More

    ಗೀತಕ್ಕನನ್ನು ಮಹಿಳೆಯರು ಬೆಂಬಲಿಸುವ ವಿಶ್ವಾಸ

    ಶಿಕಾರಿಪುರ: ದೇಶ ನಿರ್ಮಾಣ ಮಾಡುವದು ಜನರಲ್ಲಿ ಭಾವನಾತ್ಮಕ, ಧಾರ್ಮಿಕ ವಿಷಯಗಳನ್ನು ಬಿತ್ತಿದರೆ ದೇಶ ನಿರ್ಮಾಣ ಆಗುವುದಿಲ್ಲ. ಬದಲಾಗಿ ಸಾಮಾಜಿಕ ಕಳಕಳಿಯಿಂದ, ಸಂವಿಧಾನದ ಆಶಯದಂತೆ ಜನರ ನೋವು ನಲಿವುಗಳಿಗೆ ಸ್ಪಂದಿಸುವುದರಿಂದ ಮಾತ್ರ ಸಾಧ್ಯ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

    ಪಟ್ಟಣದಲ್ಲಿ ಮಂಗಳವಾರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬಡವರ ಪರ. ಗ್ಯಾರಂಟಿ ಯೋಜನೆಗಳು ಪಕ್ಷಕ್ಕೆ ಭೀಮಬಲ ತಂದುಕೊಟ್ಟಿವೆ. ಮಹಿಳೆಯರ ನೋವುಗಳಿಗೆ ಸ್ಪಂದಿಸುತ್ತಿದೆ. ಹಾಗಾಗಿ ಮಹಿಳಾ ಮತದಾರರು ಬೆಂಬಲಿಸಲಿದ್ದಾರೆ. ಗೀತಕ್ಕನ ಮೇಲೆ ನಿಮ್ಮ ಆಶೀರ್ವಾದ ಇರಲಿ ಎಂದು ಮನವಿ ಮಾಡಿದರು
    ಸೊರಬ ಮತ್ತು ಶಿಕಾರಿಪುರ ನಮ್ಮ ತಂದೆ ಎಸ್.ಬಂಗಾರಪ್ಪ ಅವರಿಗೆ ಎರಡು ಕಣ್ಣುಗಳಿದ್ದಂತೆ. ಈ ತಾಲೂಕುಗಳ ಮಧ್ಯೆ ಭೇದ ತೋರಿರಲಿಲ್ಲ. ಕೃಷಿಕನ ಮಗನಾಗಿದ್ದ ಬಂಗಾರಪ್ಪಗೆ ರೈತ ಸಮುದಾಯ ಎಂದರೆ ಬಹಳ ಇಷ್ಟ. ಉಚಿತ ವಿದ್ಯುತ್ ನೀಡಿ ರೈತರಿಗೆ ನೆರವಾದರು. ಇಲ್ಲಿನ ನಾಯಕರು ನೀರಾವರಿ ಯೋಜನೆ ಮಾಡಲಾಗಿದೆ ಎನುತ್ತಾರೆ. ಆದರೆ ಆದರೆ ಸೊರಬ ಮತ್ತು ಶಿಕಾರಿಪುರ ನೀರಾವರಿ ಯೋಜನೆಗೆ ದನಿ ಎತ್ತಿ ಸೊರಬದಿಂದ ಶಿಕಾರಿಪುರ ಮಾರ್ಗವಾಗಿ ಶಿವಮೊಗ್ಗದವರೆಗೆ ಪಾದಯಾತ್ರೆ ಮಾಡಿದ್ದು ನಾನು ಎಂದರು.
    ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರನ್ನು ಹೊರತುಪಡಿಸಿದರೆ ನಮ್ಮ ತಂದೆಗೆ ತಾನು ಹಿಂದುಳಿದ ವರ್ಗಗಳ ನಾಯಕ ಎಂಬ ಹೆಮ್ಮೆ ಇತ್ತು. ಅವರೊಬ್ಬ ಸ್ವಾಭಿಮಾನಿ ಮತ್ತು ಜನಪರ ಚಿಂತನೆಯ ರಾಜಕಾರಣಿ. ಭೀಕರ ಬರಗಾಲದ ಸಮಯದಲ್ಲಿ ಉಚಿತ ಬಿತ್ತನೆ ಬೀಜವನ್ನು ಶಿಕಾರಿಪುರ ಹಾಗೂ ಸೊರಬ ತಾಲೂಕಿನಲ್ಲಿ ವಿತರಿಸಿ ರೈತರ ಕಣ್ಮಣಿಯಾದರು. ನನಗೆ ತಂದೆಯವರ ಹೋರಾಟಗಳೇ ಸದಾ ಆದರ್ಶ. ಕಳೆದ ಬಾರಿ ಸೋತಿದ್ದ ಗೀತಕ್ಕ ಈ ಸಲ ಬಹುತದಿಂದ ಗೆಲ್ಲಬೇಕು ಎಂದು ಮಹಿಳಾ ಮತದಾರರು ಸಂಕಲ್ಪ ಮಾಡಿದ್ದಾರೆ. ಯಾವುದೇ ಜಾತಿ, ಮತ, ಧರ್ಮ ಭೇದವಿಲ್ಲದೇ ಸಮಾನತೆ ಮತ್ತು ಸಹಬಾಳ್ವೆ ಸಾರುವ ಏಕೈಕ ಪಕ್ಷ ಕಾಂಗ್ರೆಸ್ ಎಂದು ಹೇಳಿದರು.
    ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ನನ್ನ ತಂದೆಯ ಅಭಿಮಾನಿಗಳು ಬಹಳಷ್ಟು ಸಂಖ್ಯೆಯಲ್ಲಿ ಇದ್ದೀರಿ. ನಿಮ್ಮ ಆಶೀರ್ವಾದ ಸದಾ ನನ್ನ ಮೇಲಿರಲಿ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಮತಗಳ ಅಂತರದಿಂದ ನನ್ನನ್ನು ಆಯ್ಕೆ ಮಾಡುವಿರಿ ಎಂಬ ಭರವಸೆ ಇದೆ. ನಾನು ಮಾಜಿ ಮುಖ್ಯಮಂತ್ರಿ, ಶ್ರೇಷ್ಠ ನಾಯಕ ಎಸ್.ಬಂಗಾರಪ್ಪ ಅವರ ಮಗಳು ಎನ್ನುವುದೇ ನನಗೆ ಹೆಮ್ಮೆ ಎಂದರು.
    ಶಿವರಾಜ್‌ಕುಮಾರ್ ಮಾತನಾಡಿ, ಶಿವಮೊಗ್ಗ ಜಿಲ್ಲೆಯ ಜನರ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಗೀತಾ ನಿಮ್ಮ ಮನೆಮಗಳು. ನೀವು ತವರು ಮನೆಯವರು. ತವರು ಮನೆಯಿಂದ ಜಯದ ಉಡುಗೊರೆ ಕೊಟ್ಟು ಕಳಿಸುವರೆಂಬ ಆತ್ಮವಿಶ್ವಾಸ ನನಗಿದೆ. ಬಂಗಾರಪ್ಪಾಜಿ ಅವರ ಮೇಲಿನ ನಿಮ್ಮ ಅಭಿಮಾನ ಅಪೂರ್ವವಾದುದು ಎಂದರು.
    ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಮಾಜಿ ಎಂಎಲ್‌ಸಿ ಆರ್.ಪ್ರಸನ್ನಕುಮಾರ್, ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್, ಪುರಸಭೆ ಸದಸ್ಯ ನಾಗರಾಜ ಗೌಡ, ಎಂ.ಶ್ರೀಕಾಂತ್, ಜಿಪಂ ಮಾಜಿ ಸದಸ್ಯ ಕಲಗೋಡ ರತ್ನಾಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಾರಿವಾಳದ ಶಿವರಾಂ, ವೀರನಗೌಡ, ಪ್ರಚಾರ ಸಮಿತಿ ಅಧ್ಯಕ್ಷ ಉಮೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts