ಸಮಸ್ಯೆಗಳ ನಡುವೆಯೂ ಶೈಕ್ಷಣಿಕ ಸಾಧನೆ

FotoJet
Published on

ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಪ್ಪ ಅಭಿಮತ

ಬಾಗೇಪಲ್ಲಿ: ಹಲವಾರು ಸಮಸ್ಯೆಗಳ ನಡುವೆಯೂ ಮಕ್ಕಳ ಶೈಕ್ಷಣಿಕ ಪಯಣ ಉತ್ತಮವಾಗಿ ಸಾಗುತ್ತಿದ್ದು, ವಿದ್ಯಾರ್ಥಿಗಳು ಸಮರ್ಥವಾಗಿ ಸಮಸ್ಯೆ ನಿಭಾಯಿಸಿದರೆ ಮತ್ತಷ್ಟು ಸಾಧನೆ ಮಾಡಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಪ್ಪ ತಿಳಿಸಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆವೆಸ್ಪೈರ್ ಫೌಂಡೇಷನ್ ಮತ್ತು ಸ್ಕೇಲಾರ್ ಕಂಪನಿಗಳಿಂದ ವಿದ್ಯಾರ್ಥಿನಿಯರ ವೈಯಕ್ತಿಕ ನೈರ್ಮಲ್ಯಕ್ಕೆ ಸಂಬಂಧಿಸಿದ ಸಾಮಗ್ರಿ, ಪಠ್ಯ, ಸಹಪಠ್ಯ ಚಟುವಟಿಕೆಗಳಿಗೆ ಸೇರಿದ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ತಾಲೂಕು ಗಡಿಭಾಗಕ್ಕೆ ಹೊಂದಿಕೊಂಡಿದ್ದು, ಹಲವಾರು ಸಮಸ್ಯೆಗಳ ನಡುವೆಯೂ ಇಲ್ಲಿನ ಮಕ್ಕಳ ಶೈಕ್ಷಣಿಕ ಪಯಣ ಉತ್ತಮವಾಗಿ ಸಾಗುತ್ತಿದೆ. ಅವರ ಸಮಸ್ಯೆಗಳನ್ನು ಸಮರ್ಪಕವಾಗಿ ನಿಭಾಯಿಸಿದರೆ ಮತ್ತಷ್ಟು ಸಾಧನೆ ಮಾಡಲು ಸಾಧ್ಯ. ಹಾಗಾಗಿ ಸಂಸ್ಥೆಯ ಸಿಎಸ್‌ಆರ್ ಅನುದಾನವನ್ನು ಗಡಿಭಾಗದ ಬಡ ವಿದ್ಯಾರ್ಥಿಗಳಿಗೆ ಸ್ಕೇಲಾರ್ ಕಂಪನಿ, ಆವಸ್ಪೈರ್ ಫೌಂಡೇಷನ್‌ನಂತಹ ಹಲವಾರು ಸಂಘ ಸಂಸ್ಥೆಗಳು ವಿನಿಯೋಗಿಸುತ್ತಿರುವುದು ಶ್ಲಾಘನೀಯ ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎನ್. ಸತ್ಯನಾರಾಯಣರೆಡ್ಡಿ ಮಾತನಾಡಿ, ಸ್ಕೇಲಾರ್ ಕಂಪನಿ ಮತ್ತು ಆಸ್ಪೈರ್ ಫೌಂಡೇಷನ್ ಸಂಸ್ಥೆ ಹೆಣ್ಣು ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಸ್ಯಾನಿಟರಿ ಪ್ಯಾಡ್‌ನಂತಹ ಅಗತ್ಯ ಸಾಮಗ್ರಿ ನೀಡಿ, ಆರೋಗ್ಯಕ್ಕೆ ಒತ್ತು ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪಿಎಂಶ್ರೀ ಶಾಲೆಯ ಮುಖ್ಯಶಿಕ್ಷಕ ಆರ್.ಹನುಮಂತರೆಡ್ಡಿ ಮಾತನಾಡಿ, ಈ ಭಾಗದ ವಿದ್ಯಾರ್ಥಿಗಳು ವೈದ್ಯಕೀಯ, ಇಂಜಿನಿಯರಿಂಗ್ ನಂತಹ ಉನ್ನತ ವ್ಯಾಸಂಗದ ಜತೆಗೆ ಐಎಎಸ್, ಕೆಎಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಇದಕ್ಕೆ ಹಲವು ಸಂಘ ಸಂಸ್ಥೆಗಳ ಬೆಂಬಲ, ಸಹಕಾರ ಮತ್ತು ಸೌಲಭ್ಯಗಳನ್ನು ನೀಡುತ್ತಿರುವುದು ಸಂತಸದ ವಿಚಾರ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net