

ಅವಿನಾಶ ಮೂಡಂಬಿಕಾನ ಬೆಂಗಳೂರು: ರಾಜ್ಯದಲ್ಲಿರುವ 37ಕ್ಕೂ ಅಧಿಕ ಡ್ರಗ್ಸ್ ಪೆಡ್ಲರ್ಗಳ ಪಟ್ಟಿ ಸಿದ್ಧಪಡಿಸಿರುವ ‘ಜಾರಿ ನಿರ್ದೇಶನಾಲಯ’ (ಇಡಿ), ಪ್ರಕರಣದಲ್ಲಿ ಸಾವಿರಾರು ಕೋಟಿ ರೂ. ಅಕ್ರಮ ಹಣ ವರ್ಗಾವಣೆ ನಡೆದಿರುವ ಮಾಹಿತಿ ಖಚಿತವಾದ ಹಿನ್ನೆಲೆಯಲ್ಲಿ ಮತ್ತಷ್ಟು ರಹಸ್ಯ ಭೇದಿಸಲು ಮುಂದಾಗಿದೆ.
ಅಕ್ರಮ ಹಣ ವರ್ಗಾವಣೆ ಮಾಡಿರುವ ಡ್ರಗ್ಸ್ ಪೆಡ್ಲರ್ಗಳ ಮೇಲೆ ಕಣ್ಣಿಟ್ಟಿದ್ದೇವೆ. ಡ್ರಗ್ಸ್ ಮಾಫಿಯಾದಲ್ಲಿ ನಡೆದ ಅಕ್ರಮ ಹಣ ವರ್ಗಾವಣೆ ಬಗ್ಗೆ ಮಾತ್ರ ತನಿಖೆ ನಡೆಸುತ್ತಿದ್ದೇವೆ. ಇದರಲ್ಲಿ ಪೆಡ್ಲರ್ಗಳು ಪ್ರಮುಖ ಪಾತ್ರ ವಹಿಸಿರುವುದು ಕಂಡು ಬಂದಿದೆ. | ಇ.ಡಿ. ಅಧಿಕಾರಿ
ಡ್ರಗ್ಸ್ ದಂಧೆಯಲ್ಲಿ ವಿದೇಶಗಳಿಗೆ ಕೋಟ್ಯಂತರ ರೂ. ಹಣ ವರ್ಗಾಯಿಸಿರುವ ಪೆಡ್ಲರ್ಗಳು ದೊಡ್ಡ ಪ್ರಮಾಣದಲ್ಲಿ ಅಕ್ರಮ ಆಸ್ತಿ ಸಂಪಾದಿಸಿರುವ ಸುಳಿವು ಸಿಕ್ಕಿದೆ. ಸದ್ಯದಲ್ಲೇ 37ಕ್ಕೂ ಅಧಿಕ ಪೆಡ್ಲರ್ಗಳ ಮೇಲೆ ದಾಳಿ ನಡೆಸಿ ಅವರು ಹೊಂದಿರುವ ಭಾರಿ ಪ್ರಮಾಣದ ಚರಾಸ್ತಿ- ಸ್ಥಿರಾಸ್ತಿಯನ್ನು ಮುಟ್ಟುಗೋಲು ಹಾಕಲು ಇಡಿ ಸಜ್ಜಾಗಿದೆ. ರಾಜ್ಯದಲ್ಲಿರುವ ಪೆಡ್ಲರ್ಗಳ ಪೈಕಿ ವಿದೇಶಿಗರ ಸಂಖ್ಯೆಯೇ ಅಧಿಕವಾಗಿದೆ.
ಸ್ಯಾಂಡಲ್ವುಡ್ ಡ್ರಗ್ಸ್ ಜಾಲದ ತನಿಖೆ ನಡೆಸುತ್ತಿದ್ದಾಗ ಪೆಡ್ಲರ್ಗಳ ಅಸಲಿ ಬಣ್ಣ ಇಡಿ ಗಮನಕ್ಕೆ ಬಂದಿದೆ. ಡ್ರಗ್ಸ್ ಜಾಲದಲ್ಲಿ ತೊಡಗಿ ಸಾವಿರಾರು ಕೋಟಿ ರೂ. ವಹಿವಾಟು ನಡೆಸಿರುವ ಸೂತ್ರದಾರರು ಮಾತ್ರ ತಮ್ಮ ಹೆಸರು ಎಲ್ಲೂ ತುಳುಕಿ ಹಾಕಿಕೊಳ್ಳದಂತೆ ಎಚ್ಚರಿಕೆ ವಹಿಸಿದ್ದಾರೆ. ಕರ್ನಾಟಕದಲ್ಲಿ ಡ್ರಗ್ಸ್ ಪೆಡ್ಲಿಂಗ್ ಮಾಡಿರುವ ಹೊರ ರಾಜ್ಯದ ಪ್ರಮುಖ ಪೆಡ್ಲರ್ಗಳು ಸದ್ಯ ತಲೆಮರೆಸಿಕೊಂಡಿದ್ದು, ಅವರಿಗಾಗಿ ‘ಇಡಿ’ ಹುಡುಕಾಟ ನಡೆಸುತ್ತಿದೆ.
