಟ್ಟ ಮಕ್ಕಳ ಮರಳಿ ಕರೆ ತನ್ನಿ; ವಿದ್ಯಾಭ್ಯಾಸದಿಂದ ವಿಮುಖರಾದರೆ ಸಮಾಜಘಾತುಕರಾಗುವ ಅಪಾಯ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಕಳವಳ

    ಹೊಸನಗರ: ಓದುತ್ತಿರುವ ಮಕ್ಕಳು ಅರ್ಧಕ್ಕೆ ಶಾಲೆ ಬಿಟ್ಟು ಹೋಗುವ ಪರಿಪಾಠ ನೋಡುತ್ತಿದ್ದೇವೆ. ಆ ಮಕ್ಕಳು ಎಂದಿಗೂ ಹಾದಿ ತಪ್ಪಬಾರದು. ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಸೇರಿಸುವ ಕೆಲಸ ಪರಿಣಾಮಕಾರಿಯಾಗಿ ನಡೆಯಬೇಕಾಗಿದೆ ಎಂದು ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.

    ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಕೆಡಿಪಿ ಸಭೆಯಲ್ಲಿ, ಕೆಲ ಮಕ್ಕಳು ಅರ್ಧಕ್ಕೆ ಶಾಲೆ ಬಿಟ್ಟು ಹೋಗುತ್ತಿದ್ದಾರೆ ಎಂಬ ಮಾಹಿತಿ ಗಮನಿಸಿದ ಮಧು ಬಂಗಾರಪ್ಪ, ಮಕ್ಕಳು ವಿದ್ಯಾಭ್ಯಾಸದಿಂದ ವಿಮುಖರಾದರೇ ಸಮಾಜಕ್ಕೆ ತೊಂದರೆ ಆಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಓದಿ ಬೆಳೆಯಬೇಕಾದ ಮಕ್ಕಳು ಸಮಾಜಘಾತುಕ ಶಕ್ತಿಯಾಗಿ ಬೆಳೆಯುವ ಅಪಾಯವಿದೆ. ಅಧಿಕಾರಿಗಳು ಮತ್ತು ಶಿಕ್ಷಕರು ಮಕ್ಕಳನ್ನು ಪುನಃ ಶಾಲೆಗೆ ಕರೆತರುವಲ್ಲಿ ವಿಶ್ವಾಸನೀಯ ಪಾತ್ರ ವಹಿಸಬೇಕಾಗಿದೆ. ಮಕ್ಕಳಿಗೆ ಆಮಿಷ ತೋರಿಸಿ ಕರೆತರುವ ಪ್ರಯತ್ನ ಸಾಧ್ಯವಾಗುತ್ತಿಲ್ಲ. ಪಾಲಕರ ಸಹಕಾರವೂ ಬೇಕಾಗಿದೆ. ಅವರ ಮನಗೆದ್ದು ಶಾಲೆಗೆ ಕರೆತರಬೇಕಾಗಿದೆ ಎಂದರು.
    ಮಧ್ಯ ಪ್ರವೇಶಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು, ಶಾಲೆ ಬಿಟ್ಟ ಮಕ್ಕಳ ವಿಳಾಸ ಹೇಳಿ, ನಾನೇ ಹೋಗಿ ಅವರಲ್ಲಿ ಮಾತಾಡುತ್ತೇನೆ. ಪುಣ್ಯದ ಕೆಲಸದಲ್ಲಿ ಎಲ್ಲರೂ ಭಾಗಿಯಾಗೋಣ ಎಂದರು.
    ತಾಲೂಕಿನ ಶಾಲೆಗಳ ಸಮಗ್ರ ಚಿತ್ರಣವನ್ನು ಕಲೆ ಹಾಕಿದ ಮಧು ಬಂಗಾರಪ್ಪ, ಶಾಲೆಗಳ ಸಮಸ್ಯೆಗಳತ್ತ ಹೆಚ್ಚಿನ ಆದ್ಯತೆ ವಹಿಸುತ್ತೇನೆ. ಶಾಲೆಗಳ ಶೌಚಗೃಹ, ಕೊಠಡಿ ನಿರ್ಮಾಣ ಕುರಿತು ಅಧಿಕಾರಿಗಳು ಮುತುವರ್ಜಿ ವಹಿಸಬೇಕು. ಶಾಲೆ ಆವರಣದಲ್ಲಿರುವ ಅಪಾಯಕಾರಿ ಮರಗಳ ಕಡಿತಲೆಗೆ ಅರಣ್ಯ ಇಲಾಖೆ ಯೋಜನೆ ರೂಪಿಸಬೇಕಾಗಿದೆ. ಒಂದೊಮ್ಮೆ ಮರಬಿದ್ದು ಶಾಲೆಗೆ, ಮಕ್ಕಳಿಗೆ ಹಾನಿಯಾದರೆ ಕಷ್ಟ. ಅಪಾಯದಲ್ಲಿರುವ ಮರಕಡಿತಲೆ ಮಾಡಿ. ಸರ್ಕಾರಕ್ಕೆ ಕೆಟ್ಟ ಹೆಸರು ಬರುವುದನ್ನು ತಡೆಯಿರಿ ಎಂದು ಸೂಚಿಸಿದರು.
    ಹೊಸನಗರ ತಾಲೂಕಿನಲ್ಲಿ ಶೇ.50 ಮಳೆ ಕೊರತೆ ಕಂಡುಬಂದಿದ್ದು ಕೃಷಿಕರು ಇನ್ನೂ ಬಿತ್ತನೆಗೆ ಮುಂದಾಗಿಲ್ಲ. ಮುಂದೆ ಸಮೃದ್ಧ ಮಳೆ ನಿರೀಕ್ಷಿಸಲಾಗಿದೆ. ರೈತರಿಗೆ ಕಾಲ ಕಾಲಕ್ಕೆ ಅಗತ್ಯ ಮಾಹಿತಿ ರವಾನೆ ಮಾಡಿ ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
    ತಾಲೂಕಿನಲ್ಲಿನ ಎಲೆಚುಕ್ಕೆ ರೋಗ ಕಳೆದ 3 ವರ್ಷದಿಂದ ಭಾದಿಸುತ್ತಿದೆ. ಇದರ ನಿವಾರಣೆಯಲ್ಲಿ ರೈತರು ಕೈಸೋತು ಕುಳಿತಿದ್ದಾರೆ. ತೋಟಗಾರಿಕೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಸಕಾಲದಲ್ಲಿ ಮಾಹಿತಿ, ಔಷಧೋಪಚಾರ ಕ್ರಮ ಇತ್ಯಾದಿಗಳ ಬಗ್ಗೆ ತಿಳಿಹೇಳಬೇಕು. ಆ ಕುರಿತು ಚರ್ಚಿಸಲು ತಜ್ಞರ ಸಂವಾದ ಕಾರ್ಯಕ್ರಮ ಆಯೋಜಿಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಒತ್ತಾಯಿಸಿದರು.

