

ಸರಗೂರು: ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿರುವ ವಿಷ್ಣು ಸೇನಾ ಟ್ರಸ್ಟ್ ಸಂಕಷ್ಟದಲ್ಲಿರುವ ಹಿರಿಯರಿಗೆ ಸಹಾಯಧನ ಕೂಡ ನೀಡುತ್ತಿದೆ ಎಂದು ಸಂಘದ ಅಧ್ಯಕ್ಷ ಬಿ.ವಿ.ರವಿ ತಿಳಿಸಿದರು.
ತಾಲೂಕಿನ ಬಿದರಹಳ್ಳಿ ಗ್ರಾಮದಲ್ಲಿ ವಿಷ್ಣು ಸೇನಾ ಟ್ರಸ್ಟ್ ವತಿಯಿಂದ ಗುರುವಾರ ವಿಷ್ಣು ಸೇನಾ ಟ್ರಸ್ಟ್ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಬಿದರಹಳ್ಳಿ ಗ್ರಾಮದಲ್ಲಿ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಹುಟ್ಟುಹಬ್ಬ ಹಾಗೂ ಪುಣ್ಯ ಸ್ಮರಣೆ ಪ್ರಯುಕ್ತ ಯುವಕರ ವಿದ್ಯಾಭ್ಯಾಸದ ಸಹಾಯಕ್ಕೆ ಮುಂದಾಗಿದ್ದೇವೆ. ಕಳದೆ ಐದು ವರ್ಷಗಳ ಹಿಂದೆ ಸಂಘದಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿದ್ದು, ಗ್ರಾಮದ ಅಭಿವೃದ್ಧಿಗೂ ಕೈ ಜೋಡಿಸಿದ್ದೇವೆ. ಗ್ರಾಮದ ಯಾವುದೇ ಜನಾಂಗದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಹಾಗೂ ಆರೋಗ್ಯದಲ್ಲಿ ಸಮಸ್ಯೆ ಇದ್ದವರಿಗೂ ಟ್ರಸ್ಟ್ ವತಿಯಿಂದ ಸಹಾಯಧನ ನೀಡುತ್ತಿದ್ದೇವೆ ಎಂದರು.
ವಿಷ್ಣು ಅವರ ಹುಟ್ಟು ಹಬ್ಬದ ಪ್ರಯುಕ್ತ ಗ್ರಾಮದಲ್ಲಿ ಕ್ರಿಕೆಟ್, ವಾಲಿಬಾಲ್, ಕಬಡ್ಡಿ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ಟ್ರಸ್ಟ್ ಉಪಾಧ್ಯಕ್ಷ ಸೋಮಣ್ಣ, ಖಜಾಂಚಿ ಕುಮಾರ್, ಗೌರವಾಧ್ಯಕ್ಷ ಶಿವು, ಗ್ರಾಮದ ಯಜಮಾನರು ಅಂಕನಾಯಕ, ಸಣ್ಣನಾಯಕ, ಪುಟ್ಟಸಿದ್ದನಾಯಕ ,ಚಂದ್ರಶೇಖರ್, ಮಲಿನಾಯಕ, ರಾಜು, ಶಿವಕುಮಾರ ಆರಾಧ್ಯ, ಕೆಂಪನಾಯಕ , ರಾಜನಾಯಕ, ಜಾಣನಾಯಕ, ವೆಂಕಟನಾಯಕ ,ಚನ್ನಪ್ಪ , ಚಿನ್ನಯ್ಯ, ವಿಷ್ಣುಸೇನಾ ಟ್ರಸ್ಟ್ ಪದಾಧಿಕಾರಿಗಳು ಇದ್ದರು.