ಆನ್ಲೈನ್ನಲ್ಲಿ ವ್ಯವಹಾರ
ಬಾಲಿವುಡ್, ಸ್ಯಾಂಡಲ್ವುಡ್ ನಟ- ನಟಿಯರು ಹಾಗೂ ಅವರ ಆಪ್ತರಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಪೆಡ್ಲರ್ಗಳು ಕುಬೇರರಾಗಿದ್ದಾರೆ. ಎಂಡಿಎಂಎ, ಹ್ಯಾಶಿಶ್, ಎಲ್ಎಸ್ಡಿ, ಅಫೀಮ್ ಬ್ರೌನ್ ಶುಗರ್ ಅನ್ನು ವಿದೇಶಗಳಿಂದ ಹಡಗು, ಪೋಸ್ಟ್, ವಾಯುಮಾರ್ಗದಲ್ಲಿ ತರಿಸಿಕೊಂಡು ಸ್ಥಳೀಯರಿಗೆ ಆನ್ಲೈನ್ ಮೂಲಕ ಮಾರಾಟ ಮಾಡುತ್ತಿದ್ದರು. ಸ್ಥಳೀಯ ಪೆಡ್ಲರ್ಗಳು ಈ ಡ್ರಗ್ಸ್ ಅನ್ನು ಪಾರ್ಟಿಗಳು, ಪಬ್ಗಳು, ನಿರ್ಜನ ಪ್ರದೇಶಗಳಲ್ಲಿ ಗ್ರಾಹಕರಿಗೆ ಪೂರೈಸುತ್ತಿದ್ದರು. ಆನ್ಲೈನ್ನಲ್ಲೇ ಎಲ್ಲ ವಹಿವಾಟು ನಡೆಯುತ್ತಿದ್ದ ಹಿನ್ನೆಲೆಯಲ್ಲಿ ದೊಡ್ಡ ದೊಡ್ಡ ಪೆಡ್ಲರ್ಗಳ ಮಾಹಿತಿ ಇನ್ನೂ ಬೆಳಕಿಗೆ ಬಂದಿಲ್ಲ. ಅವರನ್ನು ಪತ್ತೆ ಹಚ್ಚಿದರಷ್ಟೆ ಡ್ರಗ್ಸ್ ಸರಬರಾಜಿನ ಮೂಲ ಮಾಹಿತಿ ಸಿಗಲಿವೆ ಎಂದು ಇಡಿ ಮೂಲಗಳು ತಿಳಿಸಿವೆ.
ವಿದೇಶಿ ಪೆಡ್ಲರ್ಗಳ ಹಾವಳಿ
ಬೆಂಗಳೂರು, ಚೆನ್ನೈ, ಆಂಧ್ರ ಪ್ರದೇಶ ಸೇರಿ ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ವಿದೇಶಿ ಪೆಡ್ಲರ್ಗಳು ನೆಲೆಯೂರಿದ್ದಾರೆ. ಪ್ರವಾಸಿ ವೀಸಾದಡಿ ನಗರಗಳಿಗೆ ಬಂದು ಸದ್ದಿಲ್ಲದೇ ಡ್ರಗ್ಸ್ ದಂಧೆಯಲ್ಲಿ ಕೋಟ್ಯಂತರ ರೂ. ವಹಿವಾಟು ನಡೆಸಿರುವುದು ಇಡಿ ಗಮನಕ್ಕೆ ಬಂದಿದೆ.
ಪೆಡ್ಲರ್ಗೆ 50 ಲಕ್ಷ ರೂ.!
ಎನ್ಸಿಬಿಯಿಂದ ಬಂಧನಕ್ಕೊಳಗಾದ ಮೊಹಮದ್ ಅನೂಪ್ಗೆ ಕೇರಳ ಚಿನ್ನ ಸ್ಮಗ್ಲಿಂಗ್ ಕೇಸ್ನಲ್ಲಿ ಸಿಕ್ಕಿಬಿದ್ದಿರುವ ಕೇರಳದ ಮಾಜಿ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಪುತ್ರ ಬಿನೀಶ್ ಕೊಡಿಯೇರಿ ಕಮ್ಮನಹಳ್ಳಿಯಲ್ಲಿ ರೆಸ್ಟೋರೆಂಟ್ ತೆರೆಯಲು 50 ಲಕ್ಷ ರೂ. ನೀಡಿದ್ದ. ಅನೂಪ್ 2013ರಿಂದ ಡ್ರಗ್ಸ್ ಪೆಡ್ಲಿಂಗ್ನಲ್ಲಿದ್ದು, ಆನ್ಲೈನ್ ಮೂಲಕ ಹೊರ ರಾಜ್ಯದ ಪೆಡ್ಲರ್ಗಳಿಂದ ಭಾರಿ ಪ್ರಮಾಣದ ಡ್ರಗ್ಸ್ ತರಿಸಿ ಸ್ಥಳೀಯರಿಗೆ ನೀಡುತ್ತಿದ್ದ. ವಾರ್ಷಿಕವಾಗಿ 3-4 ಲಕ್ಷ ರೂ. ಸಂಪಾದಿಸುತ್ತಿದ್ದ. ದೊಡ್ಡ ಡ್ರಗ್ ಪೆಡ್ಲರ್ಗಳ ಬಗ್ಗೆ ಈತನಿಗೆ ಹೆಚ್ಚಿನ ಮಾಹಿತಿಯಿಲ್ಲ ಎಂದು ಇಡಿ ತಿಳಿಸಿದೆ.