    ತಾಲೂಕು ಕೇಂದ್ರದಲ್ಲೇ ವಾಸವಿರಿ: ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲವು ಅಧಿಕಾರಿಗಳು ದೂರದ ಶಿವಮೊಗ್ಗದಲ್ಲಿ ವಾಸ್ತವ್ಯ ಹೂಡಿದ್ದಾರೆ. ದೂರದ ತಿರುಗಾಟ ಮಾಡುವುದರಿಂದ ಇಲ್ಲಿನ ಸಮಸ್ಯೆಗಳ ಬಗ್ಗೆ ಗಮನ ಹರಿಸಲು ಸಮಯ ಸಾಕಾಗುವುದಿಲ್ಲ. ತಾಲೂಕು ಕೇಂದ್ರದಲ್ಲೇ ವಾಸ ಇರಿ. ಈ ಬಗ್ಗೆ ಸಾಕಷ್ಟು ಬಾರಿ ಹೇಳಲಾಗಿದೆ ಎಂದು ಅಸಮಾಧಾನ ಸೂಚಿಸಿದ ಗೋಪಾಲಕೃಷ್ಣ ಬೇಳೂರು, ಇನ್ನೂ ಕೆಲವು ಅಧಿಕಾರಿಗಳು ತಮ್ಮ ಹಠ ಬಿಡದೆ ಶಿವಮೊಗ್ಗದಿಂದ ಓಡಾಡುತ್ತಿದ್ದಾರೆ. ಇಂತಹ ಉದ್ದಟತನ ತೋರುವ ಅಧಿಕಾರಿಗಳನ್ನು ಕೆಲಸದಿಂದ ತೆಗದುಬಿಡಿ ಎಂದು ತಹಸೀಲ್ದಾರ್‌ಗೆ ತಾಕೀತು ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts