ಶಿಕ್ಷಣದಿಂದ ಮಕ್ಕಳ ಬದುಕು ಹಸನಾಗಲು ಸಾಧ್ಯ

FotoJet (2)
Published on

 ಸಂಸ್ಕೃತ ಪಾಠಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹಲಸಬೆಲೆ ಎಚ್.ಬಿ.ಗಂಗಾಧರ್ ಅನಿಸಿಕೆ | ಡಾ.ಶಿವಕುಮಾರ ಸ್ವಾಮೀಜಿಯ ಜಯಂತ್ಯುತ್ಸವ

ಮಾಗಡಿ : ಕಾಯಕವೇ ಕೈಲಾಸವೆಂಬ ಬಸವಣ್ಣ ಅವರ ತತ್ವ ಸಿದ್ಧಾಂತ ಪರಿಪಾಲನೆ ಮಾಡಿ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಸಾರಿದ ಶ್ರೇಷ್ಠ ಸಂತ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಎಂದು ಸಂಸ್ಕೃತ ಪಾಠಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹಲಸಬೆಲೆ ಎಚ್.ಬಿ.ಗಂಗಾಧರ್ ಹೇಳಿದರು.

ತಾಲೂಕಿನ ಹಲಸಬೆಲೆ ಗ್ರಾಮಸ್ಥರು ಮಂಗಳವಾರ ಏರ್ಪಡಿಸಿದ್ದ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಗಳ 118ನೇ ಜಯಂತ್ಯುತ್ಸವ ಪ್ರಯುಕ್ತ ಶ್ರೀಗಳ ಭಾವಚಿತ್ರಕ್ಕೆ ಪುಷ್ವನಮನ ಸಲ್ಲಿಸಿ ಮಾತನಾಡಿದ ಅವರು, ಶಿಕ್ಷಣದ ಮೂಲಕ ಅಭಿವೃದ್ಧಿ ಹೊಂದಿದ ಸಮಾಜ ನಿರ್ಮಿಸುವುದು ಶ್ರೀಗಳ ಗುರಿಯಾಗಿತ್ತು. ಶಿಕ್ಷಣದಿಂದ ಮಾತ್ರ ಪ್ರತಿಯೊಬ್ಬರ ಜೀವನ ಹಸನಾಗಲು ಸಾಧ್ಯ ಎಂಬ ಉದ್ದೇಶದಿಂದ ಶಿಕ್ಷಣ ಮತ್ತು ಅನ್ನದಾಸೋಹವನ್ನು ನೀಡುವ ಮೂಲಕ ಜಾತ್ಯತೀತವಾಗಿ ಶೈಕ್ಷಣಿಕ ಅಭಿವೃದ್ಧಿಗೆ ತಮ್ಮ ಜೀವನವನ್ನೇ ದಾರೆ ಎರೆದರು. ಇಂದು ಅದೆಷ್ಟೋ ಮಂದಿ ಜೀವನದಲ್ಲಿ ಬೆಳಕನ್ನು ಚೆಲ್ಲುವ ಮೂಲಕ ಅಜರಾಮರಾಗಿದ್ದಾರೆ ಎಂದರು.ನಾಡಿನ ಬಡಜನರ ಹಸಿವು ನೀಗಿಸಿದರ ಜತೆಗೆ ಜ್ಞಾನದಾಸೋಹ ಮಾಡಿ, ಜೀವನದಲ್ಲಿ ಸದಾ ಬೆಳಕಾಗಿರುವಂತೆ ಜ್ಞಾನದ ಜ್ಯೋತಿ ಹಚ್ಚಿದಂತ ನಾಡುಕಂಡ ಶ್ರೇಷ್ಠ ಸಂತ ಶ್ರೀಗಳು. ಗ್ರಾಮದಲ್ಲಿ ಶ್ರೀಗಳ ಪ್ರತಿಮೆ ನಿರ್ಮಾಣದ ಕನಸಿದ್ದು, ಎಲ್ಲರೂ ಸೇರಿ ಪ್ರತಿಮೆ ನಿರ್ಮಿಸುವ ಕೆಲಸ ಮಾಡಲಾಗುವುದು ಎಂದರು.

12ನೇ ಶತಮಾನದಲ್ಲಿ ಬಸವಣ್ಣನವರು ಯಾವ ಕನಸು ಕಂಡಿದ್ದರು ಅದನ್ನು 21ನೇ ಶತಮಾನದಲ್ಲಿ ಪ್ರತಿ ರೂಪವಾಗಿ ಶ್ರೀಗಳು ಮಾಡಿದರು. ಯುಗದ ಸಂತರಾಗಿ ವಿಶ್ವಕ್ಕೆ ಬೆಳಕಾಗಿದ್ದಾರೆ, ಅವರ ಅತ್ಯಂತ ಸರಳ ನಡೆ, ನುಡಿ, ವರ್ಗ ತಾರತಮ್ಯ ಎಣಿಸದೆ ಹಸಿದ ಹೊಟ್ಟೆ ಮನಸ್ಸುಗಳಿಗೆ ಮಾತೃ ಪ್ರೇಮ ಉಣಬಡಿಸಿ ಮಹಾ ಜದ್ಗುರುಗಳಾಗಿ ತ್ರಿವಿಧ ದಾಸೋಹದ ಮಹಿಮೆಯನ್ನು ಜಗತ್ತಿಗೆ ತಿಳಿಸಿಕೊಟ್ಟಿದ್ದಾರೆ. ಒಬ್ಬ ಉತ್ತಮ ಮಾನವನ ನಿರ್ಮಾಣವೇ ದೈವದ ನಿಜ ಸಂಕಲ್ಪವೆಂದು ಸಾರಲು ಅರಿವಿನ ಗುರುವಾಗಿದ್ದವರು ಸಿದ್ದಗಂಗಾ ಶ್ರೀಗಳು ಎಂದರು.ಆಗಲಕೋಟೆ ವಿಎಸ್‌ಎಸ್‌ಎನ್ ಅಧ್ಯಕ್ಷ ಎಚ್.ವಿ.ಮಹದೇವಯ್ಯ ಮಾತನಾಡಿ, ಸಿದ್ದಗಂಗಾಶ್ರೀಗಳು ತಮ್ಮನ್ನು ತಾವು ಮಹಾ ಜ್ಞಾನಿಯಂತೆ, ಕ್ರಾಂತಿ ಪುರುಷರಂತೆ, ಮೇರು ತಪಸ್ವಿಯಂತೆ ಎಂದೂ ತೋರಿಸಿಕೊಳ್ಳಲಿಲ್ಲ. ಆದರೆ, ಮನುಷ್ಯ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ನಡೆದರೆ ದೈವರ ಅಂಶ ಅವನಲ್ಲಿ ಸಹಜವಾಗಿಯೇ ಪಡಿಮೂಡಬಲ್ಲದು ಎಂಬುದನ್ನು ಸಮಾಜಕ್ಕೆ ಸಾರಿ ಹೇಳಿದ್ದರು. ಅವರು ಬದುಕಿದ ರೀತಿಯೇ ನಮಗೆ ಜ್ಞಾನದ ಸಾರ, ಕ್ರಾಂತಿಯ ಮಹಿಮೆ, ತಪಸ್ಸಿನ ಶಕ್ತಿಯನ್ನು ಪರಿಚಯಿಸಿಕೊಟ್ಟಿದೆ. ಶ್ರೀಗಳ ಇಡೀ ಜೀವನ ಈ ಯುಗದ ಮಹಾನ್ ಸಂದೇಶ ಜ್ಯೋತಿಯಾಗಿ ಶಾಶ್ವತವಾಗಿ ಬೆಳಗುತ್ತಿದೆ ಎಂದರು.ಹಲಸಬೆಲೆ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಎಚ್.ವಿ. ಚಂದ್ರಯ್ಯ ಮಾತನಾಡಿ, ಸರ್ವ ಜನಾಂಗದ ಶಾಂತಿಯ ತೋಟದ ಪರಿಪೂರ್ಣ ನಿರ್ಮಾಣದ ಕಲ್ಪನೆಯ ನೆಲ ಯಾವುದಾದರೂ ಇದ್ದಲ್ಲಿ ಅದು ಸಿದ್ದಗಂಗಾ ಕ್ಷೇತ್ರ ಎಂದು ಪ್ರತಿಯೊಬ್ಬ ಭಕ್ತರೂ ಹೇಳುತ್ತಾರೆ. ಶ್ರೀಗಳು ಜಾತಿ, ಮತ ಬೇಧ ಭಾವವಿಲ್ಲದೆ ಸರ್ವ ಧರ್ಮ, ಜಾತಿಯವರಿಗೂ ಶಿಕ್ಷಣವನ್ನು ನೀಡುವ ಮೂಲಕ ಅಸಂಖ್ಯಾತರ ಬಾಳಿಗೆ ಬೆಳಕಾಗಿದ್ದರು, ಅಕ್ಷರ ದಾಸೋಹದ ಜತೆಗೆ ಅನ್ನದಾಸೋಹ ನೀಡಿ ಸಮ ಸಮಾಜಕ್ಕೆ ನಾಂದಿ ಹಾಡಿದ್ದಾರೆ ಎಂದರು.

ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಮುಖಂಡರಾದ ಎಚ್.ಬಿ.ಶಶಿಧರ್, ಎಚ್.ಎಂ.ಸ್ವಾಮಿ, ಸಿದ್ದಲಿಂಗಮೂರ್ತಿ, ಎಚ್,ಜಿ.ರುದ್ರೇಶ್, ಎವಿ.ಚಂದ್ರಯ್ಯ, ಶಿವರಾಜು, ಶಿವಣ್ಣ, ಅಂಗಡಿ ನಾಗರಾಜು, ನಾಗರಾಜು, ಟೆಂಟ್ ಹೌಸ್ ಮೂರ್ತಿ, ಡೇರಿ ಕಾರ್ಯದರ್ಶಿ ಯೋಗೇಶ್, ಜಯಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net