

ಬಿಡದಿ: ವಿದ್ಯಾರ್ಥಿಗಳ ಕಲಿಕಾ ಅಭಿರುಚಿಗೆ ತಕ್ಕಂತೆ ಕಲಿಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜು ತಿಳಿಸಿದರು.
ಬನ್ನಿಕುಪ್ಪೆ (ಬಿ) ಕ್ಲಸ್ಟರ್‌ನ ಗಾಣಕಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಲಿಕಾ ಹಬ್ಬ ಹಾಗೂ ಮೊಬೈಲ್ ಬಿಡಿ ಪುಸ್ತಕ ಹಿಡಿ ವಿಶೇಷ ಚಿಂತನೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಓದು ಬರಹ ಲೆಕ್ಕಾಚಾರದ ಆಚೆಗೆ ಕಥೆ ಹೇಳುವ, ಒಳಾಂಗಣ ಹೊರಾಂಗಣ ಆಟಗಳನ್ನು ಆಡುವ, ಕಲೆ ಕುಶಲತೆ ಆಧಾರಿತ ಸಾಮರ್ಥ್ಯವನ್ನು ಅಭಿವ್ಯಕ್ತಿಸುವ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಪೋಷಕರು ಮತ್ತು ಶಿಕ್ಷಕರು ಗಮನಿಸಿ, ಮಕ್ಕಳ ಅಭಿರುಚಿಗೆ ತಕ್ಕಂತೆ ಅವರ ಪ್ರತಿಭೆಗಳನ್ನು ಪೋಷಿಸಬೇಕಾಗಿದೆ. ಅಂಕ ಗಳಿಕೆಯೊಂದೇ ಜ್ಞಾನದ ದರ್ಶನವಲ್ಲ ಎಂಬುದನ್ನು ಅರಿಯಬೇಕಿದೆ ಎಂದರು.
ತಾನು ಇದೇ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದು, ನಿಮ್ಮೆಲ್ಲ ಚಟುವಟಿಕೆಗಳನ್ನು ಗಮನಿಸುವಾಗ ತನ್ನ ಬಾಲ್ಯವೂ ನೆನಪಿಗೆ ಬರುತ್ತದೆ. ಈ ಕಾರ್ಯಕ್ರಮ ಅತ್ಯಂತ ಸಂತಸ ತಂದಿದೆ ಎಂದರು.
ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕರು (ಅಭಿವೃದ್ಧಿ) ಹಾಗೂ ಪ್ರಾಂಶುಪಾಲ ಪ್ರಭುಸ್ವಾಮಿ ಮಾತನಾಡಿ, ಕಲಿಕಾ ಹಬ್ಬದಲ್ಲಿ ಗಟ್ಟಿ ಓದು ಕಥೆ ಹೇಳುವುದು ಕೈಬರಹ ರಸಪ್ರಶ್ನೆ, ಪಾಲಕರೊಂದಿಗೆ ಚಟುವಟಿಕೆಗಳು, ಸಂತಸದ ಗಣಿತ ಈ ಎಲ್ಲ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಕಲಿಕಾ ಅವಲೋಕನ ಮಾಡಿಕೊಳ್ಳಲಿ. ಇದು ಸ್ಪರ್ಧೆ ಅಲ್ಲ, ಹಬ್ಬ ಎಂದು ಹೇಳಿದರು.
ಬನ್ನಿಕುಪ್ಪೆ (ಬಿ) ಕ್ಲಷ್ಟರ್‌ನ ಸಮೂಹ ಸಂಪನ್ಮೂಲ ಶಿಕ್ಷಕ ಚಿಕ್ಕವೀರಯ್ಯ ಮಾತನಾಡಿ, ಮಕ್ಕಳು, ಪಾಲಕರು ಮೊಬೈಲ್ ಹೆಚ್ಚು ಬಳಸುತ್ತಿದ್ದು, ಪುಸ್ತಕ ಮುಟ್ಟಿ ಅನುಭವಿಸಿ ಓದುವ ಅಭಿರುಚಿ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಬನ್ನಿಕುಪ್ಪೆ ಬಿ ಕ್ಲಸ್ಟರ್ನಲ್ಲಿ ಮೊಬೈಲ್ ಬಿಡಿ ಪುಸ್ತಕ ಹಿಡಿ ಕಾರ್ಯಕ್ರಮವನ್ನು ಆರಂಭಿಸುತ್ತಿದೆ. ಪ್ರತಿ ಶನಿವಾರ ಶಾಲಾ ಅವಧಿಯ ನಂತರ ಕನಿಷ್ಠ ಅರ್ಧ ಗಂಟೆ ಶಾಲಾ ಆವರಣದಲ್ಲಿ ಕನ್ನಡ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಪರಿಚಯಿಸಿ ಓದಿಸುವ ಕಾರ್ಯಕ್ರಮವನ್ನು ಆರಂಭಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಬನ್ನಿ ಕುಪ್ಪೆ ಬಿ.ಗ್ರಾಪಂ ಅಧ್ಯಕ್ಷ ಅನಸೂಯ ರಮೇಶ್, ಸದಸ್ಯರಾದ ರೇವಣಸಿದ್ದಯ್ಯ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಂತೋಷ್, ರೈತ ಸಂಘದ ರಂಗಸ್ವಾಮಿ, ಗಾಣಕಲ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಮೇಶ್, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕೃಷ್ಣಯ್ಯ, ಅಜೀಮ್ ಪ್ರೇಮ್ ಜಿ ಸಂಸ್ಥೆಯ ಶಿವಕುಮಾರ್, ಸೇರಿ ಶಿಕ್ಷಕರು ಹಾಜರಿದ್ದರು.